ಹಲವು ಹೋರಾಟಗಳ ಫಲವಾಗಿ ಅಂತರಾಷ್ಟ್ರೀಯ ಮಹಿಳಾ ದಿನ

ಸಂಡೂರು:ಮಾ:15: ಮಹಿಳಾ ದಿನಾಚರಣೆ ಲಿಂಗಾಧಾರಿತ ಬೇಡಿಕೆಗಳ ಭಾಗವಾಗಿ ನಡೆದದ್ದು ಅಲ್ಲ, ಮಹಿಳೆಯರ ಧೀರೋದಾತ್ತ ಹೋರಾಟದ ದಿನವಾಗಿದೆ, ಮಹಿಳೆಯರ ಸಮಾನತೆಯ ಹಕ್ಕುಗಳ ಜೊತೆಗೆ ವರ್ಗ ದೃಷ್ಟಿಕೋನವನ್ನು ಹೊಂದಿದೆ ಎಂದು ಸಿ.ಐ.ಟಿ.ಯು. ತಾಲೂಕು ಸಂಚಾಲಕ ಜೆ.ಎಂ. ಚನ್ನಬಸಯ್ಯ ತಿಳಿಸಿದರು.
ಅವರು ಪಟ್ಟಣದ ನಿಸರ್ಗ ಭವನದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘ ತಾಲೂಕು ಘಟಕ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿ ಅಂತರಾಷ್ಟ್ರೀಯ ಮಹಿಳಾ ದಿನದ 2011ರ ಘೋಷವಾಕ್ಯವಾಗಿ ವಿಶ್ವ ಸಂಸ್ಥೆ ಮಹಿಳಾ ನಾಯಕತ್ವ ಮತ್ತು ಅದನ್ನು ಸಾಧಿಸುವತ್ತ ಎಂಬ ಕರೆಯನ್ನು ನೀಡಿ ಎಲ್ಲಾ ವಲಯಗಳಲ್ಲಿ ಸಂಘನೆಗಳಲ್ಲಿ ನಾಯಕತ್ವ ಪಡೆಯಲು ಮುಂದೆ ಬರಬೇಕು, ಬದುಕಿನ ಎಲ್ಲಾ ತೀರ್ಮಾನಗಳನ್ನು ಮಾಡುವ ಅಧಿಕಾರ, ಸಮಾನ ವೇತನ, ಎಲ್ಲಾ ರೀತಿಯ ಹಿಂಸೆ ತಡೆಗಟ್ಟಿ ಆರೋಗ್ಯ, ಶಿಕ್ಷಣ ಒದಗಿಸಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಖಾಜಾಬುನ್ನಿ ಮಾತನಾಡಿ ಮತದಾನದ ಹಕ್ಕು, ಸಮಾನ ಕೂಲಿ, ಕೆಲಸದ ಸಮಯ, ಲಿಂಗ ತಾರತಮ್ಯದ ವಿರುದ್ಧ ಅಂತರಾಷ್ಟ್ರೀಯ ಮಹಿಳಾ ದಿನ 1909ರ ಫೆಬ್ರವರಿ 28 ರಂದು ಅಮೇರಿಕದ ನ್ಯೂಯಾರ್ಕ ನಲ್ಲಿ ಅಮೇರಿಕದ ಸಮಾಜವಾದಿ ಪಕ್ಷ ಮೊದಲು ಪ್ರತಿಭಟನೆ ನಡೆಸಿತು, ಅಂದಿನಿಂದ ಪ್ರಾರಂಭವಾಗಿ 1911ರಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಸಮಾನತೆಯ ಹಕ್ಕನ್ನು ಪ್ರತಿಪಾದಿಸುವ ದಿನವಾಗಿ ಆಚರಣೆ ನಡೆದು ಬಂದಿದೆ, 1975ರಲ್ಲಿ ವಿಶ್ವ ಸಂಸ್ಥೆ ಅಧಿಕೃತವಾಗಿ ಅಂತರಾಷ್ಟ್ರೀಯ ಮಹಿಳಾದಿನಾಚರಣೆಯನ್ನು ಘೋಷಿಸಿತು ಎಂದರು.
ಜಿಲ್ಲಾ ಕಾರ್ಯದರ್ಶಿ ಎ.ಸ್ವಾಮಿ ಮಾತನಾಡಿ ಮಹಿಳಾ ತಾರತಮ್ಯ ಇನ್ನೂ ಜೀವಂತವಾಗಿದೆ, ತೀವ್ರವಾಗಿ ಆರ್ಥಿಕ, ಸಾಮಾಜಿಕ ಶೋಷಣೆಗೆ ಒಳಗಾಗಿದ್ದಾರೆ, ಸಂಘಟಿತರಾಗಿ ಜಾಗೃತಿಯನ್ನು ಮೂಡಿಸಿ ಹಕ್ಕುಗಳನ್ನು ಪಡೆದುಕೊಂಡಾಗ ಮಾತ್ರ ನಾವು ಪ್ರಗತಿಯನ್ನು ಸಾಧಿಸಲು ಸಾಧ್ಯ, ಅದ್ದರಿಂದ ಪ್ರತಿಯೊಬ್ಬರೂ ಸಹ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಒಗ್ಗಟ್ಟಿನ ಪ್ರಯತ್ನ ಮಾಡಬೇಕು ಎಂದರು.
ಸಮಾರಂಭದಲ್ಲಿ ತಾಲೂಕು ಕಾರ್ಯದರ್ಶಿ ದುರುಗಮ್ಮ ಅಧ್ಯಕ್ಷತೆ ವಹಿಸಿದ್ದರು, ಮಸಣ ಕಾರ್ಮಿಕರ ಸಂಘದ ಕಾರ್ಯದರ್ಶಿ ದುರುಗೇಶ್, ಲಕ್ಷ್ಮಮ್ಮ, ಸೋವೆನಹಳ್ಳಿ ಚಂದ್ರಮ್ಮ, ತಾಯಮ್ಮ, ಗಂಗಮ್ಮ, ಲಕ್ಷ್ಮಕ್ಕ, ಹುಲಿಗೆಮ್ಮ, ನರಸಮ್ಮ, ಇತರ ಹಲವಾರು ಮಹಿಳೆಯರು ಭಾಗವಹಿಸಿದ್ದರು.