ಹಲ್ಲಿಂಗ್ ಪ್ರಕ್ರಿಯೆಗೆ ಸರ್ಕಾರದ ಮಾನದಂಡಗಳಂತೆ ಕ್ರಮವಹಿಸಲು ಡಿಸಿ ಸೂಚನೆ


ರಾಯಚೂರು, ಮೇ.೨೯-ಹಲ್ಲಿಂಗ್ ಪ್ರಕ್ರಿಯೆಗಾಗಿ ಜಿಲ್ಲೆಯ ೭೫೦ ರೈತರು ನೋಂದಣಿ ಮಾಡಿಕೊಂಡಿದ್ದು, ೮೮,೧೮೩ ಕ್ವಿಂಟಾಲ್ ಭತ್ತ ಖರೀದಿಗೆ ಸರ್ಕಾರ ನಿಗದಿ ಪಡಿಸಿದ ಮಾನದಂಡಗಳಂತೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ಅವರು ತಿಳಿಸಿದರು.
ಅವರು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲೆಯ ಅಕ್ಕಿ ಗಿರಣಿ ಮಾಲೀಕರೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ ರೈತರು ಭತ್ತ ಬೆಳೆದು, ಕಟಾವು ಮಾಡಿದ್ದಾರೆ, ಅದರ ಹಲ್ಲಿಂಗ್ ಪ್ರಕ್ರೆಯೆಗಾಗಿ ೭೫೦ ರೈತರು ನೋಂದಣಿ ಮಾಡಿಕೊಂಡಿದ್ದು, ಜಿಲ್ಲೆಯ ಅಕ್ಕಿ ಗಿರಿಣಿ ಮಾಲೀಕರು ಭತ್ತ ಪಡೆಯಲು ರೈತರು ನೀಡಿದ ಭತ್ತದ ಮಾದರಿಯನ್ನು ಪರಿಶೀಲಿಸಿಕೊಳ್ಳಬೇಕು, ಅರ್ಹತೆ ಇದ್ದಲ್ಲಿ ರೈಸ್ ಮಿಲ್ ಮಾಲೀಕರು ಭತ್ತವನ್ನು ಅಕ್ಕಿಯನ್ನಾಗಿ ಪರಿವರ್ತಿಸಿಕೊಡಬೇಕು, ಅದಕ್ಕೂ ಮುನ್ನ ಕೃಷಿ ಇಲಾಖೆಯಲ್ಲಿರುವ ಗ್ರೇಡರ್‌ಗಳು ಸರ್ಕಾರದ ನಿಗದಿ ಪಡಿಸಿದ ಮಾನದಂಡಗಳಂತೆ ಭತ್ತದ ಮಾದರಿಯನ್ನು ಪರಿಶೀಲಿಸಿ ವರದಿ ನೀಡುವರು ಎಂದು ಹೇಳಿದರು.
ಹಲ್ಲಿಂಗ್ ಪ್ರಕ್ರಿಯೆಯಲ್ಲಿ ಒಂದು ಕ್ವಿಂಟಾಲ್ ಭತ್ತಕ್ಕೆ ಶೇ. ೬೭ ರಷ್ಟ್ರು ಅಕ್ಕಿಯನ್ನು ಮರಳಿಸಬೇಕು, ಅದರಂತೆ ಅಕ್ಕಿ ಗಿರಣಿ ಮಾಲೀಕರು ಕ್ರವಹಿಸಬೇಕು, ಒಳ್ಳೆಯ ಗುಣಮಟ್ಟದ ಅಕ್ಕಿ ನೀಡುವಲ್ಲಿ ಗಿರಣಿ ಮಾಲೀಕರು ಕ್ರಮವಹಿಸಬೇಕು ಎಂದರು.
ಮುಂಬರುವ ಮಾಹೆಯಲ್ಲಿ ಮಳೆ ಬರುವ ಸಾಧ್ಯತೆ ಇರುವದರಿಂದ ರೈತರು ಬೆಳೆದ ಭತ್ತವನ್ನು ಕೂಡಲೇ ಪಡೆಯಬೇಕು, ಇಲ್ಲದಿದ್ದರೆ ರಾಜ್ಯ ಉಗ್ರಾಣ ನಿಗಮದಲ್ಲಿರಿಸಿ ಅದರ ಪ್ರಮಾಣ ಪತ್ರವನ್ನು ಎಪಿಎಂಸಿಗೆ ನೀಡಿದ್ದಲ್ಲೀ ಮೂರು ತಿಂಗಳ ಮಟ್ಟಿಗೆ ಅಡಮಾನ ಸಾಲಸೌಲಭ್ಯ ಪಡೆಯುವ ಅವಕಾಶವಿರುತ್ತದೆ, ಈ ಬಗ್ಗೆ ಅಗತ್ಯ ಕ್ರಮಕೈಗೊಳ್ಳುವಂತೆ ಎಪಿಎಂಸಿ ಉಪ ನಿರ್ದೇಶಕ ಕೃಷ್ಣ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಮಲ್ಲಿಕಾರ್ಜುನ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಅರುಣ್ ಕುಮಾರ್, ಎಪಿಎಂಸಿ ಕಾರ್ಯದರ್ಶಿ ಶ್ರೀನಿವಾಸ್, ಉಗ್ರಾಣ ನಿಗಮದ ವ್ಯವಸ್ಥಾಪಕ ಜಯತೀರ್ಥ ಸೇರಿದಂತೆ ಇತರರು ಇದ್ದರು.