ಹಳ್ಳಿಯಲ್ಲಿ ನೆಲದ ಮೇಲೆ ಕುಳಿತು ಊಟ ಮಾಡಿದ ಪುನೀತ್

ಬೆಂಗಳೂರು, ನ ೮- ನೆಲದ ಮೇಲೆ ಕುಳಿತು ಬಾಳೆಎಲೆ ಮೇಲೆ ಊಟ ಮಾಡುವ ಮೂಲಕ ದೊಡ್ಮನೆ ಹುಡುಗ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಮತ್ತೊಮ್ಮೆ ಸರಳತೆ ಮೆರೆದಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟನಾಗಿ ಗುರುತಿಸಿಕೊಂಡರೂ ಸರಳತೆಯನ್ನು ಮರೆತಿಲ್ಲ. ಪವರ್ ಸ್ಟಾರ್ ಸರಳತೆಗೆ ಅಭಿಮಾನಿಗಳು ಸಹ ಫಿದಾ ಆಗಿದ್ದಾರೆ. ಇತ್ತೀಚಿಗೆ ಚಿತ್ರೀಕರಣದ ಸಮಯದಲ್ಲಿ ಅಭಿಮಾನಿಯ ಮನೆಯಲ್ಲಿ ಪುನೀತ್ ಭೋಜನ ಸವಿಯುತ್ತಿರುವ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಮನೆಯ ಅಂಗಳದಲ್ಲಿ ಬಾಳೆ ಎಲೆ ಊಟ ಮಾಡುತ್ತಿರುವ ಫೋಟೋಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹೌದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾದ ಚಿತ್ರೀಕರಣ ದಾಂಡೇಲಿಯಲ್ಲಿ ನಡೆದಿತ್ತು. ದಾಂಡೇಲಿಯ ಗುಡ್ಡಗಾಡು ಪ್ರದೇಶದಲ್ಲಿ ಚಿತ್ರೀಕರಣ ಮಾಡಿದ್ದ ಸಿನಿಮಾತಂಡ ಬಳಿಕ ಅಲ್ಲೇ ಅಭಿಮಾನಿಯೊಬ್ಬರ ಮನೆಯಲ್ಲಿ ಊಟ ಸವಿದಿದ್ದಾರೆ.

ಮನೆಯ ಅಂಗಳದಲ್ಲಿ ಕುಳಿತು ಪುನೀತ್ ಮತ್ತು ತಂಡ ಊಟ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಾಮಾನ್ಯ ವ್ಯಕ್ತಿಯಂತೆ ಎಲ್ಲರ ಜೊತೆ ಕುಳಿತು ಊಟ ಮಾಡುತ್ತಿರುವ ಪುನೀತ್ ಸರಳತೆಯನ್ನು ಅಭಿಮಾನಿಗಳು ಹಾಡಿಹೊಗಳುತ್ತಿದ್ದಾರೆ.

ಅಂದಹಾಗೆ ಪುನೀತ್ ಸದ್ಯ ಯುವರತ್ನ ಸಿನಿಮಾದ ಚಿತ್ರೀಕರಣ ಮುಗಿಸಿ ಜೇಮ್ಸ್ ಸಿನಿಮಾದಲ್ಲಿ ನಿರತರಾಗಿದ್ದಾರೆ. ಜೇಮ್ಸ್ ಸಿನಿಮಾ ಚಿತ್ರೀಕರಣಕ್ಕಾಗಿ ಪುನೀತ್ ಸುಮಾರು 15 ದಿನಗಳ ಕಾಲ ಉತ್ತರ ಕರ್ನಾಟಕದಲ್ಲಿ ಬೀಡುಬಿಟ್ಟಿದ್ದರು. ಪುನೀತ್ ನೋಡಲು ಅಭಿಮಾನಿಗಳ ದಂಡೆ ಹರಿದು ಬರುತ್ತಿತ್ತು.