ಹಲ್ಲೆ: ಇಬ್ಬರಿಗೆ 3 ವರ್ಷ ಜೈಲು,76 ಸಾವಿರ ರೂ ದಂಡ

ಕಲಬುರಗಿ,ಮೇ 21: ಪಡೆದ ಕೈಗಡ ಮರಳಿಸದೇ, ಹಣ ಕೊಟ್ಟವನ ಮೇಲೆ ಹಲ್ಲೆ ಮಾಡಿದ ಆರೋಪ ಸಾಬೀತಾದ್ದರಿಂದ ಇಬ್ಬರಿಗೆ 3 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಕರೋಶಿ ಅವರು 3 ವರ್ಷ ಜೈಲು ಶಿಕ್ಷೆ ಮತ್ತು 76 ಸಾವಿರ ರೂ ದಂಡ ವಿಧಿಸಿ ಆದೇಶಿಸಿದ್ದಾರೆ.
ನರೋಣಾ ಠಾಣೆ ವ್ಯಾಪ್ತಿಯ ಕಡಗಂಚಿ ಗ್ರಾಮದ ಶಾಂತಪ್ಪಾ ಬರ್ಮಪ್ಪಾ ಉರ್ಫ ಧರ್ಮಣ್ಣ ದಂಡಗೂಲೆ ಮತ್ತು ಶಾಂತಪ್ಪ ದತ್ತಪ್ಪ ಆಲೂರ ಶಿಕ್ಷೆಗೊಳಗಾದ ಅಪರಾಧಿಗಳು.
2021 ರ ಏಪ್ರಿಲ್ 11 ರಂದು 500 ರೂ ಕೈಗಡ ನೀಡಿದ ವ್ಯಕ್ತಿಗೆ ಹಣ ಮರಳಿಸದೇ ಆತನಿಗೆ ಬೈಯ್ದು,ಚಾಕು ಬಡಿಗೆಯಿಂದ ಹೊಡೆದು ಗಾಯಗೊಳಿಸಿದ್ದರು.ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದಂಡದ ಹಣದಲ್ಲಿ 70 ಸಾವಿರ ರೂಗಳನ್ನು ಗಾಯಾಳು ಫಿರ್ಯಾದಿಗೆ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.ಸರಕಾರದ ಪರವಾಗಿ 3 ನೇ ಅಪರ ಸರಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ಅವರು ವಾದ ಮಂಡಿಸಿದ್ದರು.