
(ಸಂಜೆವಾಣಿ ವಾರ್ತೆ)
ನವಲಗುಂದ,ಆ11 : ತಾಲ್ಲೂಕಿನ ಹಲವು ಕಡೆ ಗುರುವಾರ ಸಂಜೆ ಸುರಿದ ಮಳೆಗೆ ಸಣ್ಣ,ಸಣ್ಣ ಹಳ್ಳ,ಕೊಳ್ಳ ಸರುವುಗಳು ತುಂಬಿ ಹರಿಯುತ್ತಿದ್ದು ತಾಲ್ಲೂಕಿನ ಇಬ್ರಾಹಿಂಪೂರ ರಸ್ತೆಯಲ್ಲಿನ ಹಳ್ಳವು ತುಂಬಿ ಹರಿಯುತ್ತಿರುವುದರಿಂದ ನವಲಗುಂದ ಇಬ್ರಾಹಿಂಪುರ ಬಸ್ ಸಂಚಾರ ಸ್ಥಗಿತಗೊಂಡಿದೆ.
ಹಳ್ಳದ ಪಕ್ಕದಲ್ಲಿಯೇ ಎಸ್ ಎಸ್ ಬಾಗಿ ಶಾಲೆಯಿದ್ದು ಮಕ್ಕಳು ಅಗಸನಹಳ್ಳ ಹಾಗೂ ಅಂಬಲಿ ಹಳ್ಳದ ಮದ್ಯದಲ್ಲಿ ಸಿಲುಕಿ ಮನೆಗೆ ತೆರಳಲು ರಸ್ತೆಗಾಗಿ ಪರದಾಡುವಂತಹ ಸ್ಥಿತಿ ಬಂದೊದಗಿದೆ.
ಕಳೆದ ಹಲವಾರು ವರ್ಷಗಳಿಂದ ಮಳೆಗಾಲದಲ್ಲಿ ಈ ಸಮಸ್ಯೆ ತಲೆದೂರುತ್ತಿದ್ದರೂ ಕ್ಯಾರೆ ಎನ್ನದ ಆಡಳಿತ ವರ್ಗಕ್ಕೆ ಗ್ರಾಮಸ್ಥರು ,ವಿದ್ಯಾರ್ಥಿಗಳು ಹಾಗೂ ರೈತರು ಹಿಡಿಶಾಪ ಹಾಕುವಂತಾಗಿದೆ.
ಪ್ರತಿವರ್ಷ ಅದ್ವಾನ ಸೃಷ್ಠಿಸುವ ಈ ಹಳ್ಳಕ್ಕೆ ಕೆಳ ಸೇತುವೆ ಇರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಹಳ್ಳದ ಸ್ವಲ್ಪ ದೂರದಲ್ಲಿರುವ ಶಾಲೆಯ ಮಕ್ಕಳು ಪದೆ,ಪದೆ ಇಂತಹ ಸಂದಿಗ್ದ ಸ್ಥಿತಿಗೆ ಸಿಲುಕುವಂತಾಗಿದೆ.
ಗುರುವಾರ ಸುರಿದ ಮಳೆಯಿಂದಾಗಿ ಇಬ್ರಾಹಿಂಪೂರ ಗ್ರಾಮಕ್ಕೆ ತೆರಳುವ ಬಸ್ ಹಾಗೂ ಶಾಲಾ ವಾಹನ ಹಳ್ಳದ ಪಕ್ಕದಲ್ಲಿಯೇ ನಿಲ್ಲುವಂತಾಗಿದ್ದು, ಇನ್ನು ಹಳ್ಳದಾಚೆಗೆ ಕೃಷಿ ಚಟುವಟಿಕೆಗಳಿಗೆ ತೆರಳಿದ್ದ ರೈತರೂ ಹಳ್ಳದ ಹರಿವು ಕಡಿಮೆಯಾಗುವವರೆಗೆ ಅಲ್ಲಿಯೇ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು,
ಶಾಲಾ ಅವಧಿಯ ನಂತರ ಮನೆಗೆ ತೆರಳ ಬೇಕಾಗಿದ್ದ ಮಕ್ಕಳು ಮಳೆ ನಿಂತು ಹಳ್ಳದ ಹರಿಯುವ ಕಡಿಮೆಯಾಗುವವತೆಗೂ ಕಾಯ್ದು ಕುಳಿತುಕೊಳ್ಳುವಂತಾಗಿತ್ತಲ್ಲದೇ ಶಾಲಾ ಮಕ್ಕಳನ್ನು ಟ್ರಾಕ್ಟರ್ ಸಹಾಯದಿಂದ ಮನೆಗೆ ಕರೆತರುವ ಕಾರ್ಯ ನಡೆಯಿತು.
ಪ್ರತಿವರ್ಷ ಇದೇ ನಡೆಯುತ್ತಿದ್ದು ಈ ಸಮಸ್ಯೆಗೆ ಮುಕ್ತಿದೊರಕುವುದಾದರೂ ಎಂದು ಪಾಲಕರು, ರೈತರು ಹಾಗು ಪ್ರಯಾಣಿಕರು ಕೇಳುವಂತಾಗಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಸೇತುವೆ ಮೇಲ್ದರ್ಜೆಗೇರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ.