ಹಳೆಯ ಆಶ್ರಯ ಕಾಲೋನಿ : ಸರ್ವೇ ನಂ. ೫೭೦, ೫೭೨ – ತೆರವು, ಎಫ್‌ಐಆರ್ ದಾಖಲೆಗೆ ಆದೇಶ

ಕಿರಿಯ ಅಭಿಯಂತರರು, ಕಂದಾಯ ಅಧಿಕಾರಿ ತಂಡಕ್ಕೆ ಜವಾಬ್ದಾರಿ
ರಾಯಚೂರು.ಜ.೧೪- ನಗರದ ಆಶ್ರಯ ಕಾಲೋನಿಯ ಸರ್ವೇ ನಂ. ೫೭೦, ೫೭೨ ಸರ್ಕಾರಿ ಸ್ಥಳದಲ್ಲಿ ಅಕ್ರಮವಾಗಿ ಹಾಕಿದ ಗುಡಿಸಲು ತೆರವುಗೊಳಿಸಲು ನಗರಸಭೆ ಪೌರಾಯುಕ್ತರು, ಹಿರಿಯ ಅಭಿಯಂತರರು, ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಆಶ್ರಯ ಕಾಲೋನಿಯ ಜಮೀನಿಗೆ ಸಂಬಂಧಿಸಿ, ಈಗಾಗಲೇ ತೀವ್ರ ವಿವಾದ ಹಿನ್ನೆಲೆಯಲ್ಲಿ ಕಟ್ಟಕೆಡೆಗೆ ಜಮೀನು ಸ್ವಾಧೀನಕ್ಕೆ ನಗರಸಭೆ ಮತ್ತು ಜಿಲ್ಲಾಡಳಿತ ಮುಂದಾಗಿದೆ. ನಗರಸಭೆಗೆ ಸೇರಿದ ಎರಡು ಸರ್ವೇ ನಂ.ಗಳಲ್ಲಿ ಅಕ್ರಮವಾಗಿ ಗುಡಿಸಲು ನಿರ್ಮಾಣ ಮತ್ತು ಸ್ಥಳ ಅತಿಕ್ರಮಣ ಮಾಡಲಾಗಿದೆಂದು ದೂರುಗಳು ಬಂದಿವೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿ ಹಿಂದಿನ ಪೌರಾಯುಕ್ತರು ಮತ್ತು ಇ-ಖಾತೆ ನೀಡಿದ ಕಂದಾಯ ಅಧಿಕಾರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲೆಗೆ ಸಿದ್ಧತೆ ನಡೆದಿದೆ. ಈ ಹಂತದಲ್ಲಿ ನಿನ್ನೆ ಪ್ರಭಾರಿ ಪೌರಾಯುಕ್ತರಾದ ವೆಂಕಟೇಶ ಅವರು ಸ್ಥಳ ತೆರವು ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದಾರೆ.
ಕಿರಿಯ ಅಭಿಯಂತರ ಮಲ್ಲಿಕಾರ್ಜುನ, ಡಿ.ಎಸ್.ಚೇತನಾ, ಕಂದಾಯ ಅಧಿಕಾರಿಗಳು ಹಾಗೂ ಹನುಮಂತು, ಜಾಕೀರ್, ತಿರುಮಲೇಶ, ವೀರೇಶ, ಪ್ರಶಾಂತ, ವೀರೇಶ, ಕಾಮಗಾರಿ ನಿರೀಕ್ಷಕರಿಗೆ ಈ ಸೂಚನೆ ನೀಡಿದ್ದಾರೆ. ಜ್ಞಾಪನ ಪತ್ರದಲ್ಲಿ ಎರಡು ಪ್ರಮುಖಾಂಶಗಳನ್ನು ಉಲ್ಲೇಖಿಸಲಾಗಿದೆ. ನಗರದ ಚಂದ್ರಬಂಡಾ ರಸ್ತೆಯಲ್ಲಿರುವ ಹಳೆಯ ಆಶ್ರಯ ಕಾಲೋನಿಯ ಸರ್ವೇ ನಂ.೫೭೦, ೫೭೨ ಆಶ್ರಯ ಯೋಜನೆಗೆ ಮೀಸಲಿರಿಸದ ಸರ್ಕಾರ ಜಮೀನಿನಲ್ಲಿ ಅಕ್ರಮವಾಗಿ ಹಾಕಿದ ಗುಡಿಸಲು ತಕ್ಷಣವೇ ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಈ ಆದೇಶದನ್ವಯ ಸ್ಥಳ ಸ್ವಾಧೀನ ಪಡಿಸಿಕೊಳ್ಳಲು ಸೂಚಿಸಲಾಗಿದೆ.
ಅತಿಕ್ರಮಣದಾರರ ವಿರುದ್ಧ ಕೂಡಲೇ ಎಫ್‌ಐಆರ್ ದಾಖಲಿಸಲು ಕ್ರಮ ವಹಿಸುವುದು ಇದಕ್ಕಾಗಿ ತಹಶೀಲ್ದಾರ್, ಉಪ ನಿರ್ದೇಶಕರು ಭೂ ಮಾಪನ ಮತ್ತು ಭೂ ದಾಖಲೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ನೆರವು ಪಡೆಯಲು ಸೂಚಿಸಲಾಗಿದೆ. ಕಳೆದ ೧೫ ದಿನಗಳಿಂದ ಆಶ್ರಯ ಕಾಲೋನಿಯ ಸರ್ಕಾರಿ ಜಮೀನು ಅತಿಕ್ರಮಣ ಅನೇಕ ವಿವಾದಗಳಿಗೆ ದಾರಿ ಮಾಡಿತ್ತು. ಈ ಕುರಿತು ಕಾಂಗ್ರೆಸ್, ಬಿಜೆಪಿ ಮಧ್ಯೆ ಭಾರೀ ಸಂಘರ್ಷ ನಡೆದಿತ್ತು. ಈ ಪ್ರಕರಣ ಸೇರಿದಂತೆ ಇನ್ನಿತರ ಅಕ್ರಮ ಪ್ರಕರಣಗಳಡಿಯಲ್ಲಿ ನಗರಸಭೆ ಆಯುಕ್ತರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿತ್ತು.
ಈಗಾಗಲೇ ಆಯುಕ್ತರು ಮತ್ತು ಕಂದಾಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲೂ ಸಿದ್ಧತೆಯೂ ನಡೆದಿದೆ. ಈ ಹಂತದಲ್ಲಿ ನಿನ್ನೆ ಹೊರ ಬಿದ್ದ ಈ ಆದೇಶ ಆಶ್ರಯ ಕಾಲೋನಿಯ ಜನ ಭಾರೀ ಗೊಂದಲಕ್ಕೆಡೆಯಾಗುವಂತೆ ಮಾಡಿದೆ. ಆಶ್ರಯ ಕಾಲೋನಿಯಲ್ಲಿ ಗುಡಿಸಲು ಹಾಕಲು ಸ್ಥಳೀಯ ಕೆಲ ನಾಯಕರಿಗೆ ೧ ರಿಂದ ೨ ಲಕ್ಷದವರೆಗೂ ಹಣ ನೀಡಲಾಗಿದೆ ಎನ್ನುವ ಶಂಕೆಗಳು ತೀವ್ರವಾಗಿವೆ. ನಗರಸಭೆ ಈ ಸ್ಥಳ ತೆರವಿಗೆ ಮುಂದಾಗುತ್ತಿರುವುದು ಅಲ್ಲಿಯ ನಿವಾಸಿಗಳು ಭಾರೀ ಆತಂಕಕ್ಕೆ ಗುರಿಯಾಗುವಂತೆ ಮಾಡಿದೆ.
ಅತ್ಯಂತ ಬೆಲೆ ಬಾಳುವ ಮತ್ತು ಆಶ್ರಯ ಯೋಜನೆಗಾಗಿ ಮೀಸಲಿರಿಸಿದ ಈ ಸ್ಥಳವನ್ನು ತೆರವುಗೊಳಿಸಲು ನಗರಸಭೆ ಕೊನೆಗೂ ಆದೇಶಿಸಿದ್ದು, ಈ ಆದೇಶದನ್ವಯ ಕಾರ್ಯಾಚರಣೆ ನಡೆದು, ಸರ್ಕಾರಿ ಜಮೀನು ಸ್ವಾಧೀನ ಪಡಿಸಿಕೊಂಡರೇ, ನಗರದ ಇನ್ನಿತರೆಡೆ ಸರ್ಕಾರಿ ಜಮೀನು ಅತಿಕ್ರಮಣದಾರರಲ್ಲಿ ನಡುಕ ಹುಟ್ಟಿಸಲಿದೆ. ಜಿಲ್ಲಾಡಳಿತ ಮುಂದಿರುವ ಹಿಂದಿನ ಪೌರಾಯುಕ್ತ ಮತ್ತು ಕಂದಾಯ ಅಧಿಕಾರಿ ವಿರುದ್ಧ ಪ್ರಮುಖ ಆರೋಪಗಳಲ್ಲಿ ಒಂದಾಗಿದ್ದ, ಆಶ್ರಯ ಕಾಲೋನಿ ಜಮೀನು ಅತಿಕ್ರಮಣ ಈ ಆದೇಶದಿಂದ ಸಾಬೀತುಗೊಂಡಂತಾಗಿದೆ.
ಜಿಲ್ಲಾಡಳಿತ ಮುಂದಿರುವ ಐದು ಕ್ರಿಮಿನಲ್ ಪ್ರಕರಣಗಳಲ್ಲಿ ಆಶ್ರಯ ಕಾಲೋನಿಯೂ ಒಂದಾಗಿತ್ತು. ಕಳೆದ ಒಂದು ವಾರದಿಂದ ನೆನೆಗುದಿಗೆ ಬಿದ್ದಿರುವ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ಇನ್ನಾದರೂ ಅಂತಿಮಗೊಂಡು ಹಿಂದಿನ ಪೌರಾಯುಕ್ತರಾದ ದೊಡ್ಡಮನಿ ಮತ್ತು ಕಂದಾಯ ಅಧಿಕಾರಿಗಳ ವಿರುದ್ಧ ಈಗಲಾದರೂ ಪ್ರಕರಣ ದಾಖಲಾಗುವುದೆಂದು ಕಾದು ನೋಡಬೇಕಾಗಿದೆ.