ಹಲವು ನಾಯಕರು ಬಿಜೆಪಿ ಪಕ್ಷ ಬಿಡ್ತಾರೆ: ಎಂ. ಪಿ. ರೇಣುಕಾಚಾರ್ಯ

ಸಂಜೆವಾಣಿ ವಾರ್ತೆ

ದಾವಣಗೆರೆ.ಅ.20: ಬಿಜೆಪಿಯ ಹಲವು ನಾಯಕರು ಪಕ್ಷ ಬಿಡುತ್ತಾರೆ. ನನಗೆ ಫೋನ್ ಕರೆ ಮಾಡಿ ಈ ಕುರಿತು ಹೇಳುತ್ತಿದ್ದಾರೆ. ಬಿಜೆಪಿಯಲ್ಲಿ ಸಮರ್ಥ ನಾಯಕತ್ವ ಕೊರತೆಯೇ ಇದಕ್ಕೆ ಕಾರಣ. ನಾನು ಕೂಡ ಬಿಜೆಪಿಯವರಿಗೆ ಬೇಡ ಎನಿಸುತ್ತಿದೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆಂದು ಹೇಳಿಲ್ಲ. ಹೊನ್ನಾಳಿ – ನ್ಯಾಮತಿ ತಾಲ್ಲೂಕು ಬರಗಾಲ ಪಟ್ಟಿಗೆ ಸೇರ್ಪಡೆಗೆ ಒತ್ತಾಯಿಸಿದ್ದೇನೆ, ಅನುದಾನ ಬಾಕಿ ಇತ್ತು.  ಮರು ಚಾಲನೆ ನೀಡುವಂತೆ ಕಾಂಗ್ರೆಸ್ ಸರ್ಕಾರದ ಸಚಿವರು, ನಾಯಕರನ್ನು ಭೇಟಿ ಮಾಡಿದ್ದೇನೆ ಎಂದರು.ಹೊನ್ನಾಳಿ – ನ್ಯಾಮತಿ ತಾಲೂಕಿನಲ್ಲಿ ನರೇಂದ್ರ ಮೋದಿ ಅಭಿವೃದ್ಧಿ ಯೋಜನೆಗಳ ಕರ ಪತ್ರ ಹಂಚಿದ್ದೇವೆ, ಪಕ್ಷದ ಪರವಾಗಿಯೇ ಕೆಲಸ ಮಾಡುತ್ತಿದ್ದೇವೆ, ಪಕ್ಷದ ನಾಯಕರ ಮೇಲೆ ನೋವಾಗಿದೆ, ಆರು ಸಚಿವ ಸ್ಥಾನ ಖಾಲಿ ಇದ್ದರೂ ಬಿಜೆಪಿ ಅಧಿಕಾರದಲ್ಲಿದ್ದಾಗಸಚಿವ ಸ್ಥಾನ ನೀಡಲಿಲ್ಲ.  ಈಗ ನೋಡಿ ಕಾಂಗ್ರೆಸ್ ನವರು ಏಕ ಕಾಲದಲ್ಲಿ ಎಲ್ಲಾ ಮಂತ್ರಿ ಸ್ಥಾನ ತುಂಬಿದರು. ರಾಜೂ ಗೌಡ ಮತ್ತು ನನಗೂ ಅನ್ಯಾಯ ಮಾಡಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.ಜಿಲ್ಲೆಯಲ್ಲಿ ಎಸ್ ಎ ರವೀಂದ್ರನಾಥ್ ರಿಗೆ ಸಚಿವ ಸ್ಥಾನ ಕೊಡಬಹುದಿತ್ತು. ಆದರೂ ಕೊಡಲಿಲ್ಲ. ಐವರು ಶಾಸಕರು ಇದ್ದರೂ ಸಚಿವ ಸ್ಥಾನ ಸಿಗಲೇ ಇಲ್ಲ. ಈ ರೀತಿ ನಡೆದುಕೊಂಡಿದ್ದರಿಂದ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಬೇಕಾಯಿತು ಎಂದುವಿಶ್ಲೇಷಿಸಿದರು.ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿ ಘೋಷಣೆ ಮಾಡಿಲ್ಲ. ದಾವಣಗೆರೆ ಟಿಕೆಟ್ ಯಾರಿಗೆ ಎಂಬುದು ಗೊತ್ತಿಲ್ಲ. ಪಕ್ಷದಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಗಿಂತ ನಾನು ಸೀನಿಯರ್. ಪಕ್ಷ ಬಿಟ್ಟು ಹೋಗುವವರು ಹೋಗಲಿ, ನಾನು ಮತ್ತೆ ಗೆಲ್ಲುತ್ತೇನೆ ಎಂದು ಸಂಸದ ಜಿಎಂ ಸಿದ್ದೇಶ್ವರ್ ಹೇಳಿಕೆ ನೀಡಿದ್ದಾರೆ ಎಂಬ ವಿಚಾರ ಗಮನಕ್ಕೆ ಬಂದಿದೆ. ಸಿದ್ದೇಶ್ವರ ಅವರ ಬಗ್ಗೆ ಗೌರವ ಇದೆ, ವಯಸ್ಸಿನಲ್ಲಿ ಹಿರಿಯರು. ಇವರ ತಂದೆ ಮಲ್ಲಿಕಾರ್ಜುನಪ್ಪ ಅವರ ಮೂರು ಚುನಾವಣೆ, ಸಿದ್ದೇಶ್ವರ್ ಅವರ ನಾಲ್ಕು ಚುನಾವಣೆಗಳನ್ನ ನಾನು ಮಾಡಿದ್ದೇನೆ, ಜಿಎಂ ಸಿದ್ದೇಶ್ವರ್ ಗಿಂದ ನಾನು ಸೀನಿಯರ್, ನಾನು ಎಂಪಿ ಚುನಾವಣೆಗೆ ಸ್ಪರ್ಧೆ ಮಾಡೇ ಮಾಡುತ್ತೇನೆ, ಸ್ಪರ್ಧಿಸೋದು ಶತ ಸಿದ್ದ ಎಂದು ತಿಳಿಸಿದರು.ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಸಿದ್ದೇಶ್ವರ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸೋಲ್ಲ, ಇದೇ ಕೊನೆಯ ಚುನಾವಣೆ ಎಂದಿದ್ದರು. ಆ ಬಳಿಕ ನಾನೂ ಟಿಕೆಟ್ ಆಕಾಂಕ್ಷಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದೆ. ಆದರೆ ಇವರು ನಾನು ಹೊನ್ನಾಳಿಗೆ ಬರುತ್ತೇನೆ, ಅಲ್ಲಿ ನಮ್ಮ ಸಂಬಂಧಿಕರಿದ್ದಾರೆ, ಹೊನ್ನಾಳಿಯಲ್ಲಿ ಸ್ಪರ್ಧಿಸುತ್ತೇನೆ ಎಂದು ಗೊಂದಲ ಸೃಷ್ಠಿಸಿದರು. ಬಹಳಷ್ಟು ಜನರನ್ನು ಮೂಲೆ ಗುಂಪು ಮಾಡುವ ಕೆಲಸ ಮಾಡುತ್ತಿದ್ದಾರೆ. ಎಸ್ ಎ ರವೀಂದ್ರನಾಥ್, ಮಾಡಾಳ್ ವಿರುಪಾಕ್ಷಪ್ಪ, ಮಾಡಾಳ್ ಮಲ್ಲಿಕಾರ್ಜುನ್, ಗುರುಸಿದ್ದನಗೌಡ ಸೇರಿದಂತೆ ಹಲವು ನಾಯಕರನ್ನು ಮುಗಿಸಿ ಹಾಗಿದೆ. ನಾನು ಎಂಪಿ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ ಬಳಿಕ ನನ್ನನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ, ನನ್ನನ್ನೂ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ, ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದೆ ಎಂದರು.ಪಕ್ಷದಲ್ಲಿ ಸರ್ವಾಧಿಕಾರಿ ಧೋರಣೆ ಖಂಡಿಸಿದ್ದೇನೆ, ವ್ಯವಸ್ಥಿತವಾಗಿ ಮುಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಸಂಸದ ಜಿ. ಎಂ. ಸಿದ್ದೇಶ್ವರ ಅವರ ಹೆಸರು ಹೇಳದೇ ಆರೋಪಿಸಿದರು.