ಹಲ್ಲೆ ಖಂಡಿಸಿ ಮನವಿ

ಬ್ಯಾಡಗಿ, ಮೇ4 : ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ಕಳೆದ ಎಪ್ರಿಲ್ 26ರಂದು ಪಿಎಸ್‍ಐ ಹಾಗೂ ಅವರ ಚಾಲಕನಿಂದ ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಹಲ್ಲೆ ನಡೆದಿರುವುದನ್ನು ಖಂಡಿಸಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾ ಘಟಕದ ವತಿಯಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸೋಮವಾರ ತಹಶೀಲ್ದಾರ ರವಿಕುಮಾರ ಕೊರವರ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ಮಾತನಾಡಿದ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ತಾಲೂಕಾಧ್ಯಕ್ಷ ಕೆ.ಎನ್.ಹುಚ್ಚೇರ, ಗದಗ ಜಿಲ್ಲೆಯ ರೋಣ ತಾಲೂಕಿನ ಗ್ರಾಮ ಲೆಕ್ಕಾಧಿಕಾರಿಗಳಾದ ಸಂದೀಪ ರಾಮಣ್ಣನವರ ಹಾಗೂ ಬಸವರಾಜ ಮಾದರ ಇವರು ತಹಶೀಲ್ದಾರ ನಿರ್ದೇಶನದಂತೆ ಜಮಾಬಂಧಿ ಹಾಗೂ ಕೋವಿಡ್ ಕಾರ್ಯವನ್ನು ಮುಗಿಸಿಕೊಂಡು ಮನೆಗೆ ತೆರಳುವ ದಾರಿಯಲ್ಲಿ ಹೋಟೆಲ್’ನಲ್ಲಿ ಊಟವನ್ನು ಪಾರ್ಸಲ್ ತೆಗೆದುಕೊಳ್ಳುವ ಸಂದರ್ಭದಲ್ಲಿ ರೋಣ ಠಾಣೆಯ ಪಿಎಸ್‍ಐ ಹಾಗೂ ಅವರ ಚಾಲಕ ಏಕಾಎಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಲಾಟಿಯಿಂದ ಹೊಡೆದಿದ್ದು ಖಂಡನೀಯವಾಗಿದೆ. ಕೂಡಲೇ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಮಾಲತೇಶ ಕಂಬಳಿ ಮಾತನಾಡಿ, ಕರ್ತವ್ಯ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಗ್ರಾಮ ಲೆಕ್ಕಾಧಿಕಾರಿಗಳು ಊಟವನ್ನು ಪಾರ್ಸಲ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಆಗಮಿಸಿದ ರೋಣ ಠಾಣೆಯ ಪಿಎಸ್‍ಐ ವಿನೋದ್‍ಕುಮಾರ ಹಾಗೂ ಅವರ ಚಾಲಕ ಮಂಜುನಾಥ ವಾಲ್ಮೀಕಿ ಅವರಿಗೆ ನಾವು ಗ್ರಾಮ ಲೆಕ್ಕಾಧಿಕಾರಿಗಳು ಎಂದು ಗುರುತಿನ ಚೀಟಿ ತೋರಿಸಿದರೂ ಸಹ ಬಾಸುಂಡೆ ಬರುವಂತೆ ಹಾಗೂ ರಕ್ತ ಹೆಪ್ಪುಗಟ್ಟುವಂತೆ ಲಾಟಿಯಿಂದ ಹೊಡೆದಿದ್ದಾರೆ. ಕೋವಿಡ್ ಸೋಂಕನ್ನು ತಡೆಗಟ್ಟುವಲ್ಲಿ ಹಗಲಿರುಳು ಕಾರ್ಯನಿರ್ವಹಿಸುತ್ತಿರುವ ಕಂದಾಯ ಇಲಾಖೆಯ ನೌಕರರ ಮೇಲೆ ಹಲ್ಲೆ ಮಾಡಿದ್ದಾಗಿ ಆರೋಪಿಸಿದರು.
ಕೋವಿಡ್ ಸೋಂಕನ್ನು ತಡೆಗಟ್ಟುವಲ್ಲಿ ಹಗಲಿರುಳು ಶ್ರಮಿಸುತ್ತಿರುವ ಗ್ರಾಮ ಲೆಕ್ಕಾಧಿಕಾರಿಗಳು ಕಛೇರಿಗೆ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಓಡಾಡಲು ಕಷ್ಟವಾಗುತ್ತಿದ್ದು, ಮಾನವೀಯತೆಯ ದೃಷ್ಠಿಯಿಂದಾದರೂ ಗುರುತಿನ ಚೀಟಿಯನ್ನು ತೋರಿಸಿದ ನಂತರ ಬಿಡಬೇಕಿತ್ತು. ಆದರೆ ಗುರುತಿನ ಚೀಟಿ ತೋರಿಸಿದರೂ ಕೂಡ ಲಾಟಿಯಿಂದ ರಕ್ತ ಹೆಪ್ಪುಗಟ್ಟುವಂತೆ ಹೊಡೆದಿರುವುದನ್ನು ತಾಲೂಕಾ ನೌಕರರ ಸಂಘ ತೀವ್ರವಾಗಿ ಖಂಡಿಸುತ್ತಿದೆ. ಕೂಡಲೇ ಪಿಎಸ್‍ಐ ಹಾಗೂ ವಾಹನ ಚಾಲಕರ ಮೇಲೆ ಶಿಸ್ತು ಕ್ರಮ ಕೈಗೊಂಡು ಮುಂದಿನ ಇಂತಹ ಅಹಿತಕರ ಘಟನೆಗಳು ನಡೆಯದಂತೆ ಪೆÇಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಾದ ಶಬ್ಬೀರ ಬಾಗೇವಾಡಿ, ಬಿ.ಎನ್.ಕವಾಸ, ಈಶ್ವರ ಮಳಿಯಣ್ಣನವರ, ರಾಧಾ ರಾವಳ, ಸಂತೋಷ ವಿಭೂತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.