ಹಲೋ ಅಪ್ಪ, ಸಿಎಂ ವಿಷಯಾಂತರ

ಬೆಂಗಳೂರು, ನ. ೧೯- ಹಲೋ ಅಪ್ಪ ವಿಡಿಯೋ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಯಾಂತರ ಮಾಡುತ್ತಿದ್ದಾರೆ ಎಂದು ಕಿಡಿಕಾರಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಯತೀಂದ್ರಗೆ ವರುಣ ಕ್ಷೇತ್ರವನ್ನು ಹೊರಗುತ್ತಿಗೆ ಕೊಟ್ಟಿದ್ದೀರಾ, ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಹಲೋ ಅಪ್ಪ ವಿಡಿಯೋ ಸಂಬಂಧ ಮುಖ್ಯಮಂತ್ರಿಗಳ ಹೇಳಿಕೆಗೆ ಸರಣಿ ಟ್ವೀಟ್‌ನಲ್ಲಿ ಹಲವು ಪ್ರಶ್ನೆಗಳನ್ನು ಕೇಳಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿಗಳೇ ವಿಡಿಯೋ ವಿಷಯ ವಿಷಯಾಂತರ ಮಾಡಬೇಡಿ. ನಾನು ಹೇಳಿದ್ದೇನು, ನೀವು ಹೇಳುತ್ತಿರುವುದೇನು, ತಿರುಚುವ, ವಕ್ರೀಕರಿಸುವ ಚಾಳಿ ಬಿಡಿ. ನೀವು ಈ ರಾಜ್ಯದ ಆರೂವರೆ ಕೋಟಿ ಕನ್ನಡಿಗರ ಪ್ರತಿನಿಧಿ ಮತ್ತು ಉತ್ತರದಾಯಿ. ಉತ್ತರ ಕೊಡಿ ಎಂದು ಒತ್ತಾಯಿಸಿದ್ದಾರೆ.
ಒಂದು ವಿಡಿಯೋ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿಮ್ಮ ಸಂಪುಟಕ್ಕೆ ನಿದ್ದೆಯೇ ಹಾರಿ ಹೋಗಿ ಬಿಟ್ಟಿದೆ. ಕೆಲಸ ಬಿಟ್ಟು ಸಚಿವರು ನಿಮ್ಮ ಗಸ್ತಿಗೆ ನಿಂತ ಬೌನ್ಸರ್‌ಗಳಂತೆ ವರ್ತಿಸುತ್ತಿದ್ದಾರೆ. ಸಚಿವರನ್ನು ಗುಂಪು ಗುಂಪಾಗಿ ಛೂ ಬಿಟ್ಟರೆ ಕುಮಾರಸ್ವಾಮಿ ಹೆದರಿ ಓಡುತ್ತಾನೆ ಎಂದು ಭಾವಿಸಿದರೆ ಅದು ನಿಮ್ಮ ಪೆದ್ದುತನವಷ್ಟೇ ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.
ವರುಣ ಕ್ಷೇತ್ರದ ಜನ ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ನೀವೇ ಅವರ ಕೆಲಸ ಮಾಡಬೇಕು. ನಿಮ್ಮ ಪುತ್ರನಿಗೆ ಕ್ಷೇತ್ರದ ಹೊರ ಗುತ್ತಿಗೆ ಏಕೆ, ನಾನು ಸಿಎಂ ಆಗಿದ್ದಾಗ ನನ್ನ ಮಗನಿಗೆ ಕ್ಷೇತ್ರದ ಹೊರಗುತ್ತಿಗೆ ನೀಡಿರಲಿಲ್ಲ. ನೀವು ನಿಮ್ಮ ಮಗನಿಗೆ ವರುಣಾದ ಹೊರ ಗುತ್ತಿಗೆ ನೀಡಿ, ಆಶ್ರಯ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಅವರ ನೇತೃತ್ವದಲ್ಲೇ ಕೆಡಿಪಿ ಸಭೆ ನಡೆಸಲು ಹಾಗೂ ಅಧಿಕಾರಿಗಳ ಸಭೆ ನಡೆಸಿ ದರ್ಬಾರ್ ಮಾಡಲು ಅನುವು ಮಾಡಿಕೊಟ್ಟಿದ್ದೀರಿ, ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ, ಇದ್ದರೆ ತಿಳಿಸಿ ಎಂದು ಕುಮಾರಸ್ವಾಮಿ ಟ್ವೀಟ್‌ನಲ್ಲಿ ಆಗ್ರಹಿಸಿದ್ದಾರೆ.
ನನಗೆ ತಿಳಿದ ಮಟ್ಟಿಗೆ ಈವರೆಗೂ ಯಾವ ಮುಖ್ಯಮಂತ್ರಿಗಳು ಕೂಡಾ ಕ್ಷೇತ್ರದ ಹೊರಗುತ್ತಿಗೆಯನ್ನು ಮಕ್ಕಳಿಗೆ ಕೊಟ್ಟಿದ್ದಿಲ್ಲ. ನೀವು ಕೊಟ್ಟು ಮೇಲ್ಪಂಕ್ತಿ ಆಗಿದ್ದೀರಿ, ಹಿಂಬಾಗಿಲಿನಿಂದ ಮಗನಿಗೆ ಅಧಿಕಾರ ಕೊಡಲು ಕೆಡಿಪಿ ಪಟ್ಟ ಕಟ್ಟಿದ್ದೀರಿ, ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇದೆಯೇ ತಿಳಿಸಿ ಎಂದು ಒತ್ತಾಯಿಸಿದ್ದಾರೆ.
ನನಗೆ ತಿಳಿದಿರುವ ಪ್ರಕಾರ ಸಿಎಸ್‌ಆರ್ ಎಂದರೆ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ. ಈಗ ಅದು ಕರಪ್ಟ್ ಸನ್ ಆಫ್ ಸಿದ್ದರಾಮಯ್ಯ ಆಗಿದೆ. ರಾಜ್ಯದಲ್ಲಿ ಸಿಎಸ್‌ಆರ್ ಕಲೆಕ್ಷನ್ ಮಾಡಲು ನಿಮ್ಮ ಸುಪುತ್ರನಿಗೆ ಹೊರಗುತ್ತಿಗೆಯನ್ನು ನೀವೇ ಕೊಟ್ಟಿದ್ದೀರಿ ಹೇಗೆ, ೨೨೪ ಕ್ಷೇತ್ರಗಳ ಸಿಎಸ್‌ಆರ್ ಉಸ್ತುವಾರಿ ಅವರದ್ದೇನಾ, ಶೇ. ೨ ರಷ್ಟು ಸಿಎಸ್‌ಆರ್ ಮೇಲೂ ನಿಮ್ಮ ಕಾಕ ದೃಷ್ಟಿ ಬಿದ್ದಂತಿದೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಸಚಿವಾಲಯದ ಅಧಿಕಾರಿಗಳ ಕರ್ತವ್ಯ ಪಟ್ಟಿ ಪ್ರಕಾರ ವಿಶೇಷ ಕರ್ತವ್ಯಾಧಿಕಾರಿ ಆರ್. ಮಹದೇವ್‌ಗೆ ಶಿಕ್ಷಣ ಇಲಾಖೆಯ ಹೊಣೆ ಇಲ್ಲ. ಜಂಟಿ ಕಾರ್ಯದರ್ಶಿ ಎಂ. ರಾಮಯ್ಯಗೆ ಆ ಹೊಣೆ ಇದೆ. ವರುಣಾ ಹೊಣೆ ಇನ್ನೊಬ್ಬ ವಿಶೇಷ ಅಧಿಕಾರಿ ಕೆ. ವಿಜಯ ಅವರದ್ದು. ಇದು ಸತ್ಯ ಸ್ಥಿತಿ. ಹೀಗಿರುವಾಗ ಅಪರ ಸತ್ಯಹರಿಶ್ಚಂದ್ರರಾದ ನೀವೇ ಸುಳ್ಳು ಹೇಳುವುದೇ, ಸಿಎಸ್‌ಆರ್‌ಗೂ, ಶಿಕ್ಷಣ ಇಲಾಖೆಗೂ ಸಂಬಂಧ ಇಲ್ಲ ಎಂದು ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ ಎಂದು ಕುಮಾರಸ್ವಾಮಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಜನಹಿತಕ್ಕಾಗಿ ದನಿ ಎತ್ತಿದ ನನ್ನನ್ನು ತಂದೆ, ಅಣ್ಣ, ಮಗನನ್ನು ಎಳೆ ತಂದು ಕಟ್ಟಿ ಹಾಕಲು ಸಾಧ್ಯವಿಲ್ಲ. ಜನ ಎಲ್ಲಿದ್ದೀಯಪ್ಪ ಕುಮಾರಣ್ಣ ಎಂದರೆ ಓಡಿ ಹೋಗುತ್ತೇನೆ. ಸತ್ಯಕ್ಕೆ ಸಮಾಧಿ ಕಟ್ಟಲು ನೀವು ಸೃಷ್ಠಿಸುತ್ತಿರುವ ಸುಳ್ಳಿನ ಸೌಧದ ಅಡಿಪಾಯವೇ ಈಗ ಕುಸಿಯುತ್ತಿದೆ. ಮಾಡದ ತಪ್ಪಿಗೆ ವಿದ್ಯುತ್ ಪ್ರಕರಣದಲ್ಲಿ ದಂಡ ತೆತ್ತಿದ್ದೇನೆ, ವಿಷಾದಿಸಿದ್ದೇನೆ. ಈಗ ನಿಮ್ಮ ಪ್ರತಿಷ್ಠೆ ಮೂರಾಬಟ್ಟೆಯಾಗಿದ್ದು ಇರಲಿ, ರಾಜ್ಯದ ಮುಖ್ಯಮಂತ್ರಿಯನ್ನೇ ಟೆಲಿಫೋನ್ ಆಪರೇಟರ್ ಮಾಡಿದ ನಿಮ್ಮ ಪುತ್ರನನ್ನು ಇನ್ನು ಸಮರ್ಥನೆ ಮಾಡುತ್ತಿದ್ದೀರಲ್ಲಾ, ನನಗೆ ಟೆಲಿಫೋನ್ ಆಪರೇಟರ್‌ಗಳ ಬಗ್ಗೆ ಗೌರವ ಇದೆ ಸಿದ್ದರಾಮಯ್ಯ ಎಂದು ಅವರು ಟಾಂಗ್ ನೀಡಿದ್ದಾರೆ.
ನಿಮ್ಮ ಮತ್ತು ನಿಮ್ಮ ಪುತ್ರನಿಂದ ಕರ್ನಾಟಕ ತಲೆತಗ್ಗಿಸುವಂತಾಗಿದೆ. ಕಾಸಿಗಾಗಿ ಹುದ್ದೆ ದಂಧೆಯಿಂದ ಕರುನಾಡನ್ನು ಕುಖ್ಯಾತಗೊಳಿಸಿದ್ದೀರಿ, ಹೋದ ಮಾನ ವಾಪಸ್ ಪಡೆಯಲಿಕ್ಕೆ ಏನು ಮಾಡುತ್ತೀರಿ, ವಿಧಾನಸೌಧದ ಮುಂದೆ ತಲೆತಗ್ಗಿಸಿ ನಿಂತು ಪ್ರಾಯಶ್ಚಿತ ಮಾಡಿಕೊಳ್ಳುತ್ತೀರಾ, ಅಷ್ಟು ನೈತಿಕತೆ ನಿಮಗೆ ಇದೆಯೇ ಎಂದು ಅವರು ಸವಾಲು ಹಾಕಿದ್ದಾರೆ.
ವರ್ಗಾವಣೆ ದಂಧೆಯ ಪೆನ್‌ಡ್ರೈವ್ ಇದೆ. ಅದನ್ನು ಕಳೆದಿಲ್ಲ. ಅದನ್ನು ತೋರಿಸಿದೊಡನೆ ನನ್ನಲ್ಲಿಗೆ ಓಡಿ ಬಂದವರ ಪಟ್ಟಿ ಕೊಡಲೇ ಹೇಳಿರುವ ಕುಮಾರಸ್ವಾಮಿ ನನ್ನ ಮಾನಸಿಕ ಸ್ವಾಸ್ಥ್ಯ ಇರಲಿ, ನಿಮ್ಮ ಅಧಿಕಾರದ ಅಂಟು ರೋಗಕ್ಕೆ ಮದ್ದೇನು, ನಿಮಗಿರುವ ಧನದಾಹ ಜಾಡ್ಯಕ್ಕೆ ಚಿಕಿತ್ಸೆ ಪಡೆಯಬಾರದೇ, ಮಾನಸಿಕ ಅಸ್ವಸ್ಥಕ್ಕಿಂತ ಇದು ಮಾನಕ ಮರರೋಗವಲ್ಲವೇ, ಮುಖ್ಯಮಂತ್ರಿಯೇ ಇಂತಹ ವಿನಾಶಿಕಾರಿ ಕಾಯಿಲೆಗೆ ತುತ್ತಾದರೆ ನಾಡಿನ ಪಾಡೇನು, ತುರ್ತು ಚಿಕಿತ್ಸೆ ನಿಮಗೆ ಅಗತ್ಯವಿದೆ ಎಂದು ಸಿದ್ದರಾಮಯ್ಯನವರಿಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.