ಹಳ್ಳಹಿಡಿದ ಯಂತ್ರಧಾರೆ, ಮೂರೂ ಕೇಂದ್ರಗಳು ಬಂದ್

ದೇವದುರ್ಗ,ಮೇ.೨೫- ಕಡಿಮೆ ದರದಲ್ಲಿ ರೈತರಿಗೆ ಕೃಷಿ ಯಂತ್ರಗಳನ್ನು ಬಾಡಿಗೆ ನೀಡಲು ಸರ್ಕಾರ ಆರಂಭಿಸಿದ ಕೃಷಿಯಂತ್ರಧಾರೆ ಯೋಜನೆ ತಾಲೂಕಿನಲ್ಲಿ ಸಂಪೂರ್ಣ ಹಳ್ಳಹಿಡಿದಿದೆ. ನಿರ್ವಹಣೆ ಕೊರತೆ, ರೈತರ ನಿರಾಸಕ್ತಿ ಸೇರಿ ನಾನಾ ಕಾರಣದಿಂದ ಯಂತ್ರಧಾರೆ ಸ್ತಬ್ಧವಾಗಿದ್ದು ನಿರ್ವಹಣೆ ಮಾಡಬೇಕಾದ ಎನ್‌ಜಿಒಗಳು ಜವಾಬ್ದಾರಿ ಮರೆತಿವೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಾಲೂಕಿನ ನಾಲ್ಕು ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿಯಂತ್ರಧಾರೆ ಕೇಂದ್ರ ಆರಂಭಿಸಲಾಗಿದೆ. ದೇವದುರ್ಗ, ಗಬ್ಬೂರು ಹಾಗೂ ಜಾಲಹಳ್ಳಿ ಹೋಬಳಿ ಕೇಂದ್ರಗಳು ಬಂದ್‌ಆಗಿವೆ. ಹಲವು ಕಾರಣದಿಂದ ಕೇಂದ್ರ ನಯಾಪೈಸೆ ಆದಾಯ ತಂದಿಲ್ಲ. ಬಹುತೇಕ ಕಡೆ ವಾಹನಗಳನ್ನು ಬಾಡಿಗೆ ನೀಡಿಯೇ ಇಲ್ಲ.
ನಾರಾಯಣಪುರ ಬಲದಂಡೆ ನಾಲೆ ಹಾಗೂ ಕೃಷ್ಣಾ ನದಿ ನೀರಿನಿಂದ ಬಹುತೇಕ ರೈತರು ನೀರಾವರಿಗೆ ಒಳಪಟ್ಟಿದ್ದಾರೆ. ಗಬ್ಬೂರು ಹಾಗೂ ಅರಕೇರಾ ಹೋಬಳಿ ಕೊನೇಭಾಗದಲ್ಲಿ ಮಾತ್ರ ನೀರಿನ ಕೊರತೆಯಿದೆ. ನೀರಿನ ಸೌಲಭ್ಯವಿರುವ ರೈತರು ಭತ್ತ, ಹತ್ತಿ, ಮೆಣಸಿನಕಾಯಿ ಬೆಳೆಯುತ್ತಿದ್ದು ದೊಡ್ಡ, ಮಧ್ಯಮ ರೈತರು ಮನೆಗೊಂದರಂತೆ ಟ್ರ್ಯಾಕ್ಟರ್ ಹೊಂದಿದ್ದಾರೆ.
ಸಣ್ಣಸಣ್ಣ ರೈತರು ಜಮೀನು ಲೀಜ್ ಲೆಕ್ಕದಲ್ಲಿ ಟ್ರ್ಯಾಕ್ಟರ್ ಇರುವವರಿಗೆ ಕೊಡುತ್ತಿದ್ದಾರೆ. ಇನ್ನು ಕೆಲವರು ಉದ್ರಿ ಲೆಕ್ಕದಲ್ಲಿ ಟ್ರ್ಯಾಕ್ಟರ್ ಮಾಲೀಕರ ಜತೆ ಮಾತುಕತೆ ಮಾಡಿಕೊಂಡು ಕೃಷಿ ಮಾಡುತ್ತಿದ್ದಾರೆ. ಕೃಷಿಯಂತ್ರಧಾರೆಯಲ್ಲಿ ಬಾಡಿಗೆ ಹಣ ಮುಂಗಡವಾಗಿ ಪಾವತಿ ಮಾಡಬೇಕಿದ್ದರಿಂದ ರೈತರು ಆ ಕಡೆ ಸುಳಿಯುತ್ತಿಲ್ಲ. ಬೆರಳೆಣಿಕೆಯಷ್ಟು ಟ್ರ್ಯಾಕ್ಟರ್ ಇದ್ದಿದ್ದರಿಂದ ಎಲ್ಲ ರೈತರಿಗೆ ಸಮಯಕ್ಕೆ ಸರಿಯಾಗಿ ಸಿಗುತ್ತಿರಲಿಲ್ಲ. ಹೀಗಾಗಿ ಬೇಡಿಕೆ ಕುಸಿದು ಬಂದ್‌ಆಗಿವೆ.
ಅರಕೇರಾದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ರೂರಲ್ ಡೆವೆಲೆಪ್‌ಮೆಂಟ್ ಸಂಸ್ಥೆ ಮುನ್ನಡೆಸಿದರೆ, ದೇವದುರ್ಗ, ಗಬ್ಬೂರು, ಜಾಲಹಳ್ಳಿಯಲ್ಲಿ ವರ್ಷ ಅಗ್ರಿಕಲ್ಚರ್ ಅಸೋಸಿಯೇನ್ ನಡೆಸುತ್ತಿತ್ತು. ಸದ್ಯ ಅರಕೇರಾ ಹೊರತುಪಡಿಸಿದರೆ ಉಳಿದ ಮೂರೂ ಕ್ಷೇತ್ರಗಳು ಬಂದ್‌ಆಗಿ ಎನ್‌ಜಿಒಗಳು ಯಂತ್ರಗಳನ್ನು ವಾಪಸ್ ಪಡೆದಿವೆ. ಒಂದೆರಡು ಬೆರಳೆಣಿಕೆ ಯಂತ್ರಗಳನ್ನು ಕೇಂದ್ರದಲ್ಲಿ ಬಿಟ್ಟಿದ್ದು, ಬಳಕೆಯಿಲ್ಲದೆ ತುಕ್ಕುಹಿಡಿದು ಹಾಳಾಗಿವೆ.
ಮಳೆಆಶ್ರಿತ ಪ್ರದೇಶದಲ್ಲಿ ಬಾಡಿಗೆ ಯಂತ್ರ ಪಡೆಯುವ ವಾಡಿಕೆಯಿದ್ದು, ವರ್ಷಪೂರ್ತಿ ಟ್ರ್ಯಾಕ್ಟರ್ ಕೆಲಸ ಇರಲಿದೆ. ನೀರಾವರಿ ಪ್ರದೇಶದಲ್ಲಿ ಟ್ರ್ಯಾಕ್ಟರ್ ಕೆಲಸ ಕಡಿಮೆ. ಬಹುತೇಕರು ವಾರ್ಷಿಕ ಬೆಳೆ ಹತ್ತಿ, ಮೆಣಸಿನಕಾಯಿ ಬೆಳೆಯುತ್ತಿದ್ದಾರೆ. ಈ ಬೆಳೆಗೆ ಆರಂಭಿಕವಾಗಿ ಟ್ರ್ಯಾಕ್ಟರ್ ಅವಶ್ಯವಿದ್ದು, ನಂತರ ಬೇಡಿಕೆಯಿರಲ್ಲ. ಭತ್ತದ ಗದ್ದೆಹಸನ ಮಾಡಿದ ಮೇಲೆ ಟ್ರ್ಯಾಕ್ಟರ್ ಕೆಲಸವೇ ಇರಲ್ಲ. ಹೀಗಾಗಿ ನೀರಾವರಿ ಪ್ರದೇಶದಲ್ಲಿ ಬಾಡಿಗೆ ಟ್ರ್ಯಾಕ್ಟರ್ ನಡೆಯಲ್ಲ ಎನ್ನುವುದು ರೈತರ ಅಭಿಪ್ರಾಯವಾಗಿದೆ.
ಬಂದ್‌ಗೆ ಹಲವು ಕಾರಣ
ಕೃಷಿ ಯಂತ್ರಧಾರೆ ಕೇಂದ್ರ ಬಂದ್‌ಗೆ ಅಸಮರ್ಪಕ ನಿರ್ವಹಣೆ ಪ್ರಮುಖ ಕಾರಣವಾಗಿದೆ. ಎನ್‌ಜಿಒ ಕೇಂದ್ರ ನಡೆಸುತ್ತಿದ್ದು ರೈತರ ಜತೆ ಸಂಪರ್ಕ ಸಾಧಿಸಿಲ್ಲ. ಬಹುತೇಕ ರೈತರು ಟ್ರ್ಯಾಕ್ಟರ್ ಬಾಡಿಗೆ, ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಸೇರಿ ಅಗತ್ಯ ಸಲಕರಣೆ ಮಾಲೀಕರ ಬಳಿ ಉದ್ರಿ ಮಾಡುತ್ತಾರೆ. ಬೆಳೆಕೈಗೆ ಬಂದ ನಂತರ ಬಡ್ಡಿದರಲ್ಲಿ ಉದ್ರಿ ತೀರಿಸುವ ವಾಡಿಕೆ ಮೊದಲಿನಿಂದಲೂ ಇದೆ. ಹೀಗಾಗಿ ರೈತರು ಕೃಷಿಯಂತ್ರ ಧಾರೆ ಬಾಡಿಗೆ ವಾಹನದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ವಾಹನ ಬಾಡಿಗೆ ಬೇಕಾದರೆ ಮುಂಗಡವಾಗಿ ಹಣ ಪಾವತಿ ಮಾಡಬೇಕು ಎನ್ನುವ ನಿಯಮ ರೈತರಿಗೆ ಮಾರಕವಾಗಿದೆ. ಮುಂಗಡವಾಗಿ ಬುಕ್‌ಮಾಡದ ಕಾರಣ ಕೇಂದ್ರಗಳು ಪ್ರಾರಂಭವಾದ ಆರಂಭದಲ್ಲೇ ಜೀಗ ಜಡಿದುಕೊಂಡಿವೆ.
ಮೂರೂ ಕಡೆ ಸ್ಥಳ ಬದಲಾವಣೆ
ಪಟ್ಟಣದ ಪ್ರವಾಸಿ ಮಂದಿರ ಸಮೀಪವಿದ್ದ ರೈತ ಸಂಪರ್ಕ ಕೇಂದ್ರದಲ್ಲಿ ಯಂತ್ರಧಾರೆ ಕೇಂದ್ರ ತೆರೆಯಲಾಗಿತ್ತು. ಗ್ರಾಮೀಣ ಭಾಗದ ರೈತರು ಇತ್ತ ಸುಳಿಯದ ಕಾರಣ ಆ ಕೇಂದ್ರವನ್ನು ಕೊಪ್ಪರ ಗ್ರಾಮಕ್ಕೆ ಸ್ಥಳಾಂತರ ಮಾಡಲಾಗಿತ್ತು. ಅಲ್ಲಿಯೂ ರೈತರಿಂದ ಸೂಕ್ತ ಸ್ಪಂದನೆ ಸಿಗದ ಕಾರಣ ಅದನ್ನು ಕೋಣಚಪ್ಪಳಿ ಗ್ರಾಮಕ್ಕೆ ಮತ್ತೆ ಸ್ಥಳಾಂತರಿಸಲಾಗಿದೆ. ಅಲ್ಲಿಯೂ ಸಮರ್ಪಕವಾಗಿ ನಡೆದಿಲ್ಲ. ಟ್ರ್ಯಾಕ್ಟರ್ ಡ್ರೈವರ್‌ಗಳಿಗೆ ವರ್ಷಪೂರ್ತಿ ಕೆಲಸ, ತಿಂಗಳಿಗೆ ಸರಿಯಾಗಿ ವೇತನ ನೀಡದ ಕಾರಣ ಚಾಲಕರು ಕೆಲಸಬಿಟ್ಟು ಹೋಗುತ್ತಿದ್ದಾರೆ. ಡ್ರೈವರ್ ಇಲ್ಲದೆ ಟ್ರ್ಯಾಕ್ಟರ್ ನಿಂತಲೇ ನಿಂತು ತುಕ್ಕುಹಿಡಿಯುತ್ತಿದ್ದು ಎನ್‌ಜಿಒ ವಾಹನ, ಸಾಮಗ್ರಿ ವಾಪಸ್ ಪಡೆದಿದೆ.

ಕೋಟ್=====

ನಾಲ್ಕು ಕಡೆ ಕೃಷಿ ಯಂತೃಧಾರೆ ಕೇಂದ್ರ ತೆರೆಯಲಾಗಿದ್ದು, ಅರಕೇರಾದಲ್ಲಿ ಮಾತ್ರ ಸಮರ್ಪಕವಾಗಿ ನಡೆಯುತ್ತಿದೆ. ನಾನಾ ಕಾರಣದಿಂದ ಗಬ್ಬೂರು, ಜಾಲಹಳ್ಳಿ, ಕೋಣಚಪ್ಪಳಿ ಕೇಂದ್ರ ಬಂದ್‌ಆಗಿವೆ. ಎನ್‌ಜಿಒಗೆ ಎರಡ್ಮೂರುಸಲ ನೋಟಿಸ್ ನೀಡಿದ್ದು ಪ್ರತಿಕ್ರಿಯೆ ಬಂದಿಲ್ಲ. ರೈತರು ಕೂಡ ಬಾಡಿಗೆ ಯಂತ್ರಗಳ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ.
-ಬಸವರಾಜ ಸಿದ್ದರೆಡ್ಡಿ
ಸಹಾಯಕ ಕೃಷಿ ನಿರ್ದೇಶಕ

ಕೋಟ್======

ಕೃಷಿ ಯಂತ್ರಧಾರೆ ಯೋಜನೆ ತಾಲೂಕಿನಲ್ಲಿ ಸಂಪೂರ್ಣವಾಗಿ ಹಳ್ಳಹಿಡಿದೆ. ಎನ್‌ಜಿಒಗಳು ಅನುದಾನ ತಿಂದು ಕುಳಿತಿವೆ ವಿನಹ ಯಾವ ರೈತರಿಗೂ ವಾಹನ ಬಾಡಿಗೆ ನೀಡಿಲ್ಲ. ಡಿಸೇಲ್ ಇಲ್ಲ, ಡ್ರೈವರ್ ಇಲ್ಲ ಎನ್ನುವ ನೆಪ ಹೇಳುತ್ತಿವೆ. ಗಬ್ಬೂರು, ಜಾಲಹಳ್ಳಿ ಕೇಂದ್ರದಲ್ಲಿ ವಾಹನಗಳೇ ಇಲ್ಲ. ಅಧಿಕಾರಿಗಳು ಕೂಡ ಫಾಲೋಅಪ್ ಮಾಡುತ್ತಿಲ್ಲ.
-ಬೂದಯ್ಯಸ್ವಾಮಿ ಗಬ್ಬೂರು
ರೈತ ಸಂಘದ ತಾಲೂಕು ಅಧ್ಯಕ್ಷ

ಪೋಟೋ೨೫ಡಿವಿಡಿ,-೦೨,೩,