ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಯಶಸ್ವಿಗೆ ಕೈಜೋಡಿಸಿ : ಪಾಟೀಲ

ಸಂಜೆವಾಣಿ ವಾರ್ತೆ
ಔರಾದ್ :ಫೆ.23: ತಾಲೂಕಿನ ಸಂತಪೂರ ಗ್ರಾಮದ ಸುಭಾಷ್ ಚಂದ್ರ ಬೋಸ್ ಪ್ರೌಢ ಶಾಲೆಯಲ್ಲಿ ಇದೇ ಫೆ. 24ರಂದು ಶನಿವಾರ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ ಹಾಗೂ ಗುರುವಂದನಾ ಕಾರ್ಯಕ್ರಮ ಯಶಸ್ವಿಗೆ ಕೈಜೋಡಿಸಿ ಎಂದು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಂತೋಷ ಪಾಟೀಲ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಎಲ್ಲ ರೀತಿಯ ಸಿದ್ಧತೆಗಳು ಮಾಡಿಕೊಂಡಿದ್ದು, ಈ ಹಿಂದೆ ತಾಲೂಕಿನಲ್ಲಿಯೇ ಇಂತಹ ಕಾರ್ಯಕ್ರಮ ನಡೆದಿಲ್ಲ. ಶಾಲೆ ಆರಂಭವಾಗಿ 40 ವರ್ಷವಾಗಿದ್ದು, ಎಲ್ಲ ಹಳೆ ವಿದ್ಯಾರ್ಥಿಗಳಿಗೆ ಆಹ್ವಾನಿಸಲಾಗಿದೆ. ಮಾದ್ಯಮ, ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಸುದ್ದಿ ಮುಟ್ಟಿಸಲಾಗುತ್ತಿದೆ ಎಂದರು.
ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಹಿಪ್ಪಳಗಾಂವೆ, ಶಿಕ್ಷಕ ಗುರುನಾಥ ದೇಶಮುಖ ಮಾತನಾಡಿ, ನಮ್ಮ ಶಾಲೆಯ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಳೆ ವಿದ್ಯಾರ್ಥಿಗಳಿಂದ ಗುರುವಂದನಾ ಸ್ವೀಕರಿಸುತ್ತಿರುವುದು ನಮ್ಮ ಪೂರ್ವ ಜನ್ಮದ ಪುಣ್ಯವಿದೆ ಎಂದರು.
ಹಳೆ ವಿದ್ಯಾರ್ಥಿ ಡಾ. ನಾಗನಾಥ ಕೌಟಗೆ ಮಾತನಾಡಿ ಆದರ್ಶ ಶಿಕ್ಷಕರಿಂದ ನಾವು ಉನ್ನತ ಹುದ್ದೆಗೆ ಹೋಗಲು ಸಾಧ್ಯವಾಗಿದೆ. ಎಲ್ಲ ವಿದ್ಯಾರ್ಥಿಗಳು ತನು, ಮನ, ಧನದಿಂದ ಸಹಾಯ ಮಾಡುತ್ತಿದ್ದೇವೆ. ಈ ಕಾರ್ಯಕ್ರಮ ಮಾದರಿಯಾಗಲಿದೆ ಎಂದರು.
ಎಬಿವಿಪಿ ಪ್ರಮುಖ ಅಶೋಕ ಶೆಂಬೆಳ್ಳಿ ಮಾತನಾಡಿ ಕಾರ್ಯಕ್ರಮದಲ್ಲಿ 3-4 ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದು, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣೆಗೆ ನಡೆಯಲಿದೆ ಎಂದರು. ಈ ಸಂದರ್ಭದಲ್ಲಿ ಪ್ರಮುಖರಾದ ಗಫರಖಾನ, ಶಿವರಾಜ ಜುಲಂಡೆ, ಜೆಸ್ಕಾಂ ಸಹಾಯಕ ಎಂಜಿನಿಯರ್ ವೈನೋದ್ಧಿನ್, ಗುಂಡಪ್ಪ ವಲ್ಲೂರೆ, ದಿಲೀಪ ಪಾಂಡ್ರೆ, ಭಜರಂಗ ಪಾಂಡ್ರೆ, ಬಾಬಾ ಸೈಲಾನಿ ಸೇರಿದಂತೆ ಅನೇಕರಿದ್ದರು.