ಕೀವ್ (ಉಕ್ರೇನ್), ಜೂ.೧೪- ರಷ್ಯಾ-ಉಕ್ರೇನ್ ನಡುವಿನ ಯುದ್ದ ದಿನದಿಂದ ದಿನಕ್ಕೆ ಭೀಕರಗೊಳ್ಳುತ್ತಿರುವ ನಡುವೆ ಇದೀಗ ಹಲವು ತಿರುವುಗಳು ಕಾಣಿಸಿಕೊಳ್ಳುತ್ತಿದೆ. ಅತ್ತ ಉಕ್ರೇನ್ ತನ್ನ ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಮೂಲಗಳ ಪ್ರಕಾರ ರಷ್ಯಾದ ವಶದಲ್ಲಿದ್ದ ಹಲವು ಹಳ್ಳಿಗಳನ್ನು ಇದೀಗ ಸ್ವತಂತ್ರಗೊಳಿಸಲಾಗಿದೆ ಎನ್ನಲಾಗಿದೆ.
ಪೂರ್ವ ಡೆನೆಟ್ಸ್ಕ್ ಪ್ರದೇಶದ ನಾಲ್ಕು ವಸಾಹತುಗಳ ಗುಂಪಿನ ನೆಸ್ಕುಚ್ನೆ ಪ್ರದೇಶವನ್ನು ಸದ್ಯ ಉಕ್ರೇನ್ ಸೇನಾಪಡೆ ಸ್ವತಂತ್ರಗೊಳಿಸಿದೆ. ಕಳೆದ ವರ್ಷ ಉಕ್ರೇನ್ ವಿರುದ್ಧ ಯುದ್ ಆರಂಭಿಸಿದ ಕೆಲವೇ ವಾರಗಳಲ್ಲಿ ಈ ಪ್ರದೇಶಗಳನ್ನು ರಷ್ಯಾ ತನ್ನ ವಶಕ್ಕೆ ಪಡೆದುಕೊಂಡಿತ್ತು. ಇದೀಗ ಈ ಹಳ್ಳಿಯನ್ನು ಉಕ್ರೇನ್ ಮರುವಶಪಡಿಸಿಕೊಂಡಿದೆ. ಸದ್ಯ ಈ ಹಳ್ಳಿಯಲ್ಲಿ ಯಾವುದೇ ನಾಗರಿಕರು ಪತ್ತೆಯಾಗಿಲ್ಲ. ಆದರೆ ಯುದ್ದಲ್ಲಿ ಭಾರೀ ಪ್ರಮಾಣದಲ್ಲಿ ಹಾನಿಗೀಡಾದ ಔಷಧಾಲಯ ಹಾಗೂ ಅಂಗಡಿಗಳು ದುಸ್ಥಿತಿಯಲ್ಲಿ ಪತ್ತೆಯಾಗಿದೆ. ಇಲ್ಲಿನ ಹೆಚ್ಚಿನ ಮೂಲಸೌಕರ್ಯಗಳು ಯುದ್ದದಲ್ಲಿ ನಾಶವಾಗಿದ್ದು, ಮರದ ಸೇತುವೆಯೊಂದು ಸದ್ಯ ಉತ್ತಮ ಸ್ಥಿತಿಯಲ್ಲಿದೆ ಎನ್ನಲಾಗಿದೆ. ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೋರಾಟ ನಡೆದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಕಟ್ಟಡಗಳಲ್ಲಿ ಗುಂಡಿನ ದಾಳಿಗೆ ಹಾನಿಗೆ ಒಳಗಾದ ಕುರುಹುಗಳು ಪತ್ತೆಯಾಗಿದೆ. ಇನ್ನು ಇತ್ತೀಚಿಗಿನ ದಿನಗಳಲ್ಲಿ ರಷ್ಯಾ ವಿರುದ್ಧ ಉಕ್ರೇನ್ ಸೇನಾಪಡೆ ದಾಳಿಯನ್ನು ತೀವ್ರಗೊಳಿಸಿದೆ. ಇದರ ಪರಿಣಾಮ ಇದೀಗ ರಷ್ಯಾ ವಶದಲ್ಲಿದ್ದ ಹಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.