ಹಲ್ಲೆ;ಜೀವ ಬೆದರಿಕೆ:7 ಜನರಿಗೆ ದಂಡ

ಕಲಬುರಗಿ,ಜೂ 8: ಸರಕಾರದಿಂದ ಮಂಜೂರಾದ ಮನೆಯ ನಿವೇಶನ ತಮಗೆ ಸೇರಿದ್ದು ಎಂದು ಫಲಾನುಭವಿ ಮಹಿಳೆಯೊಬ್ಬಳ ಮೇಲೆ ಹಲ್ಲೆ ನಡೆಸಿದ ಆರೋಪ ಸಾಬೀತಾದ್ದರಿಂದ ಚಿಂಚೋಳಿ ತಾಲೂಕಿನ ಸಾಸರಗಾಂವ ತಾಂಡಾ 7 ಜನರಿಗೆ ತಲಾ 3 ಸಾವಿರ ರೂ.(ಒಟ್ಟು 21 ಸಾವಿರ ರೂ) ದಂಡ ವಿಧಿಸಿ ಚಿಂಚೋಳಿಯ ಜೆಎಂಎಫ್ ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ದತ್ತಕುಮಾರ ಜವಳ್ಕರ ಅವರು ಆದೇಶ ನೀಡಿದ್ದಾರೆ.
2019 ರ ಆಗಸ್ಟ್ 21 ರಂದು ಚಾಂದಿಬಾಯಿ ತುಕಾರಾಮ ರಾಠೋಡ,ಅಮಿತಾ,ಶಿಲಾಬಾಯಿ ಸೇರಿದಂತೆ 7 ಜನ ಮಹಿಳೆಯರು ಭನಕಿಬಾಯಿ ಎಂಬ ಮಹಿಳೆಯ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದರು. ದಂಡ ರೂಪದ 21 ಸಾವಿರ ರೂ ಹಣವನ್ನು ಫಿರ್ಯಾದುದಾರರಿಗೆ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಶಾಂತಕುಮಾರ ಜಿ ಪಾಟೀಲ ಅವರು ವಾದ ಮಂಡಿಸಿದ್ದರು.