ಹಳ್ಳಿಗಳ ಅಭಿವೃದ್ಧಿಯ ನೇತಾರರ ಮತ ಎಣಿಕೆ ಗೆದ್ದವರ ಮುಖದಲ್ಲಿ ಮಂದಹಾಸ, ಕೇಕೆ

ಬಳ್ಳಾರಿ, ಡಿ.30: ನಗರದ ಕೋಟೆ ಪ್ರದೇಶದಲ್ಲಿನ ಸಂತಜಾನ್ ಹೈಸ್ಕೂಲ್ ನಲ್ಲಿ ತಾಲೂಕಿನ ಹಳ್ಳಿಗಳ ಅಭಿವೃದ್ಧಿಯ ನೇತಾರರು, ಗ್ರಾಮ ಪಂಚಾಯ್ತಿ ಸದಸ್ಯರ ಚುನಾವಣೆಯ ಮತಗಳ ಎಣಿಕೆ ನಡೆಯುತ್ತಿದೆ. ಗೆದ್ದವರ ಮುಖದಲ್ಲಿ ಸಹಜವಾಗಿ ಮಂದಹಾಸದ ನಗೆ, ಬೆಂಬಲಿಗರ ಕೇಕೆ ಸದ್ದು ಮತ ಎಣಿಕೆ ಕೇಂದ್ರದ ಮುಂದೆ ಕೇಳಿ ಬಂತು.
ಶಾಲೆಯ 9 ಕೊಠಡಿಗಳಲ್ಲಿ ವ್ಯವಸ್ಥೆ ಮಾಡಿದ್ದ 60 ಟೇಬಲ್ ಗಳಲ್ಲಿ ಮತ ಎಣಿಕೆ ಕಾರ್ಯ ಬೆಳಿಗ್ಗೆ 8 ರಿಂದ ಆರಂಭಗೊಂಡಿದ್ದು ಇನ್ನು ನಡೆಯುತ್ತಿದೆ. ತಾಲೂಕಿನ 25 ಗ್ರಾಮ ಪಂಚಾಯ್ತಿಗಳ ಒಟ್ಟು 161 ಕ್ಷೇತ್ರದ 449 ಸ್ಥಾನಗಳಿಗೆ ಸ್ಪರ್ಧಿಸಿದ್ದ 1098 ಅಭ್ಯರ್ಥಿಗಳ ಭವಿಷ್ಯ ಇಂದು ಒಂದೊಂದಾಗಿ ಹೊರ ಬರುತ್ತಿದ್ದವು. ಎಣಿಕೆ ಸಹಾಯಕರು ಸೇರಿದಂತೆ 192 ಜನ ಸಿಬ್ಬಂದಿ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಎಣಿಕೆ ಕಾರ್ಯದಿಂದಾಗಿ ಕೋಟೆ ಪ್ರದೇಶ ಬಾಗಿಲ ಮುಂಭಾಗದಲ್ಲಿ ಹಳ್ಳಿಗಳಿಂದ ಬಂದಿದ್ದ ಸಾವಿರಾರು ಜನ ಜಮಾಯಿಸಿದ್ದರು.
ಪೊಲೀಸರು ಎಣಿಕೆ ಕಾರ್ಯಕ್ಕೆ ಪಾಸ್ ಪಡೆದಿದ್ದವರನ್ನು ಮಾತ್ರ ಕೋಟೆ ಆವರಣಕ್ಕೆ ನಂತರ ಮತ ಕೇಂದ್ರಕ್ಕೆ ಬಿಡುತ್ತಿದ್ದರು. ಮೂರು ಹಂತಗಳಲ್ಲಿ ಮತಗಳ ಎಣಿಕೆ ಹಂತಗಳಲ್ಲಿ ಮತಗಳ ಎಣಿಕೆ ಕಾರ್ಯ ನಡೆಯುತ್ತಿದೆ. ಸಂಜೆವರೆಗೂ ಮತಗಳ ಎಣಿಕೆ ನಡೆಯುವ ಸಾಧ್ಯತೆ ಇದೆ.
ಮಧ್ಯಾಹ್ನ 12 ಗಂಟೆ ವೇಳೆಗೆ ಕಡಿಮೆ ಸ್ಪರ್ಧಿಗಳಿರುವ ಕ್ಷೇತ್ರಗಳ ಫಲಿತಾಂಶ ಹೊರ ಬೀಳ ತೊಡಗಿತು. ಗೆದ್ದವರು ಕೇಕೆ ಹಾಕುತ್ತಾ, ಹೊರ ಬಂದರು. ಬಂದವರಿಗೆ ಹೊರಗೆ ಬೆಂಬಲಿಗರು ಹೂಮಾಲೆ ಹಾಕಿ ಹೆಗಲ ಮೇಲೆ ಹೊತ್ತು ಕೂಗಾಡಿದರು.
ಮತ ಎಣಿಕೆ ಕೇಂದ್ರಕ್ಕೆ ಬರುವ ತಾಲೂಕು ಪಂಚಾಯಿತಿ ಕಡೆಯ, ಸಾಯಿಬಾಬ ಗುಡಿ ಕಡೆಯ ರಸ್ತೆ ಬಂದ್ ಮಾಡಲಾಗಿತ್ತು.
ತಮ್ಮದೇ ಚುನಾವಣೆ ಆಗಿದ್ದರಿಂದ ಪ್ರತಿ ಗ್ರಾಮಗಳಿಂದ ನೂರಾರು ಜನ ಬೈಕ್, ಕಾರು ಜೀಪುಗಳಿಂದ ಬಂದಿದ್ದರು. ಇದರಿಂದಾಗಿ ಕೋಟೆ ಪ್ರದೇಶದಲ್ಲಿ ಸಾವಿರಾರು ಬೈಕ್ ಗಳ ಪಾರ್ಕಿಂಗ್ ಇತ್ತು.
ಜನ ಜಮಾಯಿಸಿದ್ದರಿಂದ ಸುತ್ತ ಮುತ್ತಲ ಬೇಕರಿ ಉಪಹಾರ ಮಂದಿರದಲ್ಲಿ ವ್ಯಾಪಾರ ವಹಿವಾಟು ಹೆಚ್ಚಿತ್ತು.
ಒಟ್ಟು ಜಿಲ್ಲೆಯ 231 ಗ್ರಾಮ ಪಂಚಾಯಿತಿಗಳ ಬೈಕಿ 229 ಗ್ರಾಮ ಪಂಚಾಯ್ತಿಗಳ 1317 ಕ್ಷೇತ್ರಗಳ 3612 ಸದಸ್ಯ ಸ್ಥಾನಗಳಿಗೆ 8745 ಅಭ್ಯರ್ಥಿಗಳು ಕಣದಲ್ಲಿದ್ದರು.
ಜಿಲ್ಲೆಯ 11 ತಾಲೂಕುಗಳ ಪೈಕಿ ಹರಪನಹಳ್ಳಿ ತಾಲೂಕಿನಲ್ಲಿ ಹೆಚ್ಚು ಅಂದರೆ 35 ಗ್ರಾಮ ಪಂಚಾಯ್ತಿಗಳ 559 ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಕಂಪ್ಲಿ ತಾಲೂಕಿನಲ್ಲಿ ಅತಿ ಕಡಿಮೆ 10 ಗ್ರಾಮ ಪಂಚಾಯ್ತಿ 183 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿತ್ತು.