ಹಲವು ಪ್ರಕರಣಗಳ ಆರೋಪಿಯ ಮೃತದೇಹ ಪತ್ತೆ: ತನಿಖೆ ಚುರುಕು

ಕಾಸರಗೋಡು, ಮೇ ೫- ಇಲ್ಲಿನ ಪೊಲೀಸ್ ಠಾಣೆಯಲ್ಲಿ ೫ಕ್ಕಿಂತಲೂ ಅಧಿಕ ಪ್ರಕರಣ ಹೊಂದಿದ್ದ ಆರೋಪಿ ಕಾಸರಗೋಡು ಸಮೀಪದ ಮೇಲ್ಪರಂಬ ಪೊಲೀಸ್ ಠಾಣಾ ವ್ಯಾಪ್ತಿಯ ಚಟ್ಟಂಚಾಲು ಪ್ರದೇಶದಲ್ಲಿ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಚೆಂಬುಗುಡ್ಡೆ ನಿವಾಸಿ ಹಿದಾಯತ್ (೨೮) ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮೇ ೫ರಂದು ಶವಮಹಜರು ಪರೀಕ್ಷೆ ನಡೆಯಲಿದೆ. ಬಳಿಕವಷ್ಟೇ ಸಾವಿನ ಕಾರಣ ತಿಳಿದುಬರಬಹುದು. ಹಿದಾಯತ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ, ಕಳವು, ಜಾನುವಾರು ಕಳವು ಕುರಿತು ೫ಕ್ಕಿಂತಲೂ ಅಧಿಕ ಪ್ರಕರಣಗಳಿವೆ. ಉಪ್ಪಳದಲ್ಲಿ ಕೆಲಸಕ್ಕಿದ್ದ ಹಿದಾಯತ್ ಮೇ ೧ರಿಂದ ನಾಪತ್ತೆಯಾಗಿದ್ದರೆಂದು ತಿಳಿದುಬಂದಿದೆ. ಎ ೩ರಂದು ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಚಟ್ಟಂಚಾಲು ಎಂಬಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಹಿದಾಯತ್ ಮೊಬೈಲ್ ಮಾತ್ರ ಪತ್ತೆಯಾಗಿದ್ದು, ಅದರಲ್ಲಿ ಸಿಮ್ ಕಾರ್ಡ್ ಪತ್ತೆಯಾಗಿಲ್ಲ. ಮೇಲ್ಪರಂಬ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.