ಹಳ್ಳಿಗರು ಕರೋನ ನಿಗ್ರಹಿಸಲು ಕಲಿಯಬೇಕು

ಚಿತ್ರದುರ್ಗ.ಮೇ.೨೮; ಜಿಲ್ಲೆಯ 138 ಹಳ್ಳಿಗಳು ಕೊರೋನದಿಂದ ಆವೃತ್ತವಾಗಿವೆ. ಅವುಗಳು ಕೊರೋನ ಎದುರಿಸುವಷ್ಟು ಜ್ಞಾನವನ್ನ ಹೊಂದಬೇಕಾಗಿದೆ. ಬಡತನವೇ ತುಂಬಿರುವ ಹಳ್ಳಿಗಳಲ್ಲಿ, ವೈದ್ಯಕೀಯ ವೆಚ್ಚ ಭರಿಸಲಾರದೇ, ಬಹಳಷ್ಟು ಸಾವು ನೋವು ಉಂಟಾಗಬಹುದು. ಬಡಜನರನ್ನ ರಕ್ಷಿಸುವ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕು. ಅವರನ್ನ ಜಾಗೃಗೊಳಿಸುವ ಕೆಲಸ ತುರ್ತಾಗಿ ನೆಡೆಯಬೇಕು. ಕ್ಷಣ ಕ್ಷಣಕ್ಕೂ ಅವರ ಜೊತೆ ವೈದ್ಯಕೀಯ ಸಿಬ್ಬಂಧಿ ಕೆಲಸ ಮಾಡಬೇಕಾಗುತ್ತದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.ಅವರು ನಗರದ ಹಳೇ ಮಾಧ್ಯಮಿಕ ಶಾಲೆಯ ಮೈದಾನದಲ್ಲಿ ಸಂತೆ ಸೇರುವ ಗ್ರಾಮೀಣ ಜನರಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿದ್ದ “ಹಳ್ಳಿಗಳತ್ತ ನಮ್ಮ ಚಿತ್ತ” ಎಂಬ ಕರೋನ ವಿರುದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಆಸ್ಪತ್ರೆಗಳ ಖರ್ಚು ವೆಚ್ಚ, ಬೆಡ್‌ಗಳ ಸಮಸ್ಯೆ, ಆಕ್ಸಿಜನ್ ಕೊರತೆ, ಔಷಧಿಗಳ ದುಪ್ಪಟ್ಟು ದರ, ಕರೋನ ಟೆಸ್ಟಿನ ಬೆಲೆ, ಇವೆಲ್ಲವೂ ಸಹ ಗ್ರಾಮೀಣ ಜನರನ್ನು ಅಸಹಾಯಕರನ್ನಾಗಿ ಮಾಡುತ್ತವೆ. ಮಾಸ್ಕ್ ಕೊಳ್ಳಲು ಹಣವಿಲ್ಲದ ಸಾವಿರಾರು ಜನರು ಅಲ್ಲಿದ್ದಾರೆ, ಮೂಡನಂಬಿಕೆ ತುಂಬುವ ಜನರು ಸಹ ಹೆಚ್ಚಾಗಿ ಹಳ್ಳಿಗಳಲ್ಲಿ ಕೆಲಸಮಾಡುತ್ತಿದ್ದಾರೆ, ಅವರನ್ನ ಪರಿವರ್ತಿಸಿ, ದೊಡ್ಡ ಹೋರಾಟದಂತೆ ಕರೋನ ನಿಗ್ರಹಿಸಿವ ಕೆಲಸವಾಗಬೇಕಾಗಿದೆ. ಸಂಚಾರಿ ವ್ಯವಸ್ಥೆಯೇ ಸರಿಯಾಗಿ ಇಲ್ಲದ, ಕುಡಿಯುವ ನೀರಿಗೆ ಪರದಾಡುವ ಊರುಗಳಲ್ಲಿ ಕರೋನ ನುಸಿಳಿ ಹೋಗಿ, ಜನರನ್ನ ತೊಂದರೆಗೀಡುಮಾಡಿದೆ. ಅವರನ್ನ ರಕ್ಷಿಸುವ ಕೆಲಸವಾಗಬೇಕು ಎಂದರು.ಕೊರೋನದ ಯಾವುದಾದರೂ ಲಕ್ಷಣಗಳು ಕಂಡುಬಂದರೆ ಗ್ರಾಮಸ್ಥರು ತಕ್ಷಣ ವೈದ್ಯರನ್ನು ಕಾಣಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಕೈಗಳನ್ನ ಸ್ವಚ್ಚವಾಗಿಟ್ಟುಕೊಂಡು, ಕರೋನ ಮುಕ್ತ ಗ್ರಾಮಗಳನ್ನ ಮಾಡಿಕೊಳ್ಳಬೇಕು. ಬೇಜವಾಬ್ದಾರಿಯಿಂದ ನಡೆದಾಡುವ ಜನರನ್ನ ಅವರೇ ಸರಿದಾರಿಗೆ ತಂದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಹೇಶ್ ಕೆ. ಎನ್. ಮುಖ್ಯ ಶಿಕ್ಷಕರು, ಶ್ರೀ ಆಂಜನೇಯ ಸ್ವಾಮಿ ಪ್ರೌಡ ಶಾಲೆ, ಕಡ್ಲೆಗುದ್ದು. ಸಾಜಿದ್ ದಾದು, ಕನ್ನಡ ಸಂಘಟನೆಯ ಪ್ರಕಾಶ್, ಪತಂಜಲಿ ಯೋಗ ಕೇಂದ್ರದ ಯೋಗ ಗುರು ವಾಣಿ ಬಾಗವಹಿಸಿದ್ದರು. ಹೆಚ್.ಎಸ್. ಪ್ರೇರಣ ಕರೋನ ಗೀತೆಗಳನ್ನ ಹಾಡಿ ಜಾಗೃತಿ ಮೂಡಿಸಲಾಯಿತು.