ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಯಶಸ್ವಿ

ಕಲಬುರಗಿ:ಜು.11: ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ಸರಕಾರಿ ಮಾದರಿಯ ಪ್ರಾಥಮಿಕ (ದರ್ಬಾರ್) ಶಾಲೆಯ 1982-83ನೇ ಸಾಲಿನ ಏಳನೇ ತರಗತಿ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮತ್ತು ಗುರುವಂದನಾ ಕಾರ್ಯಕ್ರಮ ರವಿವಾರ ನಗರದ ಸುಸ್ವಾದ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.
`ಹಳೆ ಬೇರು ಹೊಸ ಚಿಗುರು’ ಘೋಷವಾಕ್ಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಆಗಿನ ಸುಮಾರು 30ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಐವರು ಶಿಕ್ಷಕರು, ಅವರ ಕುಟುಂಬದವರು ಪಾಲ್ಗೊಂಡು ದಿನವಿಡೀ ಹಳೆಯ ನೆನಪುಗಳನ್ನು ಮೆಲಕು ಹಾಕಿ ಸಂಭ್ರಮಿಸಿದರು.
ಕೋಲಾಟ, ಲೇಜಿಮ್, ಗಾನ ಸ್ಪರ್ಧೆ, ಮ್ಯುಸಿಕಲ್ ಚೇರ್, ಹಳೆಯ ಹಾಡುಗಳ ಗಾಯನ ಮತ್ತಿತರ ಮನರಂಜನಾ ಕಾರ್ಯಕ್ರಮ ನಡೆದವು.
ನಲವತ್ತು ವರ್ಷಗಳ ಬಳಿಕ ಒಂದೆಡೆ ಸೇರುತ್ತಿರುವುದೇ ಒಂದು ವಿಸ್ಮಯವಾಗಿದೆ. ಅಂದು ಶಾಲೆ ಬಿಟ್ಟು ಬೇರೆ ಕಡೆ ಹೋದ ನಂತರ ಯಾರೂ ಸಂಪರ್ಕದಲ್ಲಿರಲಿಲ್ಲ. ಎಲ್ಲೆಲ್ಲೋ ಹರಿದುಹಂಚಿಹೋಗಿದ್ದೆವು. ಕೇವಲ ಮೂರು ತಿಂಗಳಲ್ಲಿ ಒಬ್ಬರಿಂದೊಬ್ಬರು ಸಂಪರ್ಕಕ್ಕೆ ಬಂದು ಈಗ ಕುಟುಂಬದವರೊಂದಿಗೆ ಒಟ್ಟಾಗಿ ಸೇರಿದ್ದು ಭಾರಿ ಖುಷಿ ತಂದಿದೆ. ಬಾಲ್ಯದ ದಿನಗಳನ್ನು ನೆನೆದು ಎಲ್ಲರೂ ಭಾವುಕರಾಗಿದ್ದೇವೆ ಎಂದು ಅನೇಕರು ಅಭಿಪ್ರಾಯಪಟ್ಟರು.
ಅಂದು ಶಿಕ್ಷಕರಾಗಿದ್ದ ರಾಜಲಕ್ಷ್ಮೀಬಾಯಿ, ಚನ್ನಬಸಯ್ಯ, ಲಲಿತಾಬಾಯಿ, ಪವಾಡಬಸಯ್ಯ ಹಾಗೂ ವೆಂಕಟೇಶ್ ಅವರು ಪಾಲ್ಗೊಂಡು ತಮ್ಮ ಹಳೆಯ ವಿದ್ಯಾರ್ಥಿಗಳನ್ನುದ್ದೇಶಿಸಿ ಹಿತವಚನ ನೀಡಿದ್ದು ವಿಶೇಷವಾಗಿತ್ತು.
ಮುರಳಿಧರ ಕರಲಗಿಕರ್, ಉಮೇಶ ಸಪ್ಪಂಡಿ, ಶ್ರೀಧರ್, ಗಂಗಾಧರ್, ಚಂದ್ರು, ಪಂಪಣ್ಣ, ರಾಘವೇಂದ್ರ, ಗಿರೀಶ್, ರಮೇಶ ಜೈನ್, ಸುರೇಶ ರೋಣಿಹಾಳ, ಸುರೇಶ ದೇಸಾಯಿ, ಕೃಷ್ಣ ದರ್ಬಾರಿ, ಶಿವಕುಮಾರ್, ಕುಸುಮಾ ದೇಸಾಯಿ, ಕವಿತಾ ಶಾಸ್ತ್ರಿ, ಲೀಲಾ, ಪುಷ್ಪಾ, ಸರೋಜಾ, ಸಂಗೀತಾ ಮತ್ತಿತರರು ಪಾಲ್ಗೊಂಡಿದ್ದರು. ಕು. ದೀಕ್ಷಿತಾ ಝಾಂಗಡ್ ನಿರೂಪಿಸಿದರು.