ಹಳ್ಳಿಯಿಂದ ದಿಲ್ಲಿಯವರೆಗೆ ಹೆಸರು ಮಾಡಿದ ನಾಯಕ ಅಜಾತ ಶತ್ರು ಧರಂಸಿಂಗ್ 84 ನೇ ಹುಟ್ಟುಹಬ್ಬ

ಕಲಬುರಗಿ :ಡಿ.25:ಇಂದು ಡಿ.25, ಶುಕ್ರವಾರ ಮಾಜಿ ಸಿಎಂ ದಿ. ಡಾ. ಎನ್ ಧರಂಸಿಂಗ್ 84 ನೇ ಜನ್ಮದಿನೋತ್ಸವ, ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿಯಲ್ಲಿ ಕುಟುಂಬ ವರ್ಗದವರು ಸರಳವಾಗಿ ಪೂಜಾದಿಗಳೊಂದಿಗೆ ಮುತ್ಸದ್ದಿ ನಾಯಕನ ಜನ್ಮದಿನ ಆಚರಿಸುತ್ತಿದ್ದಾರೆ. ಕಷ್ಟದಲ್ಲಿರುವವರ ಕೈ ಹಿಡಿಯುವ ಧರಂಸಿಂಗ್ ಸ್ವಭಾವವೇ ಅವರನ್ನು ಇಂದಿಗೂ ಜನಮನದಲ್ಲಿ ಉಳಿಯುವಂತೆ ಮಾಡಿದೆ.
ಅಜಾತ ಶತ್ರು ಎಂದೇ ಹೆಸರುವಾಸಿಯಾಗಿದ್ದ, ಕರ್ನಾಟಕ ರಾಜ್ಯ ಕಂಡ ‘ಬಡವರ’ ಮುಖ್ಯಮಂತ್ರಿ ದಿ. ಡಾ. ಎನ್ ಧರಂಸಿಂಗ್ ಡಿ. 25, 1936 ರಲ್ಲಿ ಜೇವರ್ಗಿ ತಾಲೂಕಿನ ನೆಲೋಗಿಯಲ್ಲಿ ಜನಿಸಿದವರು. ಇಂದು ಅವರ 84 ನೇ ಜನ್ಮದಿನ, ನಗರಸಭೆ ಸದಸ್ಯರಿಂದ ಹಿಡಿದು ರಾಜ್ಯದ ಸಿಎಂ ಗಾದಿಯವರೆಗೂ 50 ವರ್ಷಗಳ ಸುದೀರ್ಘ ರಾಜಕೀಯ ಜೀವನವನ್ನು ನಡೆಸಿದವರು.
ಎಲ್ಲಾ ರಾಜಕಾರಣಿಗಂತಲ್ಲ ಧರಂಸಿಂಗ್ ರಾಜಕೀಯ ಬದುಕು, ಅವರ ರಾಜಕೀಯ ಜೀವನ ಬಲು ರೋಚಕ, ಜನಪರ ಹಾಗೂ ರಂಗು ರಂಗಿನದ್ದು ಎಂದು ಅವರನ್ನು ಹತ್ತಿರದಿಂದ ಕಂಡವರು ಇಂದಿಗೂ ಸ್ಮರಿಸುತ್ತಾರೆ.
ಹಿಂದಿ ಶಿಕ್ಷಕ ವೃತ್ತಿಯ ಜೊತೆಗೇ ವಕೀಲರಾಗಿದ್ದ ಧರಂಸಿಂಗ್ 1972 ರಲ್ಲಿ ಜೇವರ್ಗಿ ಅಸೆಂಬ್ಲಿಯಿಂದ ಸ್ಪರ್ಧಿಸಿ ಗೆದ್ದವರು ಹಿಂದಿರುಗಿ ನೋಡಲೇ ಇಲ್ಲ, ಸತತ ಗೆಲ್ಲುತ್ತಲೇ ಜನಾನುರಾಗಿ ಜನನಾಯಕರಾಗಿ ಸರ್ವರನ್ನು ಆವರಿಸಿದವರು.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮ ಹುಟ್ಟೂರು. ಪ್ರಾಥಮಿಕ, ಪ್ರೌಢ, ಉನ್ನತ ಶಿಕ್ಷಣವನ್ನು ಕಲಬುರಗಿಯಲ್ಲಿ ಮುಗಿಸಿ ನಂತರ ಹೈದರಾಬಾದ್ ನಲ್ಲಿ ಉನ್ನತ ಕಾನೂನು ಪದವಿ ಪಡೆದು ಕಲಬುರಗಿಯಲ್ಲೇ ವಕೀಲರಾಗಿಯೂ ಸೇವೆ ಸಲ್ಲಿಸಿದವರು.
ಕಾಂಗ್ರೆಸ್ ಪಕ್ಷದಲ್ಲಿ ದಿ. ಇಂದಿರಾ ಗಾಂಧಿಯವರಿಗೆ ಬಲು ಹತ್ತಿರದವರಾಗಿದ್ದ ಧರಂಸಿಂಗ್ 1972 ರಲ್ಲಿ ಜೇವರ್ಗಿ ಅಸೆಂಬ್ಲಿ ಕಣಕ್ಕಿಳಿದು ಗೆಲ್ಲುವುದರೊಂದಿಗೆ ಸತತ 11 ಬಾರಿ ಗೆಲ್ಲುತ್ತಲೇ ನಡೆದರು. ಇದರಿಂದಾಗಿ ಅವರನ್ನು ಜನ ಗೆಲ್ಲುವ ಕುದುರೆ ಎಂದು ಪ್ರೀತಿಯಿಂದ ಕರೆಯುತ್ತಿದ್ದರು.
ಧರಂಸಿಂಗ್ ತಮ್ಮ ರಾಜಕೀಯ ಬದುಕಲ್ಲಿ ಎದುರಿಸಿದ 13 ಸಾರ್ವತ್ರಿಕ ಚುನಾವಣೆಯಲ್ಲಿ 11 ಬಾರಿ ಗೆಲುವು ಸಾಧಿಸಿದವರು. 1972 ರ ಪ್ರಥಮ ಚುನಾವಣೆಯಿಂದ 10 ಚುನಾವಣೆ ಸತತ ಜೇವರ್ಗಿಯಿಂದಲೇ ಗೆಲುವು ಸಾಧಿಸಿ ಜನಮನ ಗೆದ್ದವರು.
ಕಲಬುರಗಿ ಮಹಾನಗರ ಪಾಲಿಕೆ ಸದಸ್ಯರಾಗಿ, ನಿರಂತರ 8 ಬಾರಿ ಜೇವರ್ಗಿ ಶಾಸಕರಾಗಿ, ಕಲಬುರಗಿ, ಬೀದರ್ ಸಂಸದರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿರುವ ಧರಂಸಿಂಗ್ ಸರ್ಕಾರದಲ್ಲಿ ಸಚಿವರಾಗಿ ಗೃಹ, ಲೋಕೋಪಯೋಗಿ, ಕಂದಾಯ, ಅಬಕಾರಿ, ಸಮಾಜ ಕಲ್ಯಾಣ ಮತ್ತು ನಗರಾಭಿವೃದ್ಧಿ ಸೇರಿದಂತೆ ಪ್ರಮುಖ ಖಾತೆ ನಿಭಾಯಿಸಿದವರು.
@12bc = ಧರಂಸಿಂಗ್ ಸಾಧನೆ ಮೈಲಿಗಲ್ಲುಗಳು ಹಲವು
ಕಲ್ಯಾಣ ನಾಡಿಗೆ ಒಲಿದು ಬಂದಿರುವ ಸಂವಿಧಾನದ ಕಲಂ 371 ಅನುಚ್ಛೇದದ ರೂವಾರಿಗಳೂ ಆಗಿದ್ದ ಧರಂಸಿಂಗ್ ಈ ಭಾಗದ ಹಿಂದುಳಿದಿರುವಿಕೆ ಹೋಗಲಾಡಿಸಲು ತಾವೇ ಅಧ್ಯಯನ ಮಾಡಿ ನೀಡದ್ದ ವರದಿಯಿಂದಲೇ ಹೈ- ಕ ಪ್ರದೇಶಾಭಿವೃದ್ಧಿ ಮಂಡಳಿ ರಚನೆಯಾಗಿ ಇದೀಗ ಅದು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಎಂದು ಅಸ್ತಿತ್ವದಲ್ಲಿದೆ. ಇದಲ್ಲದೆ ಕಲಬುರಗಿಗೆ ಹೈಕೋರ್ಟ್ ಬರುವಲ್ಲಿ ಧರಂಸಿಂಗ್ ಪಾತ್ರ ಬಲು ಹಿರಿದು. ಬೀದರ್- ಶ್ರೀರಂಗ ಪಟ್ಟಣ ರಾಷ್ಟ್ರೀಯ ಹೆದ್ದಾರಿ ಯೋಜನೆಯಲ್ಲೂ ಇವರ ಪಾತ್ರ ಹಿರಿದು.
ರಾಜಕೀಯದಲ್ಲಿ ಹಲವಾರು ಮಜಲುಗಳನ್ನು ಹತ್ತಿ ಜನಪರ ಕೆಲಸಗಳಿಗೆ ಚಾಲನೆ ನೀಡಿದ ಧರಂಸಿಂಗ್ ಅವರ ಧರ್ಮಪತ್ನಿ ಪ್ರಭಾವತಿ ಧರಂಸಿಂಗ್ ಅವರೂ ಪತಿಯೊಂದಿಗೆ ಸಾಧನೆ ದಾರಿಯಲ್ಲಿ ಜೊತೆಯಾಗಿಯೇ ಹೆಜ್ಜೆ ಹಾಕಿದವರು. ಇವರ ಪುತ್ರ ಡಾ. ಅಜಯ್ ಸಿಂಗ್ ತಂದೆಯ ಉತ್ತರಾಧಿಕಾರಿಯಾಗಿ ಜೇವರ್ಗಿ ಶಾಸಕರಾಗಿದ್ದು, ಇದೀಗ ಸದನದಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕರು, ಇನ್ನೋರ್ವ ಪುತ್ರ ವಿಜಯ ಸಿಂಗ್ ಬೀದರ್ ಇಲ್ಲೆಯ ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ.
ತಮ್ಮ ಅನುಯಾಯಿಗಳೊಂದಿಗೆ ಸದಾಕಾಲ ನಗುತ್ತಲೇ ಕೆಲಸದಲ್ಲಿ ತೊಡಗುತ್ತಿದ್ದ ಧರಂಸಿಂಗ್ ಅವರಂತೆ ರಾಜಕೀಯ ಮಾಡೋದು ಒಂದು ಕಲೆ ಎಂದು ಈಗಲೂ ಅವರ ಓರಗೆಯ ರಾಜಕಾರಣಿಗಳು ಹೇಳುತ್ತಿರುತ್ತಾರೆ. ತಮ್ಮ ಬಳಿ ಬರುವ ಯಾರನ್ನೂ ನಿರಾಶೆಯಿಂದ ಕಳುಹಿಸಿದೆ ಅವರೊಂದಿಗೆ ಮಾತನಾಡುತ್ತ ಸಮಸ್ಯೆ ಆಲಿಸಿ ಕೈಲಾದಷ್ಟು ಪರಿಹಾರ ಹೇಳುವುದೇ ಧರಂಸಿಂಗ್ ಅವರ ಸುದೀರ್ಘ ರಾಜಕೀಯದ ಒಳಗುಟ್ಟು ಎಂಬುದು ಎಲ್ಲರೂ ಒಪ್ಪುತ್ತಾರೆ.
@12bc =ಇಂದು 84 ನೇ ಹುಟ್ಟುಹಬ್ಬ
ಡಾ. ಎನ್. ಧರಂಸಿಂಗ್ ಜನಿಸಿ (25. 12. 1936) ಇಂದಿಗೆ 84 ವರ್ಷಗಳಾಗಿದ್ದು ಅವರ ಹುಟ್ಟೂರು ಜೇವರ್ಗಿ ತಾಲೂಕಿನ ನೆಲೋಗಿಯಲ್ಲಿ ಸರಳವಾಗಿ ಅವರ ಜನ್ಮದಿನೋತ್ಸವ ಕುಟುಂಬ ವರ್ಗದವರು, ಅಭಿಮಾನಿಗಳು ಆಚರಿಸುತ್ತಿದ್ದಾರೆ. ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧಾರಣೆಯೊಂದಿಗೆ, ಸ್ಯಾನಿಟೈಜರ್ ಇತ್ಯಾದಿ ಸುರಕ್ಷತಾ ಕ್ರಮಗಳನ್ನು ಬಳಸಿಯೇ ತಂದೆಯವರ ಹುಟ್ಟುಹಬ್ಬ ತುಂಬ ಸರಳವಾಗಿ ಕುಟುಂಬ ಸದಸ್ಯರೇ ಸೇರಿಕೊಂಡು ಆಚರಿಸಲಾಗುತ್ತಿದೆ ಎಂದು ಜೇವರ್ಗಿ ಶಾಸಕ, ಸದನದಲ್ಲಿ ವಿರೋಧ ಪಕ್ಷ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ತಿಳಿಸಿದ್ದಾರೆ..