ಹಲ್ಲೆಗೆ ಹೆದರಿ ಓಡಿ ಹೋಗಲ್ಲ

ತುಮಕೂರು, ಏ. ೩೦- ನನಗೆ ಉದ್ದೇಶಪೂರ್ವಕವಾಗಿ ಯಾರಾದರೂ ಕಲ್ಲಿನಿಂದ ಪೆಟ್ಟು ಮಾಡಿದ್ದರೆ ಅದಕ್ಕೆ ಹೆದರಿ ನಾನು ಓಡಿ ಹೋಗುವವನಲ್ಲ. ಕಾರ್ಯಕರ್ತರು ಮತ್ತು ಮತದಾರರು ಸಂಯಮದಿಂದ ಶಾಂತಿಯುತವಾಗಿ ಚುನಾವಣೆ ಎದುರಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ. ಪರಮೇಶ್ವರ್ ಮನವಿ ಮಾಡಿದರು.
ಯಾರು ಏನೇ ತೊಂದರೆ ಕೊಟ್ಟರೂ, ತಲೆ ಮೇಲೆ ಕಲ್ಲು ಎತ್ತಿ ಹಾಕಿದರೂ ಹೆದರಿ ರಾಜಕೀಯದಿಂದ ಓಡಿ ಹೋಗುವುದಿಲ್ಲ. ನನಗೆ ಹೆಚ್ಚಿನ ಭದ್ರತೆಯ ಅಗತ್ಯವೂ ಇಲ್ಲ. ಒಂದೆರಡು ದಿನಗಳಲ್ಲಿ ಮತ್ತೆ ಪ್ರಚಾರಕ್ಕೆ ಹೋಗುತ್ತೇನೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಾನು ೩೫ ವರ್ಷಗಳಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಶತ್ರುಗಳು ಕಡಿಮೆ ಅಂದುಕೊಂಡಿದ್ದೇನೆ. ಒಂದು ವೇಳೆ ದ್ವೇಷ ಇದ್ದರೆ ಈ ರೀತಿ ತೀರಿಸಿಕೊಳ್ಳಬಾರದು. ಕೆಲವು ರಾಜಕೀಯ ವಿರೋಧಿಗಳು ನನ್ನನ್ನು ಭಯ ಪಡಿಸುವ ಉದ್ದೇಶ ಹೊಂದಿ, ಈ ರೀತಿಯ ಕ್ಷುಲ್ಲಕ ಕೆಲಸಕ್ಕೇನಾದರೂ ಕೈ ಹಾಕಿದ್ದಲ್ಲಿ ಅದಕ್ಕೆ ನಾನು ಹೆದರುವುದಿಲ್ಲ. ಬದಲಾಗಿ ರಾಜಕೀಯವಾಗಿಯೇ ಉತ್ತರ ನೀಡುತ್ತೇನೆ ಎಂದು ಪ್ರತಿಕ್ರಿಯಿಸಿದರು.
ರಾಜಕೀಯ ಬದುಕಿನಲ್ಲಿ ಸೋಲು-ಗೆಲುವನ್ನು ನೋಡಿದ್ದೇನೆ. ಸೋತಾಗ ಕುಗ್ಗಿಲ್ಲ, ಅದೇ ರೀತಿ ಗೆದ್ದಾಗಲೂ ಹಿಗ್ಗಿಲ್ಲ. ಬಹಳ ಸ್ಥಿತ ಪ್ರಜ್ಞನಾಗಿ ಇಲ್ಲಿಯವರೆಗೆ ರಾಜಕೀಯವನ್ನು ಮಾಡಿಕೊಂಡು ಬಂದಿದ್ದೇನೆ. ಕೆಟ್ಟ ರಾಜಕೀಯ ವ್ಯವಸ್ಥೆಗೆ ನಾನು ಮುಂದಾಗಿಲ್ಲ. ನನ್ನ ವ್ಯಕಿತ್ವವನ್ನು ಇಡೀ ರಾಜ್ಯ ಮತ್ತು ರಾಷ್ಟ್ರ ಹಾಗೂ ಕ್ಷೇತ್ರದ ಮತದಾರರು ನೋಡಿದ್ದಾರೆ. ನಾನು ಪಾರದರ್ಶಕ ವ್ಯವಸ್ಥೆಯಲ್ಲಿ ಸಾರ್ವಜನಿಕ ಜೀವನ ನಡೆಸಿಕೊಂಡು ಬಂದಿದ್ದೇನೆ ಎಂದು ಅವರು ಹೇಳಿದರು.
ಕೊರಟಗೆರೆ ಕ್ಷೇತ್ರದ ಬೈರೇನಹಳ್ಳಿಯಲ್ಲಿ ಪ್ರಚಾರದ ವೇಳೆ ಹೂವಿನ ಜತೆ ದುಷ್ಕರ್ಮಿಗಳು ತಲೆ ಮೇಲೆ ಕಲ್ಲು ಹಾಕಿದ್ದಾರೆ. ಇದು ಉದ್ದೇಶಪೂರ್ವಕ ಕೃತ್ಯ. ದುಷ್ಕರ್ಮಿಗಳ ಉದ್ದೇಶ ಗೊತ್ತಿಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಒತ್ತಾಯಿಸಿದ್ದೇನೆ ಎಂದರು.
ಪರಮೇಶ್ವರ ನಾಟಕ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರಿಗೆ ನಾಟಕ ಮಾಡಿ ಅಭ್ಯಾಸವಿದೆ. ಅವರಂತೆ ಕಣ್ಣಲ್ಲಿ ನೀರು ಹಾಕಿ, ಅತ್ತು, ಕರೆಯುವುದಿಲ್ಲ. ನನಗೆ ಡ್ರಾಮಾ ಮಾಡಲು ಮೊದಲೇ ಬರುವುದಿಲ್ಲ ಎಂದು ತಿರುಗೇಟು ನೀಡಿದರು.
ಏಟು ತಿಂದವನು ನಾನು. ಅದರ ನೋವೆಷ್ಟಿದೆ ಎಂಬುದು ನನಗೆ ಗೊತ್ತು. ನಾಟಕ ಮಾಡುವ ಅಗತ್ಯವಿಲ್ಲ. ಜನರ ಮುಂದೆ ಹೋಗುತ್ತೇನೆ. ಮತದಾರರೇ ತೀರ್ಪು ಕೊಡುತ್ತಾರೆ ಎಂದು ಹೇಳಿದರು.
ನನ್ನ ಮೇಲೆ ಹಲ್ಲೆಗೆ ಯತ್ನಿಸಿರುವುದು ಇದೇ ಮೊದಲಲ್ಲ. ೧೯೯೯ರಲ್ಲಿ ವಿಜಯೋತ್ಸವ ಸಮಯದಲ್ಲಿ ಚಾಕುವಿನಿಂದ ತಿವಿಯಲು ಯತ್ನಿಸಲಾಗಿತ್ತು. ಈ ಬಾರಿ ನಾಮಪತ್ರ ಸಲ್ಲಿಸುವ ವೇಳೆ ಕಲ್ಲು ತೂರಾಟ ನಡೆದಿದೆ. ನನ್ನನ್ನೇ ಗುರಿ ಮಾಡಿಕೊಂಡು ಪದೇ ಪದೇ ಇಂತಹ ದಾಳಿ ನಡೆಯುತ್ತಿವೆ. ದ್ವೇಷ ತೀರಿಸಲು ಸಾರ್ವಜನಿಕ ಜೀವನ ಬಳಸಿಕೊಳ್ಳಬಾರದು ಎಂದು ಅವರು ಬೇಸರ ವ್ಯಕ್ತಪಡಿಸಿದರು.