ಹಳ್ಳಿಗಳಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಮನವಿ

ದಾವಣಗೆರೆ.ಮೇ.೧೯; ಇಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಗೂ ಲಗ್ಗೆ ಇಟ್ಟಿರುವ ಕೋವಿಡ್-19 ಕೊರೋನಾ ವೈರಸ್ ಗ್ರಾಮೀಣ ಜನರನ್ನು ಕಾಡುತ್ತಿರುವುದು ಶೊಚನೀಯವಾಗಿದೆ. ಸ್ವಚ್ಛ ಸುಂದರ ಬದುಕು ಬದುಕುತ್ತಿದ್ದ ಹಳ್ಳಿ ಜನರು ಈ ರೋಗದಿಂದಾಗಿ ಹತ್ತು ಹಲವು ರೀತಿಯ ಕಷ್ಟನಷ್ಟಗಳಿಗೆ ಗುರಿಯಾಗುತ್ತಿರುವುದು ಅಲ್ಲದೆ ತಮ್ಮ ಬದುಕನ್ನೇ ಕಳೆದುಕೊಳ್ಳುತ್ತಿದ್ದಾರೆ. ಸುಖಮಯವಾಗಿ ಜೀವನ ನಡೆಸುತ್ತಿದ್ದ ಗ್ರಾಮೀಣ ಜನರು ಇಂದು ಭಯದ ವಾತಾವರಣದಲ್ಲಿ ಕಾಲ ಕಳೆಯುವಂತೆ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಗೋವಿಂದರೆಡ್ಡಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.ಭಾರತ ದೇಶದ ಜೀವಾಳ ಹಳ್ಳಿ, ಹಳ್ಳಿ ಸತ್ತರೆ ದೇಶ ಸತ್ತಂತೆ ಎಂಬ ಮಾತಿದೆ. ಹಳ್ಳಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ಮತ್ತು ಜನರ ಆರೋಗ್ಯಕ್ಕೆ ಸರ್ಕಾರಗಳು ಹೆಚ್ಚು ಒತ್ತು ನೀಡಬೇಕಾದ ಸಂದರ್ಭ ಎದುರಾಗಿದೆ. ಕೋವಿಡ್-19 ಕೋರೋನ ವೈರಸ್ ಎಂಬ ಒಂದು ದೈತ್ಯ ಮಾರಣಾಂತಿಕ ರೋಗದಿಂದಾಗಿ ಹಳ್ಳಿ ಜನರ ಬದುಕು ಛಿದ್ರವಾಗುತ್ತಿದೆ. ರಾಜ್ಯದಲ್ಲಿ ಗ್ರಾಮೀಣ ಪ್ರದೇಶದ ಲಕ್ಷಾಂತರ ಜನರು ಅತಂತ್ರಗೊAಡಿದ್ದಾರೆ. ಈ ಬಗ್ಗೆ ಸರ್ಕಾರ ಇಂದಿನ ಈ ಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಗ್ರಾಮೀಣ ಜನರ ಸಂಕಷ್ಟಗಳನ್ನು ಪರಿಹರಿಸಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕಿದೆ ಆದರೆ ಈ ಕುರಿತಂತೆ ಜಿಲ್ಲಾಧಿಕಾರಿಗಳು ಯಾವುದೇ ರೀತಿಯ ರಕ್ಷಣಾ ಕ್ರಮಗಳನ್ನು ನಿರ್ವಹಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಜಿಲ್ಲಾದ್ಯಂತ ಜನರ ಜೀವನ ಅಸ್ತವ್ಯಸ್ತವಾಗಿದೆ. ಆ ದಿನವೇ ದುಡಿದು ಅದರಿಂದ ಬಂದ ಕೂಲಿಯಿಂದ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ ಬಡ ಕೂಲಿಕಾರ್ಮಿಕರ ಕುಟುಂಬಗಳು ಅನ್ನವಿಲ್ಲದೆ ಹಸಿವಿನಿಂದ ನರಳುತ್ತಿವೆ.ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದಾಗಿ ಸೋಂಕಿತರು ಸಾಲುಸಾಲು ಮರಣ ಹೊಂದುತ್ತಿದ್ದಾರೆ.ಜಿಲ್ಲೆಯಲ್ಲಿ ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ನೆರೆ ರಾಜ್ಯಗಳಾದ ಆಂಧ್ರ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಇಂದು ನಾವು ನೋಡುತ್ತಿದ್ದೇವೆ ಯಾವ ರೀತಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಏನಾಗಿದೆ ಎಂಬುದೇ ತಿಳಿಯುತ್ತಿಲ್ಲ. ಕೋವಿಡ್-19 ಕೊರೋನಾ ವೈರಸ್ಸನ್ನು ಸರ್ವರೀತಿಯಲ್ಲೂ ನಿಯಂತ್ರಿಸಲು ಪ್ರಮುಖವಾದ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಗೋವಿಂದರೆಡ್ಡಿ ಅವರು ಆಡಳಿತಾರೂಢ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ವೈರಸ್ಸನ್ನು ತಡೆಗಟ್ಟಲು ಗ್ರಾಮ ಪಂಚಾಯತ್ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಕುತ್ತಿರುವ ಶ್ರಮ ಮತ್ತು ಸೇವೆ ಶ್ಲಾಘನೀಯವಾಗಿದೆ. ಅವರ ಕಾರ್ಯಕ್ಕೆ ಸರಿಸಾಟಿ ಇಲ್ಲ ಎಂದು ಅವರು ಪ್ರಸಂಶಿಸಿದರು. ಇವರೆಲ್ಲರನ್ನೂ ಸೇರಿಸಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಂಚಾಯತ್ ಕೊರೋನ ನಿಯಂತ್ರಣ ಟಾಸ್ಕ್ ಫೋರ್ಸ್ ಸಮಿತಿಗಳನ್ನು ರಚಿಸಿ ಸಮಿತಿಗಳ ಮುಖಾಂತರ ಉತ್ತಮ ಕಾರ್ಯಾಚರಣೆ ನಡೆಸಿ ಅಮೂಲ್ಯ ಸೇವೆಯನ್ನು ನೀಡುವಂತೆ ಅವರು ಸರ್ಕಾರಕ್ಕೆ ಸಲಹೆ ನೀಡಿದರು. ಮತ್ತು ಈ ಸಮಿತಿಗೆ ವೈರಸ್ ತಡೆಗಟ್ಟಲು ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸಿಕೊಡಬೇಕು. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಮತ್ತು ಜಿಲ್ಲಾ ಹಾಗೂ ತಾಲೂಕು ಆಡಳಿತಗಳು ಈ ಕುರಿತಂತೆ ಚಿಂತನೆ ನಡೆಸಿ ಕಾರ್ಯರೂಪಕ್ಕೆ ತರುವ ಕೆಲಸವನ್ನು ಮಾಡಬೇಕಿದೆ ಎಂದು  ತಿಳಿಸಿದ್ದಾರೆ.