ಹಳೇ ಮೈಸೂರು ಭಾಗ, ಕಾಂಗ್ರೆಸ್ ಭದ್ರಕೋಟೆ

ಮೈಸೂರು:ಜ:05: ಇತ್ತೀಚೆಗೆ ರಾಜ್ಯಾದ್ಯಂತ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕ ಸಂಖ್ಯೆಯಲ್ಲಿ ಜಯಶೀಲರಾಗುವ ಮೂಲಕ ಇಲ್ಲಿ ಕಾಂಗ್ರೆಸ್ ಭದ್ರಕೋಟೆಯಂತಿದೆ ಎಂದು ಮಾಜಿ ಸಂಸದ ಆರ್. ಧೃವನಾರಾಯಣ್ ಹೇಳಿದರು.
ಅವರು ಇಂದು ಬೆಳಿಗ್ಗೆ ನಗರದ ರೈಲು ನಿಲ್ದಾಣದ ಬಳಿ ಇರುವ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ 249 ಗ್ರಾ.ಪಂ.ಗಳಿದ್ದು, ಇದರಲ್ಲಿ 1ಕ್ಕೆ ಚುನಾವಣೆ ನಡೆದಿಲ್ಲ. ಉಳಿದ 248ಕ್ಕೆ ನಡೆದ ಚುನಾವಣೆಯಲ್ಲಿ 170ರಲ್ಲಿ ಕಾಂಗ್ರೆಸ್‍ನ ಬೆಂಬಲಿತ ಅಭ್ಯರ್ಥಿಗಳು ಜಯಶೀಲರಾಗುವುದರೊಂದಿಗೆ ಕಾಂಗ್ರೆಸ್‍ನ ಭದ್ರಕೋಟೆಯನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದರು.
ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಪ್ರಥಮ ಸ್ಥಾನದಲ್ಲಿದ್ದಾರೆ. 32829 ಮಂದಿ ಅಭ್ಯರ್ಥಿಗಳಿದ್ದಾರೆ.
30853 ಅಭ್ಯರ್ಥಿಗಳನ್ನೊಂಡ ಬಿಜೆಪಿ ಎರಡನೇ ಸ್ಥಾನದಲ್ಲಿದ್ದು, 16,841 ಜಾತ್ಯಾತೀತ ದಳದ ಅಭ್ಯರ್ಥಿಗಳು 3ನೇ ಸ್ಥಾನದಲ್ಲಿದ್ದಾರೆಂದು ಅಂಕಿಅಂಶಗಳ ಸಹಿತ ಧೃವನಾರಾಯಣ್ ವಿವರ ನೀಡಿದರು. ಅಲ್ಲದೆ ಇಡೀ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ 4,238 ಸ್ಥಾನಗಳಿಗೆ ಎದುರಾಗಿ 2,341 ಮಂದಿ ನಮ್ಮ ಪಕ್ಷದ ಅಭ್ಯರ್ಥಿಗಳೇ ಆಗಿರುವುದು ಅಧಿಕೃತವಾಗಿ ಘೋಷಿಸಿದೆ ಎಂದು ಹೇಳಿದರು.
ರಾಷ್ಟ್ರಾಧ್ಯಂತ ಪ್ರಪ್ರಥಮ ಭಾರಿಗೆ ಪಂಚಾಯತ್‍ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸಿದವರು ದಿ|| ಅಬ್ದುಲ್‍ನಜೀರ್‍ಸಾಬ್ ಆಗಿದ್ದು ಅವರ ದೂರ ದೃಷ್ಠಿಯಿಂದಾಗಿ ಗ್ರಾ.ಪಂ.ಗಳಿಗೆ ಹೆಚ್ಚಿನ ಬಲ ಸಿಕ್ಕಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿರುವ ಎಲ್ಲಾ ರೀತಿಯ ಕಾರ್ಯಕ್ರಮಗಳು ಗ್ರಾ.ಪಂ. ಮಟ್ಟದಿಂದಲೇ ನೆಡೆಯಬೇಕೆಂಬ ಮಹದಾಸೆಯನ್ನು ನಜೀರ್‍ಸಾಬ್ ಹೊಂದಿದ್ದರು ಎಂದರು.
ಇದರೊಂದಿಗೆ ಅವರು ಅಧಿಕಾರ ವಿಕೇಂದ್ರಿಕರಣವೂ ಗ್ರಾ.ಪಂ.ಗಳಲ್ಲಿ ಅಗಬೇಕೆಂಬ ಉದ್ದೇಶವನ್ನು ಹೊಂದಿದ್ದರು. ಗ್ರಾ.ಪಂ ಮೂಲಕ ಅನೇಕ ಜನೋಪಯೋಗಿ ಕಾರ್ಯಕ್ರಮಗಳು ಇಂದಿಗೂ ನಡೆಯುತ್ತಿದ್ದು, ಗ್ರಾಮಾಂತರ ಪ್ರದೇಶದ ಜನತೆ ಅವರನ್ನು ಇಂದಿಗೂ ನೆನಪು ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸುವುದಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಮ್ಮ ಅಧಿಕಾರದ ಅವಧಿಯಲ್ಲಿ ಗ್ರಾ.ಪಂ.ಗಳಿಗೆ ಹೆಚ್ಚು ಒತ್ತು ನೀಡಿದ್ದರ ಫಲವಾಗಿ ಗ್ರಾ.ಪಂ.ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಗೆ ಪ್ರಮುಖ ಕಾರಣ ಎಂದರು.
ಇದೇ ರೀತಿಯ ಫಲಿತಾಂಶಗಳು ನೆರೆಯ ಚಾಮರಾಜನಗರ ಜಿಲ್ಲೆಯಲ್ಲಿ ಹೊರಬಿದ್ದಿದೆ. ಅಲ್ಲಿ ನಡೆದ ಚುನಾವಣೆಯಲ್ಲಿ 2159 ಮಂದಿ ಸ್ಪರ್ಧಿಸಿದ್ದು, ಇದರಲ್ಲಿ 1,135 ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಕೋವ್ಯಾಕ್ಸಿನ್ಸ್ ಹಂಚಿಕೆ ವಿಚಾರದಲ್ಲಿ ರಾಜಕೀಯ ಮಾಡಬಾರದು. ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆ ಪೂರ್ಣಗೊಂಡಿಲ್ಲ. ಸಂಶೋಧನೆಯ ಸಂಬಂಧಿಸಿದ ಅಂಕಿ ಅಂಶಗಳು ಬಿಡುಗಡೆ ಮಾಡಿಲ್ಲ. ಹೀಗಾಗಿ, ಜನರಲ್ಲಿ ಅಪನಂಬಿಕೆ ಸಂಶಯ ಮೂಡಿದೆ. ಇದನ್ನು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹರ್ಷವರ್ದನ್ ಅವರು ನಿವಾರಣೆ ಮಾಡಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನರಲ್ಲಿ ಇರುವ ಗೊಂದಲ ಪರಿಹರಿಸಲು ಮುಂದಾಗಬೇಕು ಎಂದು ಹೇಳಿದರು.
ಇಂದಿನ ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಗ್ರಾ.ಪಂ.ಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಇಂದು ಹೆಚ್.ಡಿ. ಕೋಟೆ, ಜ:08ರಂದು ಕೆ.ಆರ್.ನಗರ, 10ರಂದು ಹುಣಸೂರು, 11 ಪಿರಿಯಾಪಟ್ಟಣ ಹಾಗೂ 13ರಂದು ವರುಣಾ ಕ್ಷೇತ್ರಗಳಲ್ಲಿ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ ಧೃನವಾರಾಯಣ್ 13ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸನ್ಮಾನ ಸಮಾರಂಭದಲ್ಲಿ ಖುದ್ದು ಉಪಸ್ಥಿತರಿರುತ್ತಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ, ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಮುಖಂಡರಾದ ಸುನಿಲ್ ಬೋಸ್, ಎಸ್.ಡಿ.ರವಿಶಂಕರ್, ಜಿ.ವಿ.ಸೀತಾರಾಮ್ ಇತರರು ಇದ್ದರು.