ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ

ರಾಯಚೂರು,ಜ.೩- ಲಿಂಗಸುಗೂರು ಪುರಸಭೆ ವ್ಯಾಪ್ತಿಯ ಕರಡಕಲ್ ಬಳಿಯ ಪರಿಶಿಷ್ಟ ಪಂಗಡದ ವಸತಿ ನಿಲಯಕ್ಕೆ ನುಗ್ಗಿ ಮಾರಣಾಂತಿಕ ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮ ಜರುಗಿಸಿ ಮಕ್ಕಳ ರಕ್ಷಣೆ ಮಾಡುವಲ್ಲಿ ವಿಫಲವಾದ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಪದಾಧಿಕಾರಿಗಳು ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಹೊಸ ವರ್ಷದ ದಿನದಂದು ಪಟ್ಟಣದ ಪ. ಪಂಗಡದ ವಸತಿ ನಿಲಯಕ್ಕೆ ಹತ್ತಾರು ದುಷ್ಕರ್ಮಿಗಳು ನುಗ್ಗಿ ಮಲಗಿದ್ದ ವಿದ್ಯಾರ್ಥಿಗಳ ಮೇಲೆ ಲಾಂಗ್, ಮಚ್ಚು, ಕಬ್ಬಿಣ ಕಟ್ಟಿಗೆಗಳಿಂದ ಹಲ್ಲೆ ಮಾಡಿದ್ದು, ವಿದ್ಯಾರ್ಥಿಗಳಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ನಡೆದರೂ ತಾಲೂಕ ಆಡಳಿತ ಗಮನಿಸಿಲ್ಲ ಮತ್ತು ಪರಿಶಿಷ್ಟ ಪಂಗಡ ಇಲಾಖೆಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ಜೀವ ಬೆದರಿಕೆ ಹಾಕಿ ಹಲ್ಲೆ ಮಾಡಿದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಗಾಯಗೊಂಡ ವಿದ್ಯಾರ್ಥಿಗಳ ಚಿಕಿತ್ಸೆಯನ್ನು ಸರ್ಕಾರವೇ ಭರಿಸಬೇಕು, ಘಟನೆ ತಿಳಿದು ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಿ, ಕ್ರಮ ವಹಿಸಿದ ಜಿಲ್ಲಾ ಪರಿಶಿಷ್ಟ ವರ್ಗ ಉಪ ನಿರ್ದೇಶಕರನ್ನೂ ಅಮಾನತ್ತು ಗೊಳಿಸಬೇಕೆಂದು ಒತ್ತಾಯಿಸಿದರು.
ಈ ಮೇಲಿನ ಬೇಡಿಕೆಗಳನ್ನು ಈಡೇರಿಸದೇ ಇದ್ದಲ್ಲಿ ನಾಯಕ ಸಮಾಜದಿಂದ ಪಟ್ಟಣದಲ್ಲಿರುವ ಸಹಾಯಕ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ದ್ಯಾಮಣ್ಣ ನಾಯಕ ಪೂಲಭಾವಿ, ಹನುಮಂತ ನಾಯಕ, ದೇವಪ್ಪ ನಾಯಕ್, ನಾಗರಾಜ್ ನಾಯಕ್, ಶಿವರಾಜ್ ನಾಯಕ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.