ಹಳೆರಂಗಾಪುರದಲ್ಲಿ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ

ಚಿತ್ರದುರ್ಗ ಜ. 22;ಗ್ರಾಮಗಳಲ್ಲಿ ಶಾಲೆ ಕಟ್ಟಡಗಳು, ಕೊಠಡಿಗಳು, ಅಂಗನವಾಡಿಗಳನ್ನು ನಿರ್ಮಿಸಿ, ಮಕ್ಕಳಿಗೆ ಉತ್ತಮ ಕಲಿಕಾ ವಾತಾವರಣ ಒದಗಿಸಿ, ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಲು ನಾವು ಆದ್ಯತೆ ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ಹೇಳಿದರು.ಭರಮಸಾಗರ ಹೋಬಳಿ ಸಿರಿಗೆರೆ ಗ್ರಾ.ಪಂ. ವ್ಯಾಪ್ತಿಯ ಹಳೆರಂಗಾಪುರ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾಧಿಕಾರಿ ಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಜನರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.  ಅದರಲ್ಲೂ ಮುಖ್ಯವಾಗಿ ಹಿಂದುಳಿದ, ಪರಿಶಿಷ್ಟ ಜಾತಿ, ಪ. ಪಂಗಡದವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕು, ಉತ್ತಮ ಶಿಕ್ಷಣದಿಂದ ಮಾತ್ರ ಮಕ್ಕಳ ಭವಿಷ್ಯವನ್ನು ಉಜ್ವಲ ಗೊಳಿಸಲು ಸಾಧ್ಯ.  ಉತ್ತಮ ಶಾಲೆಗಳು, ಅಂಗನವಾಡಿಗಳು, ಶಾಲೆಗೆ ಕಾಂಪೌಂಡ್, ಶೌಚಾಲಯ ಹೀಗೆ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮವಾದ ಕಲಿಕ ವಾತಾವರಣ ನಿರ್ಮಿಸಿಕೊಡುವುದು ನಮ್ಮ ನಿಮ್ಮೆಲ್ಲೆರ ಜವಾಬ್ದಾರಿಯಾಗಿದೆ.  ನರೇಗಾ ಯೊಜನೆಯಡಿ ಗ್ರಾಮಗಳ ಅಭಿವೃದ್ಧಿ ಸಾಧ್ಯವಿದ್ದು, ಇದು ಬೇಡಿಕೆ ಅಧಾರದಲ್ಲಿ ಕೊಡುವ ಉದ್ಯೋಗವಾಗಿರುವುದರಿಂದ, ಜನರಿಗೂ ಕೆಲಸ ದೊರೆತು, ಗ್ರಾಮಗಳೂ ಅಭಿವೃದ್ಧಿ ಯಾಗಲು ಸಾಧ್ಯ ಎಂದರು. ಸಾರ್ವಜನಿಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವಾರು  ಯೋಜನೆಗಳನ್ನು ಜಾರಿಗೊಳಿಸುತ್ತದೆ.  ಈ ಎಲ್ಲ ಯೋಜನೆಗಳ ಬಗ್ಗೆ ಜನರು ಅರಿತುಕೊಳ್ಳಬೇಕು.  ಗ್ರಾಪಂ ಗಳಲ್ಲಿ ಗ್ರಾಮ ಸಭೆಗಳನ್ನು ಸಮರ್ಪಕವಾಗಿ ನಡೆಸಬೇಕು.  ಸರ್ಕಾರದ ಯಾವುದೇ ಯೋಜನೆ ಇರಲಿ, ಅದು ಕಟ್ಟ ಕಡೆಯ ವ್ಯಕ್ತಿಗೆ ತಲುಪಿದಾಗಲೆ ಆ ಯೋಜನೆ ಯಶಸ್ವಿಯಾಗಲು ಹಾಗೂ ಸರ್ಕಾರದ ಉದ್ದೇಶ ಈಡೇರಲು ಸಾಧ್ಯ.  ಕೆಳ ಹಂತದ ಅಧಿಕಾರಿಗಳಿಂದ ಗ್ರಾಮಗಳ ಜನರ ಸಮಸ್ಯೆ ಅರಿಯುವ ಬದಲಿಗೆ, ಜಿಲ್ಲಾಧಿಕಾರಿಗಳೇ ಗ್ರಾಮಗಳಿಗೆ ತೆರಳಿ, ಜನರೊಂದಿಗೆ ಸಂವಾದ ನಡೆಸಿ, ಅವರ ಸಮಸ್ಯೆಗಳು, ಅಹವಾಲುಗಳನ್ನು ಆಲಿಸಿ, ಸಾಧ್ಯವಾದಷ್ಟು ಸ್ಥಳೀಯವಾಗಿಯೇ ಸಮಸ್ಯೆ ಪರಿಹರಿಸುವ ಸಲುವಾಗಿಯೇ ಸರ್ಕಾರ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.  ಈ ಕಾರ್ಯಕ್ರಮದಲ್ಲಿ ಸುಮಾರು 50 ಕ್ಕೂ ಅರ್ಜಿಗಳು ಸ್ವೀಕೃತಗೊಂಡಿದ್ದು, ಬಹುತೇಕ ಅರ್ಜಿಗಳು ನಿವೇಶನಕ್ಕೆ ಸಂಬಂಧಿಸಿವೆ.  ಗ್ರಾಮದಲ್ಲಿನ ನಿವೇಶನ ರಹಿತರ ಪಟ್ಟಿಯನ್ನು ಹಾಗೂ ಅಗತ್ಯವಿರುವ ಜಮೀನಿನ ಬಗ್ಗೆ ವಿವರವಾದ ಪ್ರಸ್ತಾವನೆಯನ್ನು ಗ್ರಾ.ಪಂ. ಪಿಡಿಒ ತಯಾರಿಸಿ, ಸಲ್ಲಿಸಿದಲ್ಲಿ, ನಿಯಮಾನುಸಾರ ನಿವೇಶನ ಒದಗಿಸಿ, ಸರ್ಕಾರದ ವಿವಿಧ ಯೋಜನೆಗಳಡಿ ಅವರಿಗೆ ಮನೆಯನ್ನು ಕೂಡ ನಿರ್ಮಿಸಿಕೊಡಲಾಗುವುದು, ಅಲ್ಲದೆ ಕಾರ್ಯಕ್ರಮದಲ್ಲಿ ಸ್ವೀಕೃತಿಗೊಂಡಿರುವ ಎಲ್ಲ ಅರ್ಜಿಗಳನ್ನು ಕಾನೂನು ಚೌಕಟ್ಟಿನಲ್ಲಿ ಪರಿಹರಿಸಿಕೊಡಲು, ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಅರ್ಜಿಗಳಿಗೆ ಶೀಘ್ರ ಪರಿಹಾರ  ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಭರವಸೆ ನೀಡಿದರು.