ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವ ಪತ್ತೆ: ತಕ್ಷಣವೇ 5 ಲಕ್ಷ ರೂ ಪರಿಹಾರ ವಿತರಣೆ

ಕಲಬುರಗಿ,ಜು.23: ಕಲಬುರಗಿ ತಾಲೂಕಿನ ಕಡಣಿ ಗ್ರಾಮದ ಹೊರವಲಯದ ಹಳ್ಳದಲ್ಲಿ ಶುಕ್ರವಾರ ರಾತ್ರಿ ಕೊಚ್ಚಿ ಹೋಗಿದ್ದ ವ್ಯಕ್ತಿ ಶನಿವಾರ ಶವವಾಗಿ ಪತ್ತೆಯಾಗಿದ್ದು, ಅಂತ್ಯಕ್ರಿಯೆ ಮುಂಚೆಯೇ ಮೃತರ ಕುಟುಂಬಕ್ಕೆ ಐದು ಲಕ್ಷ ರೂ ಪರಿಹಾರ ವಿತರಿಸಲಾಯಿತು.

ಒಂದು ಕಿಲೋ ಮೀಟರನಷ್ಟು ದೂರದಲ್ಲಿ ಮುಳ್ಳು ಕಂಟಿಯಲ್ಲಿ ಸಿಲುಕಿರುವ ದೇಹ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ. ಸಿದ್ದು ಕೆರಮಗಿ (36) ಮಳೆ ಅನಾಹುತಕ್ಕೆ ಬಲಿಯಾದ ಯುವಕ.

ಶುಕ್ರವಾರ ಸಂಜೆ ಧಾರಾಕಾರ ಮಳೆ ಸುರಿದ್ದಿದ್ದು, ಹೊಲದಲ್ಲಿ ಕಾಯಿಪಲ್ಯ ತರಲು ಹೋಗಿದ್ದ ಟಂಟಂ ವಾಹನ ಸಿಕ್ಕಿಬಿದ್ದಿರುವುದನ್ನು ಹೊರ ತೆಗೆಯಲು ಟ್ರ್ಯಾಕ್ಟರ್ ಹೊರಟಿತ್ತು. ಜೋರಾದ ಮಳೆಗೆ ಹಳ್ಳ ತುಂಬಿದ ಕಾರಣ ಟ್ರ್ಯಾಕ್ಟರ್ ನೀರಿನ ರಭಸಕ್ಕೆ ನೀರಲ್ಲಿ ಹರಿದು ಹೋಯಿತು. ಟ್ರ್ಯಾಕ್ಟರ್ ಚಾಲಕ ಮಾತ್ರ ಕಂಟಿಯೊಂದನ್ನು ಹಿಡಿದು ಸ್ವಲ್ಪ ಸಮಯದ ನಂತರ ಹೊರ ಬಂದ. ಆದರೆ ಟ್ರ್ಯಾಕ್ಟರ್ ನಲ್ಲಿದ್ದ ಸಿದ್ದು ಕೆರಮಗಿ ಮಾತ್ರ ನೀರಲ್ಲಿ ಕೊಚ್ಚಿಕೊಂಡು ಹೋದರು.

ಇವರ ಪತ್ತೆಗಾಗಿ ಶುಕ್ರವಾರ ರಾತ್ರಿಯಿಡಿ ಅಗ್ನಿಶಾಮಕ ದಳ ಹಾಗೂ ಇತರರು ಶೋಧ ನಡೆಸಿದರೂ ಸಿಗಲಿಲ್ಲ. ಶನಿವಾರ ಬೆಳಿಗ್ಗೆ ಶವ ಪತ್ತೆಯಾಗಿದೆ.

5 ಲಕ್ಷ‌ ರೂ.ಪರಿಹಾರ ಚೆಕ್ ವಿತರಣೆ:

ಶವ ಪತ್ತೆಯಾದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ಮುಂಚೆಯೇ ಮೃತರ ಪತ್ನಿ ನಂದಿನಿ ಅವರಿಗೆ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರು ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಅವರು ನೈಸರ್ಗಿಕ ವಿಕೋಪ ಪರಿಹಾರ ನಿಧಿಯಿಂದ 5 ಲಕ್ಷ ರೂ. ಪರಿಹಾರ ವಿತರಿಸಿದರು. ಇದಲ್ಲದೆ‌ ನಿರ್ಗತಿಕ ವಿಧವಾ ವೇತನದ ಮಂಜೂರಾತಿ ಪತ್ರ ಸಹ ಮೃತರ‌ ಪತ್ನಿಗೆ ನೀಡಲಾಯಿತು.

ಕಲಬುರಗಿ ತಹಶೀಲ್ದಾರ ಪ್ರಕಾಶ ಕುದರಿ ಸೇರಿದಂತೆ ಕಂದಾಯ‌ ನಿರೀಕ್ಷಕರು, ಗ್ರಾಮ‌ ಲೆಕ್ಕಾಧಿಕಾರಿಗಳು ಮುಂತಾದವರಿದ್ದರು. ನಂತರ ಮೃತ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿತು.