ಹಲ್ಲೆಕೋರರ ವಿರುದ್ಧ ಕ್ರಮಕ್ಕೆ ಅಶೋಕ್ ಆಗ್ರಹ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಏ.೧೮:ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದವರ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಗೂಂಡಾ ಮತ್ತು ದೇಶದ್ರೋಹ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಜೈಶ್ರೀರಾಮ್ ಘೋಷಣೆ ಕೂಗಿದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಈ ಹಲ್ಲೆ ನಡೆಸಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಗೂಂಡಾ ಮತ್ತು ದೇಶದ್ರೋಹ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೆ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇಸ್ಲಾಮಿಕ್ ಸಂಘಟನೆಗಳು ಪಾಕಿಸ್ತಾನ ಪರ ಘೋಷಣೆ ಕೂಗುವವರ ಚಟುವಟಿಕೆ ಹೆಚ್ಚಾಗಿದೆ. ಮತೀಯ ಧೋರಣೆಯು ಮಿತಿಮೀರಿದೆ. ಜೈ ಶ್ರೀರಾಮ್ ಹೇಳಿಕೆಗೆ ಧಮ್ಕಿ ಹಾಕಿ ಹಲ್ಲೆ ಮಾಡುತ್ತಾರೆ ಎಂದರೆ ನಾವು ಭಾರತದಲ್ಲಿದ್ದೇವೆಯೇ ಇಲ್ಲ ಪಾಕಿಸ್ತಾನದಲ್ಲಿದ್ದೀವಾ ಎಂಬ ಆತಂಕ ಕಾಡುತ್ತಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕವನ್ನು ಇಸ್ಲಾಂ ಮೂಲಭೂತವಾದಿಗಳ ಕೈಗೆ ಕೊಟ್ಟಿದ್ದಾರೆಯೇ ಹಿಂದೂಗಳು ಭಯದಿಂದ ಬದುಕುವ ವಾತಾವರಣವಿದೆ ಇದು ಖಂಡನೀಯ. ಕಾಂಗ್ರಸ್ ಬೆಂಬಲದಿಂದ ಇಸ್ಲಾಂ ಮೂಲಭೂತವಾದಿಗಳು ಮಿತಿಮೀರಿ ವರ್ತಿಸುತ್ತಿದ್ದಾರೆ. ಇವರ ಮೇಲೆ ಸರ್ಕಾರ ಯಾವ ಕ್ರಮಕೈಗೊಂಡಿದೆ. ಬಂಧನ ಮಾಡಿದೆಯೇ ಇಲ್ಲ ಬಿರಿಯಾನಿ ಕೊಟ್ಟು ಕಳುಹಿಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟ ಇಲ್ಲಿ ಏನಾಗುತ್ತಿದೆ ಕಾಂಗ್ರೆಸ್ ಸರ್ಕಾರದಿಂದ ಅಲ್ಪಸಂಖ್ಯಾತ ಮೂಲಭೂತವಾದಿಗಳಿಗೆ ಹೊಸ ಹುರುಪು ಬಂದಿದೆ. ಹೇಳೋರು ಕೇಳೋರೆ ಇಲ್ಲ ಎಂದು ಈ ರೀತಿ ಮಾಡುತ್ತಿದ್ದಾರಾ, ಕಾಂಗ್ರೆಸ್‌ಗೆ ಮುಸ್ಲಿಮರನ್ನು ಓಲೈಸಬೇಕು ಅಷ್ಟೆ. ಈ ಸರ್ಕಾರ ಹೆಚ್ಚು ದಿನ ಉಳಿಯಲ್ಲ ಎಂದು ಆರ್. ಅಶೋಕ್ ಹೇಳಿದರು.
ಹಾಲಿ ಸಂಸದ ಉಮೇಶ್‌ಜಾಧವ್, ಪಿಎಸ್‌ಐ ಹಗರಣದ ಆರೋಪಿಗಳಾದ ಆರ್.ಟಿ ಪಾಟೀಲ್, ದಿವ್ಯಾಹಾಗರಗಿ ಜತೆ ಕಾಣಿಸಿಕೊಂಡ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್ ಗುರುತಿಸಿಕೊಳ್ಳೋದು ಬೇರೆ ಮತ ಕೇಳೋದು ಬೇರೆ ಜಾಧವ್ ಅವರು ಮತ ಕೇಳಕ್ಕೆ ಅವರ ಮನೆಗೆ ಹೋಗಿದ್ದಾರೆ ಅಷ್ಟೆ ಎಂದರು.
ಈ ಹಿಂದೆ ಜನಾರ್ಧನರೆಡ್ಡಿ ಅವರ ವಿರುದ್ಧ ಹೋರಾಟ ಮಾಡಿದ ಕಾಂಗ್ರೆಸ್, ರಾಜ್ಯಸಭಾ ಚುನಾವಣೆಯಲ್ಲಿ ಅವರ ಕೈಹಿಡಿದು ಓಡಾಡಿ ಮತ ಹಾಕಿಸಿಕೊಂಡರಲ್ಲ ಇದಕ್ಕೆ ಕಾಂಗ್ರೆಸ್ ನಾಯಕರು ಉತ್ತರ ಕೊಡಲಿ ಎಂದು ಅಶೋಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖ್ಯವಕ್ತಾರ ಅಶ್ವತ್ಥನಾರಾಯಣ, ರಾಜ್ಯ ವಕ್ತಾರ ಎಂ.ಜಿ ಮಹೇಶ್ ಉಪಸ್ಥಿತರಿದ್ದರು.
.