ಹವಂಬಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ


ಸಂಜೆವಾಣಿ ವಾರ್ತೆ
ಬಳ್ಳಾರಿ. ಜೂ,2-  ನಗರದ ಹಾವಂಬಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು* ಮಕ್ಕಳಿಗೆ ಅಕ್ಷರ ಟೋಪಿ ಹಾಕಿ, ಹೂ,ಸಿಹಿ, ಉಚಿತ ಪಠ್ಯಪುಸ್ತಕ,ಸಮವಸ್ತ್ರ ನೀಡುವ ಮೂಲಕ ನೆರವೇರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಳ್ಳಾರಿ ಪಶ್ಚಿಮ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ ಸಿದ್ಧಲಿಂಗಮೂರ್ತಿಯವರು ವಹಿಸಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಹೆಚ್ಚು ಮಕ್ಕಳು ಭಾಗವಹಿಸಿರುವುದನ್ನು ನೋಡಿ ಸಂತಸ ವ್ಯಕ್ತಪಡಿಸಿದರು. ಹಾಗೆಯೇ ಇಲಾಖೆಯ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಈ ಶಾಲೆಯು ಮುಂಚೂಣಿಯಲ್ಲಿದೆ. ಕನ್ನಡ ಮಾಧ್ಯಮಕ್ಕೆ ಹೆಚ್ಚಾಗಿ ಆದ್ಯತೆ ನೀಡಿ ಎನ್ನುವ ಎಸ್ ಡಿ ಎಂ ಸಿ ಉಪಾಧ್ಯಕ್ಷರ ಮನವಿಗೆ ಕನ್ನಡ ಮಾಧ್ಯಮದ ಜೊತೆಯಲ್ಲಿಯೇ ಇಂಗ್ಲಿಷ್ ಮಾಧ್ಯಮ ನಡೆಸುವುದರಿಂದ ಕನ್ನಡ ಭಾಷಾ ಮಾಧ್ಯಮಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.
ಬಳ್ಳಾರಿ ಪಶ್ಚಿಮ ವಲಯದ ನೋಡಲ್ ಅಧಿಕಾರಿಗಳಾದ ಗಂಗಾಧರ ಇವರು ಶಾಲಾ ಪ್ರಾರಂಭೋತ್ಸವಕ್ಕೆ ಮತ್ತು ಶಾಲೆಗೆ ಗ್ರಾಮೀಣ ಮಕ್ಕಳು ಭಾಗವಹಿಸುವುದೇ ಕಷ್ಟ ಸಾಧ್ಯ ಅಂತಹದರಲ್ಲಿ ನಗರ ಭಾಗದ ಮಕ್ಕಳು ಹೆಚ್ಚಾಗಿ ಭಾಗವಹಿಸಿರುವುದನ್ನು ನೋಡಿದರೆ ಈ ಶಾಲೆಯ ಮುಖ್ಯ ಗುರುಗಳು ಮತ್ತು ಸಿಬ್ಬಂದಿ ವರ್ಗದವರ ಪರಿಶ್ರಮ ವ್ಯಕ್ತವಾಗುತ್ತದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಇಲಾಖೆಯ ಅಧಿಕಾರಿಗಳ ಶಾಲಾ ಸಿಬ್ಬಂದಿ ವರ್ಗದವರ ಸಹಕಾರದಿಂದ ಯೋಜನೆಗಳನ್ನು ಪಾರದರ್ಶಕವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಹೀಗೆಯೇ ನಮ್ಮ ಶಾಲೆಗೆ ವಿವಿಧ ಸಂಪನ್ಮೂಲಗಳನ್ನು ಒದಗಿಸುವುದರ ಮೂಲಕ ನಮ್ಮ ಶಾಲೆಗೆ ಬರುವ ಮಕ್ಕಳ ಶಯೋಭಿವೃದ್ಧಿಯನ್ನು ಸಾಧಿಸಲು ನಿರಂತರವಾಗಿ ನಮ್ಮೊಂದಿಗಿರಬೇಕೆಂದು ಶಾಲೆಯ ಮುಖ್ಯ ಗುರುಗಳಾದ ನಿಂಗಪ್ಪ ಸಿ ಇವರು ಅಧಿಕಾರಿಗಳಿಗೆ ಮನವಿಯನ್ನು ಪ್ರಾಸ್ತಾವಿಕ ನುಡಿಯಲ್ಲಿ ಪ್ರಸ್ತಾಪಿಸಿದರು.
ಶಿಕ್ಷಕಿಯಾದ ಶ್ರೀಮತಿ ವಿಜಯಲಕ್ಷ್ಮಿ ಇವರು ಪ್ರಾರ್ಥನೆ ಗೀತೆ ಹಾಡಿದರು. ಶಿಕ್ಷಕಿಯಾದ ಶ್ರೀಮತಿ ಜಯವ್ವ ಎಸ್ ಕಾರಬಾರಿ ಸ್ವಾಗತಿಸಿದರು. ಶಿಕ್ಷಕಿಯಾದ ಶ್ರೀಮತಿ ಅರನ್ ಜ್ಯೋತಿ ವಂದನಾರ್ಪಣೆ ಮಾಡಿದರು. ಮತ್ತೋರ್ವ ಶಿಕ್ಷಕಿಯಾದ ಶ್ರೀಮತಿ ಬಿ ಶೀಲಾರವರು ಕಾರ್ಯಕ್ರಮದ ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ ಪಶ್ಚಿಮ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ ಸಿದ್ದಲಿಂಗ ಮೂರ್ತಿ, ನೋಡಲ್ ಅಧಿಕಾರಿಗಳಾದ ಮತ್ತು ಡಯಟ್ ಉಪನ್ಯಾಸಕರಾದ ಗಂಗಾಧರ, ಕನ್ನಡ ಭಾಷಾ ವಿಷಯ ಪರಿವೀಕ್ಷಕರಾದ ಸತ್ಯನಾರಾಯಣ, ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕರಾದ ವಿರೇಶಪ್ಪ, ಸಿಆರ್‌ಪಿ ಸಿದ್ದಪ್ಪ ಗೋನಾಳ್, ಮುಖ್ಯ ಗುರುಗಳಾದ ಮತ್ತು ಬಳ್ಳಾರಿ ಜಿಲ್ಲಾ ಘಟಕದ ಶಿಕ್ಷಕರ ಸಂಘದ ಅಧ್ಯಕ್ಷರಾದ ನಿಂಗಪ್ಪ ಸಿ,  ಎಸ್ ಡಿ ಎಂ ಸಿ ಅಧ್ಯಕ್ಷರಾದ ಟಿ ನಾಗಪ್ಪ, ಉಪಾಧ್ಯಕ್ಷರಾದ ನೇತಿ ರಘುರಾಮ್ ,ಶಿಕ್ಷಕರು, ಅಡುಗೆಯವರು, ವಿದ್ಯಾರ್ಥಿಗಳು ಮತ್ತು ಇತರರಿದ್ದರು.