ಹಳ್ಳಿ ಸೊಗಡಿನಲ್ಲಿ ನಾಗರ ಪಂಚಮಿ ಸಂಭ್ರಮಾಚರಣೆ

ಬೆಂಗಳೂರು, ಜು.೩೦ : ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅತ್ಯಂತ ಸಡಗರದಿಂದ ಆಚರಿಸುವ ನಾಗರಪಂಚಮಿ ಹಬ್ಬವನ್ನು ನಗರದಲ್ಲಿ ಇಂದು ವೈಭವದಿಂದ ಆಚರಿಸಲಾಯಿತು.
ಉತ್ತರ ಕರ್ನಾಟಕ ಮೂಲದ ಮಹಿಳೆಯರು ಇಂದು ಮಾನ್ಯತಾ ಟೆಕ್ ಪಾರ್ಕ್ ಬಳಿಯ ಮಾನ್ಯತಾ ರೆಸಿಡೆನ್ಸಸ್‌ನಲ್ಲಿ ಆಯೋಜಿಸಿದ್ದ ವರ್ಣ ರಂಜಿತ ಕಾರ್ಯಕ್ರಮದಲ್ಲಿ ಸೇರಿದ ನೂರಾರು ಮಹಿಳೆಯರು ಗ್ರಾಮೀಣ ಶೈಲಿಯಲ್ಲಿ ಸೀರೆ ತೊಟ್ಟು, ಗ್ರಾಮೀಣ ನೃತ್ಯಗಳನ್ನು ಮಾಡುತ್ತಾ ಆಟಗಳನ್ನು ಆಡುತ್ತಾ ದಿನವಿಡಿ ಸಂಭ್ರಮಿಸಿದರು.
ಗೋ ಪೂಜೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದ ಮಹಿಳೆಯರು ನಾಗರ ಪಂಚಮಿ ಹಬ್ಬದ ಪ್ರಯುಕ್ತ ಮಣ್ಣಿನಿಂದ ಮಾಡಿದ ಹಾವಿಗೆ ಹಾಲೆರೆದು ಪೂಜಿಸಿದರು. ಬಣ್ಣ ಬಣ್ಣದ ಸೀರೆ ತೊಟ್ಟಿದ್ದ ನೀರೆಯರು ಜೋಕಾಲಿ,ಗುಳ್ಳವನ ಆಟ, ಕೋಲಾಟ, ಲಿಂಬು ಚಮಚೆ ಓಟ, ಬುಗುರಿ ಸ್ಪರ್ಧೆ, ಒಡಪ ಹೇಳುವ ಸ್ಪರ್ಧೆ, ಪುಗಡಿ ಆಟ, ಇಲಕಲ್ ಸೀರೆ ಫ್ಯಾಶನ್ ಶೋ ಹೀಗೆ ಹತ್ತಾರು ಗ್ರಾಮೀಣ ಕ್ರೀಡೆಗಳಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸಿದರು.
ಮಾಜಿ ಸಚಿವೆ ರಾಣಿ ಸತೀಶ್ ದೀಪ ಬೆಳಗಿಸುವುದರೊಂದಿಗೆ ಆಟೋಟ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಹಿರಿಯ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ ಅವರ ಪತ್ನಿ ಊರ್ಮಿಳಾ ಕಳಸದ ನೇತೃತ್ವದಲ್ಲಿ ಅಧಿಕಾರಿಗಳಾದ ಅಪರ್ಣ ಪಾವುಟೆ, ಸವಿತಾ ಬೆಳಗಲಿ,ವಿವಿಧ ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ಶೋಭಾ ರಮೇಶ್, ಪ್ರತಿಭಾ ಕೋಳಿವಾಡ, ರೇಣುಕಾ ಗೌಡರ, ಸವಿತಾ ವೈ ಆರ್ ಪಾಟೀಲ್ ಅವರನ್ನೊಳ್ಳಗೊಂಡ ತಂಡ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ವೀಣೆ ನುಡಿಸುವುದು, ಗಾಯನ, ಹಳ್ಳಿ ನೃತ್ಯ ಹೀಗೆ ಹತ್ತು ಹಲವು ಮನರಂಜನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.