ಹಲವೆಡೆ ವರುಣನ ಪ್ರತಾಪಕ್ಕೆ ಇಬ್ಬರ ಬಲಿ

ಬೆಂಗಳೂರು,ಜು.೩೧- ಕಳೆದ ಕೆಲವು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆರಾಯ ಮತ್ತೆ ತನ್ನ ಪ್ರತಾಪವನ್ನು ಮುಂದುವರೆಸಿದ್ದಾನೆ. ರಾಜಧಾನಿ ಬೆಂಗಳೂರು, ತುಮಕೂರು, ಕಲಬುರಗಿ, ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಚಾಮರಾಜ ನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ.ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ತುಮಕೂರಿನಲ್ಲಿ ವೃದ್ಧರೊಬ್ಬರು ಮೃತಪಟ್ಟರೆ, ಕಲಬುರಗಿಯಲ್ಲಿ ಉಕ್ಕಿ ಹರಿಯುತ್ತಿದ್ದ ಹಳ್ಳದಲ್ಲಿ ಮಹಿಳೆಯೊಬ್ಬರು ನೀರು ಪಾಲಾಗಿದ್ದಾರೆ.
ನಿನ್ನೆ ಸಂಜೆಯಿಂದ ತಡರಾತ್ರಿವರೆಗೂ ಸುರಿದ ವರ್ಷಧಾರೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಲಬುರಗಿಯಲ್ಲಿ ನದಿ ಉಕ್ಕಿ ಹರಿದು ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.ಕಲ್ಪತರನಾಡು ತುಮಕೂರಿನಲ್ಲಿ ಧಾರಾಕಾರ ಮಳೆ ಸುರಿದಿದೆ. ಇದರಿಂದಾಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು, ಜನರು ಪರದಾಡುವಂತಾಯಿತು. ಮಳೆಯಿಂದಾಗಿ ಶಿವಮೂಕಾಂಬಿಕ ನಗರದಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ೭೦ ವರ್ಷದ ಈರಣ್ಣ ಎಂಬುವರು ಸಾವನ್ನಪ್ಪಿದ್ದಾರೆ.ಮುಂಜಾನೆ ೩ ಗಂಟೆ ಸುಮಾರಿಗೆ ಸುರಿದ ಮಳೆಯಿಂದಾಗಿ ಮನೆಗೆ ನೀರು ನುಗ್ಗಿತ್ತು. ಈ ಸಂದರ್ಭದಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದಾಗಿ ವೃದ್ಧರು ಮೃತಪಟ್ಟಿದ್ದಾರೆ.
ಒಳಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಈ ದುರಂತ ಸಂಭವಿಸಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರಿನ ಸದಾಶಿವನಗರ, ನಜರಾಬಾದ್, ವೀರಾಪುರ, ಪಿಹೆಚ್ ಕಾಲೋನಿ ಸೇರಿದಂತೆ ಹಲವು ಮನೆಗಳಿಗೆ ನೀರು ನುಗ್ಗಿ ಪಾತ್ರೆ-ಪಗಡೆಗಳು ನೀರಿನಲ್ಲಿ ತೇಲಾಡುತ್ತಿವೆ. ೧೦ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಮೂರು ಅಡಿಯಷ್ಟು ನೀರು ನಿಂತಿದೆ.
ಕೋಲಾರ ಜಿಲ್ಲೆಯಲ್ಲೂ ವರುಣ ಅಬ್ಬರಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಗುಡುಗು, ಸಿಡಿಲಿನಿಂದ ಸುರಿದ ಮಳೆಯಿಂದಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ರಾತ್ರಿಯಿಡೀ ಜನರು ಜಾಗರಣೆ ಮಾಡುವಂತಾಯಿತು.
ಬೆಳಗಾವಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದ್ದು, ಜಿಲ್ಲೆಯ ರಾಯಭಾಗ ತಾಲ್ಲೂಕಿನಲ್ಲಿ ಮಳೆಯಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಕೆಲ ಮನೆಗಳಿಗೆ ನೀರು ನುಗ್ಗಿದ್ದರಿಂದ ನಾಗರಿಕರು ಪರದಾಡುವಂತಾಯಿತು.

ಇದೇ ವೇಳೆ ಚಾಮರಾಜನಗರ, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲೂ ವರುಣ ಅಬ್ಬರಿಸಿದ್ದಾನೆ. ಕಲಬುರಗಿ ಜಿಲ್ಲೆಯ ಅಬ್ಜಲ್‌ಪುರ, ಜೇವರ್ಗಿ, ಚಿಂಚೋಳಿ, ಶಹಬಾದ್ ಸೇರಿದಂತೆ ಅನೇಕ ಭಾಗಗಳಲ್ಲಿ ಮಳೆ ಸುರಿದು ಗ್ರಾಮಗಳು ಜಲಾವೃತಗೊಂಡಿವೆ.
ಕಲಬುರಗಿಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮಹಿಳೆಯೊಬ್ಬರು ಕೊಚ್ಚಿಕೊಂಡು ಹೋಗಿರುವ ಘಟನೆ ಆಳಂದ ತಾಲ್ಲೂಕಿನ ತೀರ್ಥ ಗ್ರಾಮದಲ್ಲಿ ನಡೆದಿದೆ.ಕೊಚ್ಚಿಹೋದ ಮಹಿಳೆಯನ್ನು ೪೨ ವರ್ಷದ ಶ್ರೀದೇವಿ ಪೂಜಾರಿ ಎಂದು ಗುರುತಿಸಲಾಗಿದೆ. ಮಹಿಳೆಯ ಶವ ಇನ್ನೂ ಪತ್ತೆಯಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಗ್ರಾಮಸ್ಥರಿಂದ ಶೋಧನಾಕಾರ್ಯ ಮುಂದುವರೆದಿದೆ.
ಮಳೆಯಿಂದಾಗಿ ಜಿಲ್ಲೆಯ ಜನತೆ ಮತ್ತೆ ಪರಿತಪಿಸುವಂತಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು.ಕೆಲವು ಮನೆಗಳನ್ನಿ ದವಸ-ಧಾನ್ಯಗಳು ನೀರು ಪಾಲಾಗಿವೆ. ಮೂರು ದಿನಗಳಿಂದ ದಿನವಿಡೀ ಬಿಸಿಲಿನ ವಾತಾವರಣ ಕಂಡು ಬಂದಿತ್ತು. ಸಂಜೆಯ ವೇಳೆ ವರುಣ ಅಬ್ಬರಿಸುತ್ತಿದ್ದಾನೆ. ಮಳೆಯಿಂದಾಗಿ ಬೆಳೆ ನಾಶವಾಗುವ ಭೀತಿ ಎದುರಾಗಿದೆ.
ಗುಡುಗು-ಸಿಡಿಲು ಸಹಿತ ಸುರಿದ ಮಳೆಗೆ ೨ ಎತ್ತುಗಳು ಸಾವನ್ನಪ್ಪಿವೆ. ಈ ಸಂಬಂಧ ಕಾಳಗಿ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ನಾಗನಾಥ ತರಗೆ ಭೇಟಿ ನೀಡಿ ಪರಿಶೀಲಿಸಿದರು. ಸಿಡಿಲು ಬಡಿದ ವೇಳೆ ಎತ್ತುಗಳನ್ನು ಮರಕ್ಕೆ ಕಟ್ಟಿಹಾಕಲಾಗಿತ್ತು ಎಂದು ಹೇಳಲಾಗಿದೆ. ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೂ ನೀರು ನುಗ್ಗಿದೆ. ನೀರನ್ನು ಹೊರ ಹಾಕಲು ನಿವಾಸಿಗಳು ಹರಸಾಹಸ ಪಡಬೇಕಾಯಿತು.
ರಾಯಚೂರಿನಲ್ಲೂ ಮಳೆ ಅವಾಂತರ ಸೃಷ್ಟಿಸಿದ್ದು, ನಿರ್ಮಾಣ ಹಂತದಲ್ಲಿದ್ದ ಸೇತುವೆ ಪ್ರವಾಹಕ್ಕೆ ಕೊಚ್ಚಿ ಹೋಗಿದೆ.

ಇನ್ನೆರೆಡು ದಿನ ಮಳೆ
ಮಲೆನಾಡು ಭಾಗದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ತುಮಕೂರು, ಚಿತ್ರದುರ್ಗ, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗ್ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.