ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ

ಔರಾದ್:ಎ.29: ಕೊರೊನಾ ಕಾರಣ ಸಂಕಷ್ಟದಲ್ಲಿರುವ ಗ್ರಾಮೀಣ ಪ್ರದೇಶದ ಜನ ಕುಡಿಯುವ ನೀರಿಗೂ ಪರದಾಡಬೇಕಿದೆ. ಬೇಸಿಗೆ ಬಿಸಿಲಿನ ಪ್ರಖರತೆ ಜಾಸ್ತಿಯಾಗುತ್ತಿದ್ದಂತೆ ಕೊಳವೆ ಬಾವಿಗಳು ಬತ್ತಿ ಹೋಗಿ ಸಮಸ್ಯೆ
ತೀವ್ರ ಆಗುತ್ತಿದೆ.

ತಾಲ್ಲೂಕಿನ ಸಂತಪುರ, ಚಿಂತಾಕಿ ಹೋಬಳಿಯ ಕೆಲ ಗ್ರಾಮ ಮತ್ತು ತಾಂಡಾಗಳಲ್ಲಿ ನೀರಿನ ಸಮಸ್ಯೆ ಹೆಚ್ಚಿದೆ. ಸುಂದಾಳ, ನಂದ್ಯಾಳ, ನಾಗಮಾರಪಳ್ಳಿ, ಮಾನೂರ, ಜಮಗಿ, ಬಾರ್ಡರ್ ತಾಂಡಾ, ನಾಗೂರ, ಸಂತಪುರ, ಮಸ್ಕಲ್ ತಾಂಡಾ, ಬೆಳಕುಣಿ (ಚೌ) ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಈ ಪೈಕಿ ಕೆಲ ಗ್ರಾಮಗಳಲ್ಲಿ ಖಾಸಗಿ ನೀರಿನ ಮೂಲ ಪಡೆದು ಜನರಿಗೆ ಕುಡಿyuವ ನೀರು ಪೂರೈಸಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ತಿಳಿಸಿದ್ದಾರೆ.

‘ಸಂತಪುರ ಹೋಬಳಿ ಕೇಂದ್ರದಲ್ಲಿ ಒಂದು ತಿಂಗಳ ಹಿಂದಿನಿಂದಲೇ ಕುಡಿಯುವ ನೀರಿಗೆ ಕೊರತೆಯಾಗಿದೆ.ಇರುವ ನೀರಿನ ಮೂಲ ಬತ್ತಿ ಹೋಗಿದೆ. ಪರಿಶಿಷ್ಟ ಜಾತಿ ಸಮುದಾಯದವರ ಗಲ್ಲಿಯಲ್ಲಿ ತೀರಾ ಸಮಸ್ಯೆ ಇದೆ. ಆ ಊರಿನ ಸಾಯಿಕುಮಾರ ಘೋಡ್ಕೆ ಜನರಿಗೆ ಟ್ಯಾಂಕರ್ ಮೂಲಕ ನೀರು ಕೊಡುತ್ತಿರುವುದರಿಂದ ನಾವು ಸ್ವಲ್ಪ ನೆಮ್ಮದಿಯಾಗಿದ್ದೇವೆ’ ಎಂದು ಪಿಡಿಒ ಅನಿಲಕುಮಾರ ತಿಳಿಸಿದ್ದಾರೆ.
‘ಸಂತಪುರಗೆ ಟ್ಯಾಂಕರ್ ನೀರು ಪೂರೈಸುವುದು ಅಗತ್ಯವಾಗಿದೆ. ಆದರೆ, ಸರ್ಕಾರ ಅದಕ್ಕೆ ಅನುಮತಿ ಕೊಟ್ಟಿಲ್ಲ. ಎರಡು ಕಡೆ ಖಾಸಗಿ ನೀರಿನ ಮೂಲ ಗುರುತಿಸಿದ್ದೇವೆ. ಅಲ್ಲಿಂದ ನೀರು ಪೂರೈಕೆಗೆ ತಯಾರಿ ನಡೆಸಿದ್ದೇವೆ’ ಎಂದು ಅವರು ಹೇಳಿದ್ದಾರೆ.

‘ವಡಗಾಂವ್ ಹೋಬಳಿಯ ಕೆಲ ಕಡೆ ಈಗ ನೀರಿನ ಸಮಸ್ಯೆ ಎದುರಾಗುತ್ತಿದೆ. ಬರ್ಗೆನ್ ತಾಂಡಾ, ಪೋಮಾ ತಾಂಡಾದಲ್ಲಿ ಸಮಸ್ಯೆಯಾಗಿದೆ. ಸೋರಳ್ಳಿ ತಾಂಡಾದಲ್ಲಿ ಸಮಸ್ಯೆ ಬಗೆಹರಿಸಿದ್ದೇವೆ. ವಡಗಾಂವ್ ಪರಿಶಿಷ್ಟ ಜಾತಿ ಗಲ್ಲಿಯಲ್ಲಿ ಕೊಳವೆಬಾವಿ ಮೋಟಾರು ಸುಟ್ಟು ಸಮಸ್ಯೆಯಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಆದ್ಯತೆ ಮೇಲೆ ಪರಿಹರಿಸುತ್ತಿದ್ದೇವೆ’ ಎಂದು ಪಿಡಿಒ ಅನಿಲಕುಮಾರ ಚಿಟ್ಟಾ ತಿಳಿಸಿದ್ದಾರೆ.

‘ಪಂಚಾಯತ್ ರಾಜ್ ನೀರು ಸರಬರಾಜು ವಿಭಾಗದವರು ತಾಲ್ಲೂಕಿನ 24 ಊರುಗಳಲ್ಲಿ ನೀರಿನ ಸಮಸ್ಯೆ ಇರುವುದನ್ನು ಗುರುತಿಸಿದ್ದಾರೆ. ನಾನು ಹಾಗೂ ತಾಲ್ಲೂಕು ಪಂಚಾಯಿತಿ ಇಒ ಮಾಣಿಕರಾವ ಪಾಟೀಲ ಈ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಸದ್ಯಕ್ಕೆ ಈ ತಿಂಗಳು ಅಷ್ಟೊಂದು ಸಮಸ್ಯೆಯಾಗುವುದಿಲ್ಲ. ಮುಂದಿನ ತಿಂಗಳು ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ’ ಎಂದು ತಹಶೀಲ್ದಾರ್ ಎಂ. ಚಂದ್ರಶೇಖರ್ ಹೇಳಿದ್ದಾರೆ.