ಹಳಕಟ್ಟಿ ಅವರು ವಚನ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ: ಸುಬ್ಬಣ್ಣ ರೈ


 ಸಂಜೆ ವಾಣಿ ವಾರ್ತೆ
ಕೊಟ್ಟೂರು, ಜು.16: ವಚನ ಸಾಹಿತ್ಯವನ್ನು ಗಟ್ಟಿಗೊಳಿಸಿದಷ್ಟು ಜನಸಮುದಾಯದ ಭಾಷೆ ಸಾಹಿತ್ಯ ಗಟ್ಟಿಯಾಗುತ್ತದೆ ಎಂಬ ಮಾತಿನಂತೆ ಹಳಕಟ್ಟಿ ನಾಡಿನ ಸಾಹಿತ್ಯ ಉಜ್ವಲವಾಗಿ ಬೆಳಗಲು ಕಾರಣರಾಗಿದ್ದಾರೆ. ವಚನ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರ ಎಂದು  ಹಂಪಿ ಕನ್ನಡ ವಿ.ವಿ.ಕುಲಸಚಿವ ಡಾ. ಸುಬ್ಬಣ್ಣ ರೈ ಹೇಳಿದರು.
 ಇಲ್ಲಿನ ಕೊಟ್ಟೂರೇಶ್ವರ ಮಹಾವಿದ್ಯಾಲಯದ ಡಾ.ಹೆಚ್.ಜಿ.ರಾಜ್ ಸಭಾಂಗಣದಲ್ಲಿ ಶನಿವಾರ ಹಂಪಿಯ ಕನ್ನಡ ವಿಶ್ವವಿದ್ಯಾಲಯ, ಅಂತಾರಾಷ್ಟ್ರೀಯ ವಚನ ಅಧ್ಯಯನ ಕೇಂದ್ರ, ವಿಜಯನಗರ ಜಿಲ್ಲಾ ಶರಣ ಸಾಹಿತ್ಯ ಸಹಯೋಗದೊಂದಿಗೆ ಆಯೋಜಿಸಿದ್ದ ಡಾ. ಫ.ಗು.ಹಳಕಟ್ಟೆಯವರ ಪ್ರತಿನಿಧಿ ಮತ್ತು ಜನ್ಮದಿನಾಚರಣೆ ಅಂಗವಾಗಿ ವಚನ ಸಂರಕ್ಷಣ ದಿನಾಚರಣೆಯ  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.   
ನಂತರ ವಿಜಯಪುರ ಹಳಕಟ್ಟೆ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ.ಎಂ.ಎಸ್.ಮಧಭಾವಿ “ಹಳಕಟ್ಟೆಯವರ ಜೀವನ” ಕುರಿತು ಉಪನ್ಯಾಸ  ನೀಡಿದ ಅವರು ಶರಣ ಸಾಹಿತ್ಯ ವಚನ ಸಂಗ್ರಹಣೆಯಲ್ಲಿ ಫ.ಗು.ಹಳಕಟ್ಟಿಯವರು ತೋರಿದ ಶ್ರಮ ತ್ಯಾಗ ನಾಡು ಶರಣರ ನಾಡೆಂದು ಗುರ್ತಿಸಿಕೊಳ್ಳಲು ಸಾಧ್ಯವಾಯಿತು. ಹಳಕಟ್ಟೆಯವರು ಶರಣ ಸಾಹಿತ್ಯದ ಬಗ್ಗೆ ಪರಿಶ್ರಮಿಸದಿದ್ದರೆ ನಾಡಿಗೆ  ಶರಣರ ವಚನಗಳು ಪರಿಚಯವಾಗುತ್ತಿರಲೇ ಇಲ್ಲ. ಈಗಾಗಿ ಕನ್ನಡ ಸಾಹಿತ್ಯಕ್ಕೆ ಹಳಕಟ್ಟೆಯವರ ಕೊಡುಗೆ ಅಪಾರವಾದುದ್ದಾಗಿದೆ ಎಂದು ತಿಳಿಸಿದರು.
ಡಾ.ಫ.ಗು.ಹಳಕಟ್ಟೆ ಕೇವಲ ವ್ಯಕ್ತಿ ಶಕ್ತಿಯಾಗದೇ ಸಮಾಜಕ್ಕೊಂದು ದೊಡ್ಡ ಶಕ್ತಿಯಾಗಿದ್ದರು. ವಕೀಲರಾಗಿ ಶರಣ ಸಾಹಿತ್ಯ ಮತ್ತು ವಚನಗಳ ಕ್ರೂಢೀಕರಣಕ್ಕೆ ಅರ್ಹ ನಿಷ್ಟೆಯಿಂದ ದುಡಿದು ದೊಡ್ಡ ಕೊಡುಗೆ ನೀಡಿದ್ದಾರೆ. ಇದರ ಜೊತೆಗೆ ನಾಡಿನ ದೊಡ್ಡ ಸಂಸ್ಥೆಗಳ ಉಗಮಕ್ಕೆ ಕಾರಣರಾಗಿದ್ದರು ಎಂದ ಅವರು ಶಾಪಗಳನ್ನು ವರಗಳನ್ನಾಗಿ ಪರಿವರ್ತನೆ ಮಾಡಿಕೊಂಡು ಶರಣರ ಸೇವೆಯನ್ನು ಸಲ್ಲಿಸಿದ ರತ್ನ ಅವರಾಗಿದ್ದರು ಎಂದು ಅವರು ಕೊಂಡಾಡಿದರು.
ಪ್ರಭುದೇವರ ವಚನ ಮತ್ತು ಇತರ ಶರಣರ ವಚನಗಳನ್ನು ಸಂಶೋಧಿಸಿ ೨೫೦ಕ್ಕೂ ಹೆಚ್ಚು ಇಂತಹ ಮೌಲ್ಯಯುತ  ವಚನಗಳನ್ನು ಸಂಗ್ರಹಿಸಿ ನಾಡಿನ ಸಾಹಿತ್ಯಕ್ಕೆ ಉತ್ಕೃಷ್ಠ ಕೊಡುಗೆ ನೀಡಿದ್ದಾರೆ ಎಂದರು.
ಹಂಪಿ ಕನ್ನಡ ವಿ.ವಿ.ಯ ಹಸ್ತಪ್ರತಿ ವಿಭಾಗದ ಮುಖ್ಯಸ್ಥ ಡಾ. ರವೀಂದ್ರ ನಾಥ ಹಳಕಟ್ಟೆಯವರ “ವಚನ ಸಾಹಿತ್ಯ ಸಂಪಾದನೆ” ಕುರಿತು ಮಾತನಾಡಿ ೩೦೦ ವಚನಕಾರರನ್ನು ನಾಡಿಗೆ ಪರಿಚಯಿಸಿದ ಡಾ.ಫ.ಗು.ಹಳಕಟ್ಟೆ ಮುದ್ರಣಕ್ಕೆ ಅಸಹಕಾರ ತೋರಿದ್ದನ್ನೇ ಸವಾಲಾಗಿರಿಸಿಕೊಂಡು ವಚನ ಸಾಹಿತ್ಯ ಪ್ರಕಟಣೆಯನ್ನು ಪ್ರಕಟಿಸುವ ಮಹತ್ತರ ಕಾರ್ಯ ಮಾಡಿದರು. ಜನಭಾಷೆಯನ್ನು ದೇವಸಾಹಿತ್ಯವನ್ನಾಗಿ ಮಾಡಿದ್ದು ವಚನ ಸಾಹಿತ್ಯ ಎಂದು ಪರಿಗಣಿಸಿ ಇಂತಹ ಸಾಹಿತ್ಯವನ್ನು ಪರಿಚಯಿಸಿದರೆ ನಾಡಿನ ಜನತೆಯ ಬದುಕಿನಲ್ಲಿ ಹೊಸ ಬಗೆಯ ಬದಲಾವಣೆ ತರಬಹುದು ಎಂಬುದನ್ನು ಅವರು ತೋರಿಸಿಕೊಟ್ಟರು ಎಂದರು.
ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ ಕಲ್ಮಠ್ ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜ್ಯ ಸರ್ಕಾರ ಡಾ.ಫ.ಗು. ಹಳಕಟ್ಟೆಯವರ ಜನ್ಮದಿನವನ್ನು ವಚನ ಸಂರಕ್ಷಣ ದಿನವನ್ನಾಗಿ ಆಚರಿಸಲು ಮುಂದಾಗಿರುವುದು ಹೆಮ್ಮೆಯ ವಿಷಯ ಎಂದರು.
ಕೊಟ್ಟೂರೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಂ.ರವಿಕುಮಾರ, ಆಡಳಿತ ಮಂಡಳಿ ಸದಸ್ಯರುಗಳಾದ ಎಸ್.ಎಂ.ಗುರುಪ್ರಸಾದ್, ಕೋರಿ ಬಸವರಾಜ್, ಕೆ.ಬಿ.ಮಲ್ಲಿಕಾರ್ಜುನ, ಶಿವಕುಮಾರ, ಅಡಿಕೆ ಮಂಜುನಾಥ್, ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ದೇವರಮನಿ ಕರಿಯಪ್ಪ ವೇದಿಕೆಯಲ್ಲಿ ಪಾಲ್ಗೊಂಡಿದ್ದರು.
ವಚನ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ.ಎಂ.ಮಲ್ಲಿಕಾರ್ಜುನಗೌಡ ಪ್ರಸ್ತಾವಿಕವಾಗಿ ಮಾತನಾಡಿದರು. ಸಹ ಪ್ರಾಧ್ಯಾಪಕ ಜೆ.ಬಿ.ಸಿದ್ದನಗೌಡ ಸ್ವಾಗತಿಸಿದರು. ಸಹ ಉಪನ್ಯಾಸಕಿ ವಿಜಯಲಕ್ಷ್ಮಿ ನಿರೂಪಿಸಿದರು.