ಹಲವೆಡೆ ಧಾರಾಕಾರ ಮಳೆ: ಮನೆ ಕುಸಿದು ಬಾಲಕಿ ಸಾವು

ಕಲಬುರಗಿ,ಜೂ.3-ಬುಧವಾರ ಸಂಜೆ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆಯಾಗಿದ್ದು, ಜೇವರ್ಗಿ ತಾಲ್ಲೂಕಿನ ಬಳೂಂಡಗಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.
ಜಿಲ್ಲೆಯ ಚಿಂಚೋಳಿ, ಕಾಳಗಿ ಪಟ್ಟಣದಲ್ಲಿ ಎಡೆಬಿಡದೆ ಗುಡುಗು ಸಹಿತ ಧಾರಾಕಾರ ಮಳೆ ಸುರಿದ ಪರಿಣಾಮ ಪಟ್ಟಣದ ವಿವಿಧ ರಸ್ತೆಗಳಲ್ಲಿ ನೀರು ತುಂಬಿ ರಸ್ತೆ ಬಂದ್ ಆಗಿದ್ದವು. ಅಡ್ಡಾದಿಡ್ಡಿಯಾಗಿ ಸುರಿದ ಬಿರುಗಾಳಿ ಮಳೆಯ ರಭಸಕ್ಕೆ ಕೆಲವು ಮನೆಗಳಲ್ಲಿ ನೀರು ನುಗ್ಗಿ ತೊಂದರೆ ಅನುಭವಿಸುವಂತಾಯಿತು.
ಕಾಳಗಿ ಪಟ್ಟಣದ ಬಸ್ ನಿಲ್ದಾಣದಿಂದ ಭರತ್ನೂರಿಗೆ ಹೋಗುವ ಮುಖ್ಯ ರಸ್ತೆಯೂ ಸಂಪೂರ್ಣ ಜಲಾವೃತವಾಗಿತ್ತು. ಇದೇ ರಸ್ತೆ ಬದಿಯಲ್ಲಿ ಕಂಬಾರಿಕೆ ಕೆಲಸಕ್ಕಾಗಿ ಬೆರೆಡೆಯಿಂದ ವಲಸೆ ಬಂದು ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದ ಅಲೆಮಾರಿ ಜನಾಂಗದವರ ಗುಡಿಸಲುಗಳು ಕಿತ್ತು ಹೋದುದ್ದರಿಂದ ಅವರು ತೀವ್ರ ಸಂಕಷ್ಟ ಎದುರಿಸುವಂತಾಯಿತು.
ಕೊವಿಡ್ ಸಮಯದಲ್ಲಿ ಕೆಲಸವಿಲ್ಲದೆ ಕುಳಿತ ಅಲೆಮಾರಿ ಜನಾಂಗದವರು ವರುಣನ ಆರ್ಭಟದಿಂದ ಮತ್ತಷ್ಟು ತೊಂದರೆಗೆ ಸಿಲುಕಿದಂತಾಗಿತ್ತು.
ಭರತನೂರ ರಸ್ತೆಯಲ್ಲಿರುವ ಪಾಟೀಲ್ ಪೇಟ್ರೋಲ ಪಂಪ್ ಆವರಣದಲ್ಲಿ ನೀರು ತುಂಬಿಕೊಂಡಿರುವುದರಿಂದ ಅಲ್ಲಿ ಕೆಲಸ ಮಾಡುವ ಕಾರ್ಮಿಕರು ತೊಂದರೆ ಅನುಭವಿಸುವಂತಾಯಿತು.
ಈ ಎಲ್ಲಾ ಅವಘಡಗಳು ಮಧ್ಯೆಯೂ ಮುಂಗಾರಿನ ಹಂಗಾಮು ಬಿತ್ತನೆಯ ಕಾರ್ಯಕ್ಕೆ ಸಜ್ಜಾಗಿ ಕುಳಿತಿರುವ ರೈತರು, ಭೂಮಿಯಂತು ತಂಪಾಯಿತು. ಇನ್ನೂ ಜೂನ್ ಸಾತ್ ವರೆಗೆ ಮೂರು ಬಾರಿ ಉತ್ತಮ ಮಳೆಯಾಗಿ ಭೂಮಿ ಫಲವತ್ತಾಗುವುದೇ ತಡ ಭೂಮಿತಾಯಿಯ ಮಡಿಲಿಗೆ ಬೀಜ ಸುರಿಯಲು ತುದಿಗಾಲಲ್ಲಿ ನಿಂತಿದ್ದಾರೆ.
@12bc = ಬಾಲಕಿ ಸಾವು
ಜೇವರ್ಗಿ ತಾಲ್ಲೂಕಿನ ಬಳೂಂಡಗಿ ಗ್ರಾಮದಲ್ಲಿ ಧಾರಾಕಾರ ಮಳೆಗೆ ಮನೆ ಗೋಡೆ ಕುಸಿದು ಬಾಲಕಿಯೊಬ್ಬಳು ಸ್ಥಳದಲ್ಲಿಯೇ ಮೃತಪ್ಟಿದ್ದಾಳೆ. ನೀಲಮ್ಮ ತಂದೆ ಹಳ್ಳೆಪ್ಪ ತಳವಾರ (5) ಮೃತಪಟ್ಟ ಬಾಲಕಿ. ಮಳೆ ಸುರಿಯುತ್ತಿದ್ದ ವೇಳೆ ಬಾಲಕಿಯೊಬ್ಬಳೆ ಮನೆಯೊಳಗಿದ್ದಳು. ಮನೆಯ ಇತರ ಸದಸ್ಯರು ಹೊರಗಡೆ ಇದ್ದರು. ಮಳೆಗೆ ನೆನೆದ ಮನೆ ಗೋಡೆ ಏಕಾಏಕಿ ಕುಸಿದು ಬಿದ್ದು ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಬಾಲಕಿಯನ್ನು ಕಳೆದುಕೊಂಡ ಕಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಂಚೋಳಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಭಾರಿ ಮಳೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ.