ಹಳಿ ತಪ್ಪಿದ ಗೂಡ್ಸ್ ರೈಲು, ಇಬ್ಬರು ಸಾವು

ಜಾಜ್‌ಪುರ.ನ೨೧:ಒಡಿಶಾದ ಜಾಜ್‌ಪುರ ಜಿಲ್ಲೆಯ ಕೋರಯಿ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲು ಹಳಿ ತಪ್ಪಿ ಉರುಳಿ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಸುಮಾರು ೬.೪೫ಕ್ಕೆ ಯಾತ್ರಿಕರು ಪ್ರಯಾಣಿಕ ರೈಲಿಗಾಗಿ ಪ್ಲಾಟ್‌ಫಾರ್ಮ್‌ನಲ್ಲಿ ಕಾಯುತ್ತಿದ್ದ ವೇಳೆ ಅವಘಡ ಸಂಭವಿಸಿದೆ ಎಂದು ಪೂರ್ವ ಕರಾವಳಿ ರೈಲ್ವೆ (ಇಸಿಒಆರ್) ಅಧಿಕಾರಿಗಳು ತಿಳಿಸಿದ್ದಾರೆ.
ಡೊಂಗೊಪೋಸಿಯಿಂದ ಛತ್ರಪುರಕ್ಕೆ ಚಲಿಸುತ್ತಿದ್ದ ಗೂಡ್ಸ್ ರೈಲು ಹಳಿ ತಪ್ಪಿ ಪ್ಲಾಟ್‌ಫಾರ್ಮ್‌ಗೆ ಉರುಳಿ ಬಿದ್ದಿದೆ.ಅವಘಡದ ಹಿಂದಿನ ಕಾರಣ ತಿಳಿದು ಬಂದಿಲ್ಲ. ಅಪಘಾತ ನಡೆದ ಸ್ಥಳಕ್ಕೆ ವೈದ್ಯಕೀಯ ತಂಡವನ್ನು ರವಾನಿಸಲಾಗಿದೆ.