‘ಹಲೋ ಕಂದಾಯ ಸಚಿವರೇ’ ಸಹಾಯವಾಣಿ ಲೋಕಾರ್ಪಣೆ

ಬೆಂಗಳೂರು,ಮೇ ೧೪- ದೇಶದಲ್ಲಿ ವಿನೂತನವಾದ ೭೮ ಗಂಟೆಗಳಲ್ಲಿ ಮನೆಯ ಬಾಗಿಲಿಗೆ ಪಿಂಚಣಿ ತಲುಪಿಸುವ ಹಲೋ ಕಂದಾಯ ಸಚಿವರೇ ಸಹಾಯವಾಣಿಯನ್ನು ಲೋಕಾರ್ಪಣೆ ಮಾಡಲಾಗಿದೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಮನೆ ಬಾಗಿಲಿಗೆ ಪಿಂಚಣಿ ಯೋಜನೆಯನ್ನು ತಲುಪಿಸುವ ಹಲೋ ಕಂದಾಯ ಸಚಿವರೇ ಸಹಾಯವಾಣಿ ಸಂಖ್ಯೆ-೧೫೫೨೪೫ಗೆ ಚಾಲನೆ ನೀಡಿದರು.
ಸಹಾಯವಾಣಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್,
“ಇದೊಂದು ವಿನೂತನ ಕಾರ್ಯಕ್ರಮ. ಸಾಮಾನ್ಯವಾಗಿ ವಿಧಾನಸೌಧದಲ್ಲಿ ಕುಳಿತು ಯೋಜನೆ ರೂಪಿಸುತ್ತೇವೆ. ಜನರ ಬಳಿ ತೆರಳಿ ಅವರ ಅಭಿಪ್ರಾಯ ಪಡೆದು ಯೋಜನೆ ರೂಪಿಸಿದರೆ ಮಾತ್ರ ಅದು ಜನರ ಸಂಕಷ್ಟ ಪರಿಹಾರ ನೀಡಲು ಸಾಧ್ಯ. ಮೊದಲೆಲ್ಲ ೬ ತಿಂಗಳು ಪಿಂಚಣಿಗಾಗಿ ಅಲೆಯಬೇಕಿತ್ತು.ಇಷ್ಟು ವರ್ಷ ಜನರಿಗೆ ಸಮಸ್ಯೆ ಆಗಿತ್ತು. ಇಂದು ಇದಕ್ಕೆ ಪರಿಹಾರ ನೀಡಿದ್ದೇವೆ. ೭೨ ಗಂಟೆಗಳಲ್ಲಿ ಪಿಂಚಣಿ ಸಿಗುವಂತೆ ಮಾಡುತ್ತಿದ್ದೇವೆ. ಬೊಮ್ಮಾಯಿ ನೇತೃತ್ವದ ಸರ್ಕಾರ ಜನರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸಲು ಹಲವಾರು ಕಾರ್ಯಕ್ರಮ ರೂಪಿಸಿದೆ” ಎಂದು ಹೇಳಿದರು.
ನಾಗರಿಕರು ದೂರವಾಣಿ ಕರೆ ಮೂಲಕ ಪಿಂಚಣಿ ಸೌಲಭ್ಯಕ್ಕೆ ಕೋರಿಕೆ ಸಲ್ಲಿಸಬಹುದಾದ ವಿನೂತನ ಯೋಜನೆ ದೇಶದಲ್ಲಿಯೇ ಪ್ರಮಾಣ ಬಾರಿಗೆ ಚಾಲನೆ ನೀಡಿದ್ದೇವೆ ಎಂದರು.
ರಾಜ್ಯ ಸರ್ಕಾರ ವೃದ್ಧಾಪ್ಯ ವೇತನ ಹಾಗೂ ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲರು, ವಿಧವೆಯರು ಅವಿವಾಹಿತ ಅಥವಾ ವಿಚ್ಛೇದಿತ ಮಹಿಳೆಯರು, ತೃತೀಯ ಲಿಂಗದವರು, ಆಸಿಡ್ ದಾಳಿಗೊಳಗಾದ ಮಹಿಳೆಯರು ಮತ್ತು ಎಂಡೋಸಲ್ಫಾನ್ ಸಂತ್ರಸ್ತರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ೯ ವಿವಿಧ ಮಾಸಿಕ ಪಿಂಚಣಿ ಯೋಜನೆಗಳು ಅನುಷ್ಠಾನಲ್ಲಿದೆ.
ರಾಜ್ಯದಲ್ಲಿ ಒಟ್ಟು ೭೩.೨೩ ಲಕ್ಷ ಫಲಾನುಭವಿಗಳಿಗೆ ಮಾಸಿಕ ಪಿಂಚಣಿ ಸೌಲಭ್ಯ ನೀಡಲಾಗುತ್ತಿದೆ ಎಂದು ಹೇಳಿದರು.
ಪಿಂಚಣಿ ನೀಡಲು ೨೦೨೦-೨೧ನೇ ಸಾಲಿನಲ್ಲಿ ರೂ.೭೮೦೦ ಕೋಟಿ, ಪ್ರಸಕ್ತ ವರ್ಷ ರೂ. ೯೪೮೩.೫೧ ಕೋಟಿ ಅನುದಾನ ನೀಡಲಾಗಿದೆ. ಸರ್ಕಾರವು ೬೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಪಿಂಚಣಿಯನ್ನು ರೂ. ೧೦೦೦ ರಿಂದ ೧೨೦೦ ಕ್ಕೆ ಏರಿಸಿದೆ. ಅಂಗವಿಕಲ ಹಾಗೂ ವಿಧವಾ ವೇತನ ಯೋಜನೆಯಡಿ ಮೊತ್ತವನ್ನು ರೂ. ೬೦೦ ರಿಂದ ೮೦೦ ಕ್ಕೆ ಹೆಚ್ಚಿಸಿದೆ.
ಇದರಿಂದ ಸುಮಾರು ೫೯.೪೫ ಲಕ್ಷ ಫಲಾನುಭವಿಗಳಿಗೆ ಉಪಯೋಗವಾಗಿದೆ ಎಂದರು.
ಶೇ ೭೫ ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮನೋವೈಕಲ್ಯತೆಯಿಂದ ಬಳಲುತ್ತಿರುವವರಿಗೆ ಮಾಸಿಕ ಪಿಂಚಣಿ ಮೊತ್ತವನ್ನು ರೂ. ೧೪೦೦ ರಿಂದ ರೂ. ೨೦೦೦ ಕ್ಕೆ ಹೆಚ್ಚಿಸಿದೆ. ಸರ್ಕಾರವು ಮನಸ್ವಿನಿ ಯೋಜನೆಯ ಫಲಾನುಭವಿಗಳಿಗೆ ಮಾಸಿಕ ಪಿಂಚಣಿಯನ್ನು ರೂ. ೬೦೦ ರಿಂದ ೮೦೦ ಕ್ಕೆ ಹಾಗೂ ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ರೂ. ೩೦೦೦ ದಿಂದ ರೂ. ೧೦,೦೦೦ ಕ್ಕೆ ಹೆಚ್ಚಿಸಲಾಗಿದೆ ಎಂದರು.
ಸ್ವಯಂ ಪ್ರೇರಿತ ಪಿಂಚಣಿ ಮಂಜೂರಾತಿ ಅಭಿಯಾನ (ನವೋದಯ ಆಪ್ ಮೂಲಕ): ಅರ್ಹರನ್ನು ಸ್ವಯಂ ಪ್ರೇರಿತವಾಗಿ ಗುರುತಿಸಿ ಅರ್ಜಿರಹಿತ ಪಿಂಚಣಿ ಮಂಜೂರು ಮಾಡುವ ನಿಟ್ಟಿನಲ್ಲಿ “ಮನೆಬಾಗಿಲಿಗೇ ಮಾಸಾಶನ ಕಾರ್ಯಕ್ರವನ್ನು ರಾಜ್ಯದಲ್ಲಿ ಜನವರಿ ೨೦೨೧ ರಲ್ಲಿ ಜಾರಿಗೆ ತರಲಾಗಿದ್ದು ೫೩ ಸಾವಿರ ಜನರಿಗೆ ಪಿಂಚಣಿ ನೀಡಲಾಗಿದೆ ಎಂದರು.
ಸಮಗ್ರ ವಾರ್ಷಿಕ ಪರಿಶೀಲ
ನವೋದಯ ಮೊಬೈಲ್ ಆಪ್ ಮೂಲಕ ಪ್ರಸ್ತುತ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಸಮಗ್ರ ವಾರ್ಷಿಕ ಪರಿಶೀಲನಾ ಕಾರ್ಯವನ್ನು ನಡೆಸಲಾಗುತ್ತಿದ್ದು, ಇಲ್ಲಿಯವರೆವಿಗೂ ೩.೫೮ ಲಕ್ಷ ಮರಣ/ ಅನರ್ಹರನ್ನು ಗುರುತಿಸಿ ಒಟ್ಟು, ವಾರ್ಷಿಕ ರೂ. ೪೩೦ ಕೋಟಿಗಳನ್ನು ಸರ್ಕಾರದ ಬೊಕ್ಕಸಕ್ಕೆ ಉಳಿತಾಯ ಮಾಡಲಾಗಿದೆ.
ಹಲೋ, ಕಂದಾಯ ಸಚಿವರೇ ಸಹಾಯವಾಣಿ ೭೨ ಗಂಟೆಯಲ್ಲಿ ಮನೆ ಬಾಗಿಲಿಗೆ ಪಿಂಚಣಿ
ದೇಶದಲ್ಲಿಯೇ ಪ್ರಥಮಬಾರಿಗೆ ಜಾರಿಯಾಗುತ್ತಿರುವ ಯೋಜನೆ ಎಂದರು.
ಸರ್ಕಾರವು ಇದೀಗ ದೂರವಾಣಿ ಮೂಲಕವೇ ಪಿಂಚಣಿ ಕೋರಿಕೆ ಸ್ವೀಕರಿಸಿ ೭೨ ಗಂಟೆಯಲ್ಲಿ ಪಿಂಚಣಿ ಮಂಜೂರಾತಿ ಮಾಡುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ನಾಗರಿಕರು ದೂರವಾಣಿ ಕರೆ ಮೂಲಕ ತಮ್ಮ ಆಧಾರ್ ಸಂಖ್ಯೆ ಒದಗಿಸಿ ಪಿಂಚಣಿ ಸೌಲಭ್ಯ ಕೋರಿಕೆ ಸಲ್ಲಿಸಬಹುದಾಗಿದೆ. ದೂರವಾಣಿ ಮುಖಾಂತರ ಸ್ವೀಕರಿಸಲಾದ ಕೋರಿಕೆ ಮೇರೆಗೆ ಗ್ರಾಮಲೆಕ್ಕಾಧಿಕಾರಿಗಳು ಸದರಿ ಮಾಹಿತಿ ಆಧರಿಸಿ ಅರ್ಜಿದಾರರ ಮನೆಬಾಗಿಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ “ನವೋದಯ” ಮೊಬೈಲ್ ಆಪ್ ಮೂಲಕ ಅರ್ಜಿದಾರರ ಮಾಹಿತಿ ನಮೂದಿಸಿಕೊಳ್ಳುತ್ತಾರೆ.
ಗ್ರಾಮಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅರ್ಜಿದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್, ಬ್ಯಾಂಕ್/ಅಂಚೆಖಾತೆ ವಿವರ, ವಿಳಾಸ ಮತ್ತು ವಯಸ್ಸಿಗೆ ಸಂಬಂಧಿಸಿದ ದಾಖಲಾತಿಗಳನ್ನು ಒದಗಿಸಬೇಕು. (ಪಡಿತರಚೀಟಿ, ಚುನಾವಣೆ ಗುರುತಿನ ಚೀಟಿ ಅಥವಾ ಸರ್ಕಾರ ವಿತರಿಸಿದ ಗುರುತಿನ ಚೀಟಿ),
ಅರ್ಹರಿಗೆ ೭೨ ಗಂಟೆ ಯೊಳಗೆ ನಾಡಕಚೇರಿ ಉಪತಹಸೀಲ್ದಾರರಿಂದ ಪಿಂಚಣಿ ಮಂಜೂರಾತಿ ಅನುಮೋದನೆ ನೀಡಿ, ಮಂಜೂರಾತಿ ಆದೇಶದ ಡೌನ್‌ಲೋಡ್ ಲಿಂಕ್‌ನ್ನು SಒS ಮೂಲಕ ಫಲಾನುಭವಿಗಳ ಮೊಬೈಲ್‌ಗೆ ಕಳುಹಿಸಲಾಗುವುದು.
ಗ್ರಾಮ ಲೆಕ್ಕಾಧಿಕಾರಿಗಳು/ ಗ್ರಾಮ ಸಹಾಯಕರ ಮೂಲಕ ಫಲಾನುಭವಿಗಳ ಮನೆಬಾಗಿಲಿಗೆ ಪಿಂಚಣಿ ಮಂಜೂರಾತಿ ಆದೇಶಪತ್ರ ವಿತರಣೆ ಮಾಡಲಾಗುವುದು ಮತ್ತು ಇದನ್ನು ಖಚಿತ ಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.