
ಸಂಜೆವಾಣಿ ವಾರ್ತೆಕುರುಗೋಡು:ಆ.28: ತಾಲೂಕು ಸಮೀಪದ ಬಾದನಹಟ್ಟಿ ಗ್ರಾಮದಲ್ಲಿ ಶನಿವಾರ ಸಂಜೆ ಗುರುವಂದನೆ ಮತ್ತು ಸ್ನೇಹಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.1980 ರಿಂದ 2005ರ ವರೆಗೆ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸಿದ ಗುರುಗಳನ್ನು, ಗುರುಮಾತೆಯರನ್ನು ಕರೆತಂದು ಅವರಿಗೆ ಸನ್ಮಾನಿಸಿ ಗೌರವಿಸಿ ಭಕ್ತಿ ಮೆರೆದರು.ಅಲಂಕೃತ ವಾಹನದಲ್ಲಿ ಶಿಕ್ಷಕರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕೆರೆತರಲಾಯಿತು,ಗ್ರಾಮದ ಬಾವಿ ಆಂಜನೇಯಸ್ವಾಮಿ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಉಡಸಲಮ್ಮ ದೇವಿ ದೇವಸ್ಥಾನ ಮುಂಭಾಗದ ಮುಖ್ಯ ವೇದಿಕೆಯಲ್ಲಿ ಸಮಾವೇಶಗೊಂಡಿತು.ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಸೇರಿದ್ದ ಜನರು ನೆಚ್ಚಿನ ಗುರುಗಳ ಮೆರವಣಿಗೆಯ ಸೊಬಗು ಕಣ್ತುಂಬಿಕೊಂಡರು.ಹಳೇ ವಿದ್ಯಾರ್ಥಿಯಾದ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಅಧಿಕಾರಿಗಳಾದರೂ ಅವರಿಗೆ ಪ್ರಾಥಮಿಕ ಶಿಕ್ಷಣ ನೀಡಿದ ಗುರುಗಳನ್ನು ಎಂದು ಮರೆಯಬಾರದು. ಅವರು ನೀಡಿದ ಅಕ್ಷರ ಭಿಕ್ಷೆಯ ಫಲವಾಗಿ ನಾವು ಸಾಧಿಸಲು ಸಾಧ್ಯವಾಯಿತು ಎಂದರು.ಗ್ರಾಮದ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಆರ್ಥಿಕ ಸಹಾಯ ಬಯಸಿದರೆ ಸಹಾಯ ಮಾಡಲು ಸಿದ್ದ ಎಂದು ವೇದಿಕೆಯಲ್ಲೇ ಭರವಸೆ ನೀಡಿದರು.ಹಳೇ ವಿದ್ಯಾರ್ಥಿ ಪಿ.ಎಸ್.ಐ ಆರ್.ವೀರನಗೌಡ ಮಾತನಾಡಿ, ಒಂದೇ ವೇದಿಕೆಯಲ್ಲಿ ನಮಗೆ ಪ್ರಾಥಮಿಕ ಶಿಕ್ಷಣ ನೀಡಿದ ಗುರುಗಳನ್ನು ನೋಡಲು ಅವಕಾಶ ಕಲ್ಪಿಸಿದ ಎಲ್ಲ ಹಳೆಯ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ತಿಳಿಸಿದರು .ಗ್ರಾಮದಲ್ಲಿ ಕೇವಲ ಬೆರಳೆಣಿಕೆ ಸಂಖ್ಯೆಯಲ್ಲಿ ಸರ್ಕಾರಿ ನೌಕರರಿದ್ದಾರೆ. ತಂದೆ ತಾಯಿ ಮಾಡಿದ ಆಸ್ತಿಯಲ್ಲಿ ಬದುಕುವುದನ್ನು ಬಿಡಬೇಕು. ವಿದ್ಯಾರ್ಥಿ ದೆಸೆಯಲ್ಲಿ ಕಷ್ಟಪಟ್ಟು ಓದಿ ಸರ್ಕಾರಿ ನೌಕರಿ ಪಡೆದುಕೊಳ್ಳಬೇಕು. ಗ್ರಾಮದ ಬಡ ವಿದ್ಯಾರ್ಥಿಗಳಿಗೂ ಸಹಾಯ ಮಾಡಬೇಕು ಎಂದು ಸಲಹೆ ನೀಡಿದರು. ನಿವೃತ್ತ ಶಿಕ್ಷಕ ಕೆ.ಎಂ. ಮಲ್ಲಪ್ಪ ಮಾತನಾಡಿ, ನಾನು ಶಿಕ್ಷಕನಾಗಿದ್ದಾಗ ಆ ಸಮಯದಲ್ಲಿ ಐದನೇ ತರಗತಿಯಲ್ಲಿ ಕೇವಲ 5 ಜನ ವಿದ್ಯಾರ್ಥಿಗಳಿದ್ದರು.ಮನೆಮನೆಗೆ ಹೋಗಿ ಪೋಷಕರನ್ನು ಮನೊಲಿಸಿ ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸ ಮಾಡಿದೆವು.ನಂತರದ ವರ್ಷ 6 ಮತ್ತು 7ನೇ ತರಗತಿ ಪ್ರಾರಂಭಿಸಿದೆವು. ಇಂದು ಪ್ರೌಢಶಾಲೆ ಶಿಕ್ಷಣ ಕೂಡ ಇಲ್ಲಿಯೇ ದೊರೆಯುತ್ತಿರುವುದು ಉತ್ತಮ ಬೆಳವಣಿಗೆ ಎಂದರು.ನಿವೃತ್ತ ಶಿಕ್ಷಕ ಬಿ.ಪಂಚಕ್ಷರಯ್ಯ ಸ್ವಾಮಿ ಮಾತನಾಡಿ, ಶಾಲೆಯಲ್ಲಿ ಪಾಠಹೇಳಿಕೊಟ್ಟ ಶಿಕ್ಷಕರು ಮಾತ್ರ ಗುರುಗಳಲ್ಲ ಅವರ ಜತೆಗೆ ತಾಯಿ, ತಂದೆ ಗುರುಗಳು. ಅವರನ್ನು ಎಲ್ಲರೂ ಗೌರವಿಸಬೇಕು. ಶಿಕ್ಷಣ ಎಂದರೆ ಕೇವಲ ಅಕ್ಷರ ಜ್ಞಾನ ಮಾತ್ರ ಅಲ್ಲ. ಗುರುಹಿರಿಯರನ್ನು ಗೌರವಿಸುವುದು ಒಂದು ಶಿಕ್ಷಣ ಅದನ್ನು ಮನೆಯಲ್ಲಿ ಪೋಷಕರು ಕಲಿಸುತ್ತಾರೆ. ಆದ್ದರಿಂದ ಗುರುಗಳ ಜತೆಗೆ ತಂದೆ. ತಾಯಿಯನ್ನು ಗೌರವಿಸಬೇಕು ಎಂದು ಸಲಹೆ ನೀಡಿದರು.ಶಿಕ್ಷಕ ಕೋದಂಡರಾಮ ರೆಡ್ಡಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಿಂದ ಏನನ್ನು ಬಯಸುವುದಿಲ್ಲ. ಅವರು ಉತ್ತಮ ಶಿಕ್ಷಣ ಪಡೆದುಕೊಂಡರೆ ಅದೇ ಗುರುಗಳಿಗೆ ನೀಡುವ ಗುರುದಕ್ಷಣೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲೆ ಮುಖ್ಯ ಶಿಕ್ಷಕಿ ನಿರ್ಮಲಾ ವಹಿಸಿದ್ದರು. ಶಿಕ್ಷಕರಾದ ಕೆ.ಎಂ.ಮಲ್ಲಪ್ಪ, ಬಿ.ಪಂಚಕ್ಷರಯ್ಯ ಸ್ವಾಮಿ, ನಾಗಪ್ಪ, ಅಮರೇಶ್ ಗೌಡ, ಬಸವರಾಜ, ವೆಂಕಟರಮಣಮ್ಮ, ನಾಗಲಕ್ಷ್ಮಿ , ಮುಕ್ಕಣ್ಣ, ದೇವೇಂದ್ರಪ್ಪ, ಚಂದ್ರಣ್ಣ, ಅನುವೇಲು, ಶ್ರೀದೇವಿ ಕಾಸ್ಲೆ, ಗಾಯಿತ್ರಿ, ಪಾರ್ವತಿ, ಕೋದಂಡರಾಮರೆಡ್ಡಿ, ಪದ್ಮರಾಜನಾಯಕ್, ಶೇಕ್ಷಾವಲಿ, ಗೋವರ್ಧನ, ರಾಘವೇಂದ್ರ ರೆಡ್ಡಿ, ಮೂಗಪ್ಪ, ಗಂಗಾಧರಪ್ಪ, ಹನುಮೇಶ್ ಮತ್ತು ರಿಜ್ವಾನಾ ಬೇಗಂ ಇವರು ಭಾಗವಹಿಸಿ ಕಾರ್ಯಕ್ರಮದ ಕಳೆ ಹೆಚ್ಚಿಸಿದ್ದರು.ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಗಳನ್ನು ಪ್ರದರ್ಶಿಸಿದರು.