ಹಳಕಟ್ಟಿ ಹರ್ಡಿಕರ್ ಬಸವ ಜಯಂತಿ ಆಚರಣೆಯ ರೂವಾರಿಗಳು

ವಿಜಯಪುರ.ಮೇ.೧೨- ವಿಶ್ವಾದ್ಯಂತ ವಿಶ್ವಗುರು ಬಸವಣ್ಣನವರ ಜಯಂತಿ ಆಚರಿಸಲು ಪ್ರಮುಖ ಕಾರಣಕರ್ತರು ಹರ್ಡಿಕರ್ ಮಂಜಪ್ಪರವರಾಗಿದ್ದು, ದಶಕಗಳ ಹಿಂದೆ ಫ.ಗು ಹಳಕಟ್ಟಿರವರು ಉತ್ತರ ಕರ್ನಾಟಕದ ಮನೆ-ಮನೆಗೂ ತೆರಳಿ, ತಾಳೆಗರಿಯಲ್ಲಿದ್ದಂತಹ ವಚನಗಳನ್ನು ಸಂಗ್ರಹಿಸಿ, ಅದನ್ನು ಮುದ್ರಣಗೊಳಿಸಿ, ಪ್ರಪಂಚದಾದ್ಯಂತ ದೊರಕುವಂತೆ ಮಾಡಿದರೆ, ಹರ್ಡಿಕರ್‌ರವರು ಬಸವಣ್ಣನವರ ಮಹತ್ವ ಪ್ರಪಂಚದಾದ್ಯಂತ ಪಸರಿಸುವಂತೆ ಬಸವ ಜಯಂತಿ ಕಾರ್ಯಕ್ರಮ ಪ್ರತಿ ವರ್ಷ ಆಚರಿಸಲು ನಾಂದಿ ಹಾಡಿದರೆಂದು ರಾಷ್ಟ್ರೀಯ ಬಸವದಳದ ಕಾರ್ಯದರ್ಶಿ ವಿ.ಶಿವಣ್ಣ ತಿಳಿಸಿದರು.
ಪಟ್ಟಣದಲ್ಲಿರುವ ಗಾಂಧಿ ಚೌಕದಲ್ಲಿ ನಗರ್ತ ಯುವಕ ಸಂಘ, ಶ್ರೀ ನಗರೇಶ್ವರ ಸೇವಾ ಸಮಿತಿ ಟ್ರಸ್ಟ್, ರಾಷ್ಟ್ರೀಯ ಬಸವ ದಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ೮೯೧ನೆಯ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಈ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅಕ್ಕನ ಬಳಗದ ಹಿರಿಯ ಶರಣರಾದ ಸೌಭಾಗ್ಯಮ್ಮ ಶಿವರುದ್ರಪ್ಪ ಶರಣರ ವಚನಗಳನ್ನು ಅರಿತು ಅವರ ಮಾರ್ಗದಲ್ಲಿ ನಡೆದರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿದ ನಿವೃತ್ತ ಆಯುಕ್ತರಾದ ವಿ ಶಿವಕುಮಾರ್‌ರವರು ಮಾತನಾಡಿ, ೧೨ ನೇ ಶತಮಾನದಲ್ಲಿಯೇ ಬಸವಣ್ಣನವರು ಶುದ್ದ ಕಾಯಕ, ದಾಸೋಹ ತತ್ವವನ್ನು ನೀಡಿದ್ದು, ಯಾರೇ ಆದರೂ ಶುದ್ದ ಕಾಯಕದಿಂದ ಬಂದ ಹಣದಲ್ಲಿ ಊಟ ಮಾಡಬೇಕು ಇಲ್ಲವಾದಲ್ಲಿ ಅದು ವಿಷದಂತೆ ಎಂದು ತಿಳಿಸಿದ್ದು, ಯಾರೂ ಸಹ ಹಸಿವಿನಿಂದ ಬಳಲಬಾರದೆಂಬ ಕಾರಣಕ್ಕೆ ದಾಸೋಹ ತತ್ವವನ್ನು ತಿಳಿಸಿದ್ದರೆಂದು ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ್ತ ಯುವಕ ಸಂಘದ ಅಧ್ಯಕ್ಷರಾದ ಬೇಕರಿ ಮಂಜುನಾಥ್ ರವರು ಮಾತನಾಡುತ್ತಾ, ೧೨ನೇ ಶತಮಾನದಲ್ಲಿ ಪ್ರತಿಯೊಬ್ಬರಿಗೂ ದಾರಿ ದೀಪ ತೋರಿಸಿದ್ದ ವಿಶ್ವಗುರು ಕ್ರಾಂತಿಯೋಗಿ ಬಸವಣ್ಣ ಎಂದು ತಿಳಿಸಿದರು.
ಅಯೋಧ್ಯಾನಗರ ಶಿವಾಚಾರ ನಗರ್ತ ಯುವಕ ಸಂಘದ ಅಧ್ಯಕ್ಷ ಎ.ಮಂಜುನಾಥ್, ಗೌರವಾಧ್ಯಕ್ಷ ಪಿ.ಮುರಳೀಧರ್, ರಾಷ್ಟ್ರೀಯ ಬಸವದಳದ ಅಧ್ಯಕ್ಷ ಪುಟ್ಟರಾಜಣ್ಣ, ಮಹಂತಿನಮಠ ಧರ್ಮಸಂಸ್ಥೆಯ ಅಧ್ಯಕ್ಷ ಎಸ್.ಪುನೀತ್. ಕಾರ್ಯದರ್ಶಿ ವಿ.ವಿಶ್ವನಾಥ್, ನಗರ್ತ ಮಹಿಳಾಸಂಘದ ಅಧ್ಯಕ್ಷೆ ಲೀಲಾವತಿ ರುದ್ರಮೂರ್ತಿ, ಮ ಜಯದೇವ್ ಬಿ ಪ್ರಭುದೇವ್ ಬಿಕೆ ದಿನೇಶ್, ಭಾರತಿ ಪ್ರಭುದೇವ್ ಅಕ್ಕನ ಬಳಗದ ಉಪಾಧ್ಯಕ್ಷರಾದ ಅಂಬಾ ಭವಾನಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಹಡಪದ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಚಿ.ಮಾ.ಸುಧಾಕರ ಎಲ್ಲಾ ಅಂಗ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸದಸ್ಯರು, ಮತ್ತಿತರರು ಇದ್ದರು.
ಬಸವ ಭಕ್ತರೆಲ್ಲಾ ಶ್ವೇತ ವರ್ಣ ವಸ್ತ್ರದಾರಿಗಳಾಗಿ ಬಸವಣ್ಣನವರ ಶಿವಕುಮಾರ ಸ್ವಾಮೀಜಿ,ಹಾಗೂ ಅಕ್ಕ ಮಹಾದೇವಿರವರುಗಳ ಭಾವಚಿತ್ರದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ನಗರ ಸಂಕೀರ್ತನೆ, ವಚನ ಗಾಯನ, ನಡೆಸಿದರು.