ಹಳೆಯ‌ ಮರಗಳ ಮಾರಣ ಹೋಮ: ಸ್ಥಳೀಯರ, ಸಂಘಟನೆಗಳ ಆಕ್ರೋಶ


ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಮಾ.03: ಸರ್ವಕಾಲದಲ್ಲೂ ಬಿಸಿಲಿನ ಧಗೆಯಿಂದ ರಕ್ಷಿಸಿಕೊಳ್ಳಲು ಮರಗಳ ಮೊರೆ ಹೋಗುವುದು ಸರ್ವೆ ಸಾಮಾನ್ಯ. ಆದರೆ ಪರಿಸರ ರಕ್ಷಣೆಯ ಕಿಂಚಿತ್ ಕಾಳಜಿ ಇಲ್ಲದೇ ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವ್ಯವಸ್ಥೆ ಸ್ಥಳೀಯರ ಹಾಗೂ ಸಂಘಟನೆಗಳ ಮನವಿಯನ್ನು ಕಡೆಗಣಿಸಿ ಪ್ರಾಂಗಣದಲ್ಲಿನ  ಮರಗಳನ್ನು ಕಡಿದು ಹಾಕಿದ ಘಟನೆ ಮರಿಯಮ್ಮನಹಳ್ಳಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಪ್ರಾಂಗಣದಲ್ಲಿ ನಡೆದಿದೆ.
ಇಲ್ಲಿ ಮರ ಕಡಿದದ್ದು ಸಕ್ರಮವಾಗಿಯೇ ಎನ್ನುವ ಅಧಿಕಾರಿಗಳ ಅಚಾತುರ್ಯಕ್ಕೆ ಮರಗಳು ಬಲಿಯಾಗಿರುವುದಂತೂ ದುರಂತದ ಸಂಗತಿ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. ಪ್ರಸ್ತುತ ಆವರಣದಲ್ಲಿ ಕಟ್ಟಡಗಳನ್ನು ಕಟ್ಟುತ್ತಿಲ್ಲ. ಅಭಿವೃದ್ಧಿ ಕಾರ್ಯಗಳಂತೂ ದೂರದ ಮಾತು. ಒಣಗಿದ ಮರಗಳು ಇಲ್ಲವೇ ಇಲ್ಲ. ಆದರೂ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಆವರಣದಲ್ಲಿರುವ ಮರಗಳನ್ನು ಕಡಿಯಲಾಗಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರವು ಕಾಡನ್ನು ಬೆಳೆಸಲು ಅನೇಕ ಯೋಜನೆಗಳನ್ನು ಮಾಡಿ ಮನೆಗೊಂದು ಮಗು ಮಗುವಿಗೊಂದು ಮರ, ಊರಿಗೊಂದು ವನ, ಮರ ಗಿಡಗಳನ್ನು ಬೆಳೆಸಿ ಪರಿಸರ ಉಳಿಸಿ. ಕಾಡಿದ್ದರೆ ನಾಡು, ಕಾಡು ಬೆಳೆಸಿ ನಾಡು ಉಳಿಸಿ ಹೀಗೆ ನೂರೆಂಟು ಘೋಷ ವಾಕ್ಯಗಳೊಂದಿಗೆ ಕೋಟಿಗಟ್ಟಲೇ ಅನುದಾನ ವ್ಯಯಮಾಡಿ ಅರಣ್ಯ ಸಂರಕ್ಷಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅಲ್ಲದೇ ಅನೇಕ  ಸಂಘ-ಸಂಸ್ಥೆಗಳು ಸಾಲು ಸಾಲು ಮರಗಳನ್ನು ನೆಡುವ, ಕಾಡಿನಲ್ಲಿ  ಬೀಜದುಂಡೆಗಳನ್ನು ಎಸೆಯುವ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಇವನ್ನೆಲ್ಲಾ ಮರೆತ ಆರೋಗ್ಯ ಇಲಾಖೆ ಸಣ್ಣಪುಟ್ಟ ಕಾರಣಗಳಿಗೆ ಸುಮಾರು 25-30 ವರ್ಷಗಳ ಹಳೆಯ ಮರಗಳನ್ನು ಕಡಿಯಲು ಪರವಾನಗೆ ನೀಡಿ, ಮರಗಳನ್ನು ನೆಲಕ್ಕೆ ಉರುಳಿಸಿವೆ. 25-30 ವರ್ಷಗಳಿಂದ  ತಂಪಾದ ನೆರಳಿನ ವಾತಾವರಣದೊಂದಿಗೆ ಆರೋಗ್ಯಕರ ಗಾಳಿಯನ್ನು ನೀಡುತ್ತಿದ್ದ ನೀಲಗಿರಿ, ಹುಣಸೆ ಮರಗಳು ಸೇರಿ ಕೆಲ ಮರಗಳನ್ನು ಕಡಿಯಲಾಗಿದೆ. ಇದು ಸ್ಥಳೀಯ ಕ.ರ.ವೇ, ಪ್ರಜ್ಞಾವಂತ ಸಾರ್ವಜನಿಕರಕ್ಕೆ  ಆಕ್ರೋಶಕ್ಕೆ ಕಾರಣವಾಗಿದೆ.
 ಸಬೂಬು:
ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಆಂಬ್ಯುಲೆನ್ಸ್ ಬರಲು ದಾರಿಯಿಲ್ಲ. ರೋಗಿಗಳಿಗೆ, ಗರ್ಭಿಣಿಯರಿಗೆ ಓಡಾಡಲು ಅವಕಾಶವಿಲ್ಲ, ಮರಗಳು ಬಿದ್ದರೆ ಕಟ್ಟಡಕ್ಕೆ, ಸಿಂಟೆಕ್ಸ ಟ್ಯಾಂಕಿಗೆ ಹಾನಿ, ವಾಹನಗಳನ್ನು ನಿಲ್ಲಿಸಲು ಸ್ಥಳವಿಲ್ಲ ಎನ್ನುವ ಸಣ್ಣಪುಟ್ಟ ಕಾರಣಗಳನ್ನು ನೀಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಮಂಡಳಿ ಅರಣ್ಯ ಇಲಾಖೆಗೆ ಮನವಿ ಮಾಡಿದೆ.
ಆದರೆ  ಆಸ್ಪತ್ರೆಯ ಆಡಳಿತ ಮಂಡಳಿಗೆ ಆಸ್ಪತ್ರೆಯಲ್ಲಿರುವ ವಿವಿಧ ಅತ್ಯಾಧುನಿಕ ತಂತ್ರಜ್ಞಾನದ ಸಲಕರಣೆಗಳನ್ನು ಬಳಸದೇ ಮೂಲೆಗುಂಪಾಗಿರುವುದು ಕಾಣಿಸುತ್ತಿಲ್ಲವೇ ? ಅಲ್ಲದೇ ಆಸ್ಪತ್ರೆಗೆ ಅವಶ್ಯಕ ವೈದ್ಯರ ಹಾಗೂ ಸಿಬ್ಬಂದಿಯ ಕೊರತೆ ವಿಚಾರ ಅರಿವಿಗೆ ಬರಲಿಲ್ಲವೇ ಎನ್ನುವುದು ಪ್ರಜ್ಞಾವಂತರ, ಸಾರ್ವಜನಿಕರ ಹಾಗೂ ಸಂಘಟನೆಗಳ ಪ್ರಶ್ನೆಯಾಗಿದೆ.
“ಸುಮಾರು ವರ್ಷಗಳಿಂದ ಆಸ್ಪತ್ರೆಯ ಆವರಣದಲ್ಲಿದ್ದ ಮರಗಳನ್ನು, ಸಣ್ಣ-ಪುಟ್ಟ ಕಾರಣಗಳ ಸಬೂಬು ನೀಡಿ ಮರಗಳನ್ನು ಕಡಿದಿರುವುದು, ಸಮಂಜಸವಾದುದಲ್ಲ ಹಾಗೂ ಅರಣ್ಯ ಇಲಾಖೆಯು ಕೂಡ ಮರಗಳನ್ನು ಕಡಿಯಲು ಅನುಮತಿ ನೀಡಿರುವುದು ಅವೈಜ್ಞಾನಿಕ ಕ್ರಮವಾಗಿದೆ. ಅಲ್ಲದೇ ಕಡಿದ ಮರಗಳಿಗೆ ಪರ್ಯಾಯವಾಗಿ ಇವರು ಮರಗಳನ್ನು ಬೆಳೆಸುವರೆ?”- ರಾಮಾಂಜನೇಯ, ಗಾಳೇಶ್. ರಮೇಶ್ ಬ್ಯಾಲಕುಂದಿ, ಬಿ.ರಘುನಾಯಕ, ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಮರಗಳನ್ನು ಕಡಿಯಲು, 5-6 ತಿಂಗಳ ಹಿಂದೆ ಆರೋಗ್ಯ ಕೇಂದ್ರದ ಆಡಳಿತ ಅನುಮತಿ ಕೋರಿತ್ತು, ಪರಿಶೀಲಿಸಿ ಮರಗಳನ್ನು ಕಡಿಯಲು ಅನುಮತಿ ನೀಡಲಾಯಿತು, ಟೆಂಡರ್ ಪ್ರಕ್ರಿಯೆ ಮೂಲಕ ಮರಗಳನ್ನು ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿದೆ.”-ಅನಿಲ್ ಕುಮಾರ್, ವಲಯ ಅರಣ್ಯಾಧಿಕಾರಿ.

One attachment • Scanned by Gmail