ಹಳ್ಳಿಗಳನ್ನು ಸ್ವರ್ಗವಾಗಿಸಲು ಯುವಜನರು ಮುಂದೆ ಬನ್ನಿ: ಡಾ.ಸೇಡಂ

ಬೀದರ್:ಸೆ.6: ಹಳ್ಳಿಗಳು ಈ ದೇಶದ ನಿಜವಾದ ಆತ್ಮಗಳಿದ್ದು, ಅಲ್ಲಿಯ ಕೃಷಿಕ ಈ ಜಗತ್ತಿನ ಎರಡನೇ ನಿಜವಾದ ದೇವರಾಗಿದ್ದಾನೆ. ಇಂಥ ಪವಿತ್ರ ಹಳ್ಳಿಗಳ ಸಂವರ್ಧನೆ ಹಾಗೂ ಸಂರಕ್ಷಣೆಗೆ ಯುವಜನರು ಮುಂದೆ ಬರಬೇಕೆಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ಅಧ್ಯಕ್ಷ ಡಾ.ಬಸವರಾಜ ಪಾಟೀಲ ಸೇಡಂ ಕರೆ ನೀಡಿದರು.

ನಗರದ ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಮಂಗಳವಾರ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದಿಂದ ಗ್ರಾಮೀಣ ಯುವಕ-ಯುವತಿಯರಿಗಾಗಿ ಜರುಗಿದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಇಂದು ನಗರ ಹಾಗೂ ಪಟ್ಟಣಗಳ ನಿರ್ಮಾಣದಲ್ಲಿ ದೇಶದ ಸುಮಾರು 3 ಸಾವಿರ ಹಳ್ಳಿಗಳು ನಾಪತ್ತೆಯಾಗಿವೆ. ಅಲ್ಲಿಯ ಗ್ರಾಮೀಣ ಬದುಕು ನಾಶವಾಗಿದೆ. ಅಲ್ಲಿಯ ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ, ಕುಂಬಾರಿಕೆ, ಕಂಬಾರಿಕೆ, ಬಡಿಗೆತನ ಎಲ್ಲವೂ ಮಾಯವಾಗಿದೆ. ಇದಕ್ಕೆಲ್ಲ ಇಂದಿನ ಸರ್ಕಾರದ ನಗರಿಕರಣ ವ್ಯವಸ್ಥೆಯೆ ಮೂಲ ಕಾರಣ ಎಂದರು.

ಗಾಂಧಿಜಿ ಅವರ ಕನಸ್ಸಿನಂತೆ ಈ ದೇಶ ರಾಮರಾಜ್ಯವಾಗಬೇಕಾದರೆ ಗ್ರಾಮೀಣ ಪ್ರದೇಶದ ಸಂಪುರ್ಣ ಜೀರ್ಣೋದ್ದಾರ ಅಗತ್ಯವಾಗಿದೆ. ಆದರೆ, ಗ್ರಾಮೀಣ ಯುವಜನರು ತಮ್ಮ ವಿದ್ಯೆಯನ್ನು ಕೌಶಲ್ಯಕ್ಕಾಗಿ ಅಥವಾ ಸ್ವಾಭಿಮಾನದ ಬದುಕಿಗೆ ಧಾರೆ ಎರೆಯದೇ ಸಣ್ಣ ಸಣ್ಣ ನೌಕರಿಗಾಗಿ ಭೀಕಾರಿಗಳಂತೆ ಇನ್ನೊಬ್ಬರ ಮುಂದೆ ಕೈಚಾಚಿ ಬದುಕುತ್ತಿರುವುದು ದಯನಿಯ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶದ ಜಮಿನುಗಳು ನಿಜವಾದ ಬಂಗಾರದ ಖಣಿ ಇದ್ದಂತೆ. ಅಲ್ಲಿಯ ಜಲ ಅಮೃತಕ್ಕೆ ಸಮಾನ. ಅಲ್ಲಿಯ ಆಹಾರ, ಸಾಮಾಜಿಕ ಬದುಕು ಸ್ವರ್ಗಮಯವಾದದ್ದು, ಅಲ್ಲಿಯ ಹಬ್ಬ ಹರಿದಿನಗಳು ಹಾಗೂ ಜಾತ್ರೆಗಳು ಇಂದಿಗೂ ರಾಷ್ಟ್ರೀಯ ಏಕತೆ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿವೆ ಎಂದರು.

ರೈತ ಈ ದೇಶದ ಬೆನ್ನೆಲುಬು. ಆತನ ಸ್ವಾಭಿಮಾನದ ಬದುಕಿಗೆ ನಾವಿಂದು ಮುಳ್ಳಾಗುತ್ತಿದ್ದೇವೆ. ದೆಹಲಿಯಲ್ಲಿ ಕಳೆದ ವರ್ಷ ತಮ್ಮ ಹಕ್ಕಿಗಾಗಿ ಹೋರಾಡಿದ 1100 ರೈತರ ಪೈಕಿ 700 ರೈತರು ತಮ್ಮ ಪ್ರಾಣ ಬಿಟ್ಟಿದ್ದಾರೆ. ಆಗ ಸರ್ಕಾರ ಮೌನವಾಯಿತು. ಒಟ್ಟಾರೆ ಗ್ರಾಮದಿಂದ ಪಟ್ಟಣ, ನಗರ ಸೇರುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ. ಪಟ್ಟಣ, ನಗರ ಹಾಗೂ ಮಹಾನಗರದಲ್ಲಿನ ಕೊಳಕು ನೀರು, ಆಹಾರ ಹಾಗೂ ಕಲ್ಮಶ ಗಾಳಿ ಸೇವನೆಯಿಂದ ನಮ್ಮ ಆದಾಯದ 30ರಷ್ಟು ಹಣವನ್ನು ಆಸ್ಪತ್ರೆಗಳಿಗೆ ಖರ್ಚು ಮಾಡಲು ಮುಂದಾಗಿದ್ದೇವೆ. ಹಳ್ಳಿಯ ಅಡುಗೆ ಮನೆಯಲ್ಲಿನ ಆಹಾರ ಪದಾರ್ಥಗಳು ನಮ್ಮ ಶೇಕಡಾ 80ರಷ್ಟು ರೋಗಗಳಿಗೆ ರಾಮಬಾಣ ಎಂಬುದನ್ನು ಗ್ರಾಮೀಣ ಯುವಜನರು ಅರಿಯಬೇಕು. ನಗರ ಹಾಗೂ ಮಹಾನಗರದಲ್ಲಿನ ಜನ ತಮ್ಮ ಅರ್ಥಹೀನ ನಗರಿಕರಣ ಬದುಕು ಮೊಟುಕುಗೊಳಿಸಿ ಪುನ ತಮ್ಮ ಹಳ್ಳಿಗಳತ್ತ ಮುಖ ಮಾಡಿ ಕೃಷಿ ಹಾಗೂ ಗುಡಿ ಕೈಗಾರಿಕೆಗಳಿಗೆ ಮತ್ತು ಕೃಷಿಯೇತರ ಚಟುವಟಿಕೆಗಳನ್ನು ಮೈಗೂಡಿಸಿಕೊಂಡು ದೇಶದ ಆರ್ಥಿಕ ಭದ್ರತೆ ಹೆಚ್ಚಿಸಲು ಮುಂದೆ ಬರುವಂತೆ ಡಾ.ಸೇಡಂ ತಿಳಿಸಿದರು.

ಸ್ಥಳಿಯ ಶಾಸಕ ರಹಿಮ್ ಖಾನ್ ಮಾತನಾಡಿ, ಇಂದು ಗಾಂಧಿಜಿಯವರ ಕನಸ್ಸು ಸಾಕಾರವಾಗಬೇಕಶಾದರೆ ಗ್ರಾಮಗಳ ಜೀರ್ಣೋದ್ದಾರ ಅನಿವಾರ್ಯ. ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗಕ್ಕೆಂದು ನಗರ ಪ್ರದೇಶಗಳಿಗೆ ಕಳುಹಿಸದೇ ತಮ್ಮಲ್ಲಿರುವ ವ್ಯವಸ್ಥೆಯಲ್ಲಿಯೇ ಅವರಿಗೆ ಉತ್ತಮ ಶಿಕ್ಷಣ ನೀಡಿ, ಸ್ವಾಭಿಮಾನಿಗಳಾಗಿ ಬದುಕುವ ಕಲೆ ಕಲಿಸಿಕೊಡಬೇಕು, ಗ್ರಾಮೀಣ ಕಲೆ, ಸಾಹಿತ್ಯ, ಜನಪದ ಬದುಕು, ಸಂಸ್ಕøತಿ ಹಾಗೂ ಸಂಪ್ರದಾಯ ಪುನರೂಜ್ಜೀವನಗೊಳಿಸಲು ಪ್ರೋತ್ಸಾಹಿಸಬೇಕಿದೆ. ಅಲ್ಲಿಯ ಪಶುಪಾಲನೆ, ಹಾಗೂ ಕೃಷಿ ಚಟುವಟಿಕೆಗಳತ್ತ ಯುವಜನರು ಧಾವಿಸಬೇಕೆಂದು ಕರೆ ಕೊಟ್ಟರು. ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವಿಶ್ವವಿಖ್ಯಾತ ಅಂಧ ಕ್ರೀಡಾಪಟು ಡಾ.ನ್ಯಾನು ಪಾಟೀಲ ಹಾಗೂ ಶ್ರೀ ಕೃಷ್ಣ ಸಂಪಗಾವಂಕರ್ ಮಹಾರಾಜ ಅವರು ವಿಶೇಷ ಉಪನ್ಯಾಸ ನೀಡಿದರು. ಸೌಭಾಗ್ಯವತಿ ವಯಕ್ತಿಕ ಗೀತೆ ಹಾಡಿದರು. ನಾಟ್ಯನೃತ್ಯಶ್ರಯ ಕಲಾ ತಂಡದ ಮಕ್ಕಳಿಂದ ಭರತ ನಾಟ್ಯ ನೃತ್ಯ ಪ್ರದರ್ಶನ ಜರುಗಿತು.

ಈ ಸಂದರ್ಭದಲ್ಲಿ ಕೃಷಿ ಕ್ಷೇತ್ರದಲ್ಲಿ ಗೋವಿಂದ ಮಹಾರಾಜ, ಆದರ್ಶ ಗ್ರಾಮಕ್ಕಾಗಿ ಶ್ರೀನಿವಾಸ ಗಣಪತರಾವ ಜೊನ್ನಿಕೆರೆ, ಸಂಗೀತ ಕ್ಷೇತ್ರದಲ್ಲಿ ವೀರ ಸಮರ್ಥ, ಗ್ರಾಮ ಅಭಿವೃದ್ಧಿಗಾಗಿ ಪಿ.ಡಿ.ಓ ಶರತ್ ಅಭಿಮಾನ, ಕೈಯಿಂದ ಉತ್ತಮ ಗೊಂಬೆಗಳು ಸೇರಿದಂತೆ ಅನೇಕ ಮೂರ್ತಿಗಳ ನಿರ್ಮಾತೃ ಮಣಿಭದ್ರ ಭಾಗವತಗಿರಿ ಅವರನ್ನು ಸನ್ಮಾನಿಸಲಾಯಿತು.

ಜನಸೇವಾ ಶಾಲೆಯ ಹಿರಿಯ ಸದಸ್ಯ ಬಿ.ಎಸ್ ಕುದುರೆ, ಗ್ಲೋಬಲ್ ಸೈನಿಕ ಅಕಾಡೆಮಿ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೆನಪುರೆ, ಪುನಿತ್ ಸಾಳೆ ಹಾಗೂ ಇತರರು ವೇದಿಕೆಯಲ್ಲಿದ್ದರು. ಸಂಘದ ಪ್ರಮುಖ ರೇವಣಸಿದ್ದ ಜಾಡರ್ ಕಾರ್ಯಕ್ರಮ ನಿರೂಪಿಸಿ, ಸಚಿನ್ ನಾಗುರೆ ವಂದಿಸಿದರು.