ಹಲ್ಲೆಗೊಳಗಾದವರ ವಿರುದ್ದವೇ ದೂರು ವಿರೋಧಿಸಿ ಪ್ರತಿಭಟನೆ

ವಿಜಯಪುರ.ನ೯:ಕೆಲವು ಅಧಿಕಾರಿಗಳು ಅಪರಾಧಿಗಳೊಂದಿಗೆ ಶಾಮೀಲಾಗಿ ತೀವ್ರ ಹಲ್ಲೆಗೊಳಗಾಗಿ ಆಸ್ಪತ್ರೆಯ ಪಾಲಾಗಿರುವ ದಿಲೀಪ್ ಕುಮಾರ್‌ರವರುಗಳ ವಿರುದ್ದವೇ ಕೇಸ್ ದಾಖಲಿಸಿರುವುದಲ್ಲದೇ, ೭ ಮಂದಿ ಆರೋಪಿಗಳ ಪೈಕಿ ೫ ಮಂದಿಯನ್ನು ಬಂಧಿಸದಿರುವುದರ ವಿರುದ್ದ ವಿಜಯಪುರ ಪೊಲೀಸ್ ಠಾಣೆ ಮುಂಭಾಗ ಬಹುಜನ ಸಮಾಜ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿ.ಎಸ್.ಪಿ ರಾಜ್ಯ ಸಂಯೋಜಕ ಹಾಗೂ ಕರ್ನಾಟಕ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ತಿಳಿಸಿದರು.
ಅವರು ಸೋಮವಾರದಂದು ಇಲ್ಲಿನ ಪರಿವೀಕ್ಷಣಾ ಮಂದಿರದಲ್ಲಿ ಪ್ರತಿಭಟನೆಯ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ, ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ವರ್ಗದವರ ವಿರುದ್ದ ಹೆಚ್ಚೆಚ್ಚು ಅತ್ಯಾಚಾರ, ಹಲ್ಲೆ ಪ್ರಕರಣಗಳು ನಡೆಯುತ್ತಿದ್ದು, ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿರುವವರೆಗೂ ಯಾವುದೇ ಅಧಿಕಾರಿಗಳನ್ನು ನೇಮಿಸಬೇಕಾದಲ್ಲಿ ಸಚಿವರುಗಳು ಹಾಗೂ ಆಯಾ ವಿಭಾಗದ ಕಾರ್ಯದರ್ಶಿಗಳು ನೇಮಿಸುತ್ತಿದ್ದರು.
ಆದರೆ ಇದೀಗ ಶಾಸಕರುಗಳ ಮೂಲಕ ಅಧಿಕಾರಿಗಳನ್ನು ನೇಮಿಸಿಕೊಳ್ಳುತ್ತಿದ್ದು, ಶಾಸಕರುಗಳಿಗೆ ಹಣ ತಂದುಕೊಡುವ ಅಧಿಕಾರಿಗಳು ಬೇಕಾಗಿದ್ದು, ಅಂತಹವರುಗಳನ್ನು ಆಯಕಟ್ಟಿನ ಪ್ರದೇಶಗಳಲ್ಲಿ ನೇಮಿಸಿ, ತಮ್ಮ ಬಾಡಿಗಾರ್ಡ್‌ಗಳ ರೀತಿ ಬಳಸಿಕೊಳ್ಳುತ್ತಿರುವರೆಂದು, ಅಪರಾಧಿಗಳಿಗೆ ಒಂದೆಡೆ ನ್ಯಾಯಾಲಯದ ಭಯವು ಇಲ್ಲದೇ, ಅಧಿಕಾರಿಗಳ ಭಯವೂ ಇಲ್ಲದಂತಾಗಿದೆ ಎಂದು ತಿಳಿಸಿದರು.
ಹಣ ಮತ್ತು ರಾಜಕೀಯ ಬೆಂಬಲ;-ಬಿ.ಎಸ್.ಪಿ ರಾಜ್ಯ ಕಾರ್ಯದರ್ಶಿ ನಂದಿಗುಂದ ವೆಂಕಟೇಶ್ ಮಾತನಾಡಿ, ಪರಿಶಿಷ್ಟ ಜಾತಿಯ ವಿದ್ಯಾರ್ಥಿ ವಕೀಲ ನಾರಾಯಣಸ್ವಾಮಿರವರ ಮಗ ದಿಲೀಪ್‌ಕುಮಾರ್‌ರವರ ಮೇಲೆ ಹಲ್ಲೆ ನಡೆಸಿರುವ ಪ್ರಕಾಶ್ ಮೀಟರ್ ಬಡ್ಡಿ ದಂಧೆ ಮೂಲಕ ಜನರನ್ನು ಸುಲಿಗೆ ಮಾಡಿಕೊಂಡು, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಜಾಗವನ್ನು ಹಾಗೂ ಸರಕಾರಿ ರೇಷ್ಮೆ ಭಿತ್ತನೆ ಕೋಠಿಗೆ ಮಂಜೂರಾದ ವಿವಾಧಿತ ಜಾಗದಲ್ಲಿ ತನ್ನ ಭವ್ಯವಾದ ಮನೆ ಹಾಗೂ ಕಮರ್ಷಿಯಲ್ ಕಾಂಪ್ಲೆಕ್ಸ್ ಮತ್ತು ದೇವಾಲಯ ನಿರ್ಮಿಸಿಕೊಂಡಿದ್ದು, ಹಣ ಮತ್ತು ರಾಜಕೀಯ ಬೆಂಬಲದ ಅಹಂನಿಂದ ಏನೂ ಮಾಡಿದರೂ, ಜೈಸಿಕೊಳ್ಳಬಹುದೆಂಬ ದುರಂಹಕಾರದಿಂದ ಹಲ್ಲೆ ನಡೆಸಿದ್ದು, ಕೂಡಲೇ ಇವರೊಂದಿಗೆ ಸೇರಿ, ಹಲ್ಲೆ ನಡೆಸಿರುವವರನ್ನು ಬಂಧಿಸಬೇಕಾಗಿದೆ ಎಂದು ತಿಳಿಸಿದರು.
ಒತ್ತಾಯ;-ನವೆಂಬರ್-೧೧ ರ ಶುಕ್ರವಾರ ಹಮ್ಮಿಕೊಳ್ಳಲಾಗಿರುವ ಪ್ರತಿಭಟನೆಯಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಿ, ಉಗ್ರ ಶಿಕ್ಷೆಗೆ ಗುರಿಪಡಿಸುವುದರೊಂದಿಗೆ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ/ವರ್ಗದವರ ಮೇಲೆ ನಡೆಯುವ ದೌರ್ಜನ್ಯಗಳಲ್ಲಿ ಶೀಘ್ರ ನ್ಯಾಯದಾನ ಮಾಡಲು ವಿಶೇಷ ಕೋರ್ಟ್ ಸ್ಥಾಪನೆ ಹಾಗೂ ವಕೀಲ ಎ.ನಾರಾಯಣಸ್ವಾಮಿ ಮತ್ತು ಅವರ ಮಕ್ಕಳು ಮತ್ತು ಕುಟುಂಬಸ್ತರ ಮೇಲೆ ಹಾಕಿರುವ ಸುಳ್ಳು ಕೇಸನ್ನು ಮುಕ್ತಾಯ ಮಾಡಬೇಕೆಂದು, ಡಿ.ವೈ.ಎಸ್.ಪಿ ಹಾಗೂ ಎಸ್.ಪಿ ರವರುಗಳು ಸ್ಥಳಕ್ಕೆ ಆಗಮಿಸಿ, ನಮ್ಮ ಮನವಿಯನ್ನು ಆಲಿಸಿ, ನ್ಯಾಯ ದೊರಕಿಸಿಕೊಡ ಬೇಕೆಂದು, ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಬಿ.ಎಸ್.ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಮುನಿಯಪ್ಪ, ತಾಲೂಕು ಅಧ್ಯಕ್ಷ ಬಂಗಾರಪ್ಪ, ವಿಜಯಪುರ ಹೋಬಳಿ ಜಗದೀಶ್, ಹಲ್ಲೆಗೊಳಗಾದ ದಿಲೀಪ್ ಕುಮಾರ್, ತಾಯಿ ಪುರಸಭಾ ಮಾಜಿ ಅಧ್ಯಕ್ಷೆ ಮಂಜುಳಾ ನಾರಾಯಣಸ್ವಾಮಿ, ಮತ್ತಿತರರು ಉಪಸ್ಥಿತರಿದ್ದರು.