ಹಲಬರ್ಗಾ ಗ್ರಾ.ಪಂ.ಗೆ ಪದ್ಮಿನಿಬಾಯಿ ಅಧ್ಯಕ್ಷೆ

ಭಾಲ್ಕಿ:ಜು.25: ತಾಲ್ಲೂಕಿನ ಹಲಬರ್ಗಾ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಪದ್ಮಿನಿಬಾಯಿ ಶಿವಪಾಲ್ ಸಿಂಗ್ ಠಾಕೂರ್ ಹಾಗೂ ಉಪಾಧ್ಯಕ್ಷೆಯಾಗಿ ಸುವರ್ಣಾ ಸಂತೋಷ ಆಯ್ಕೆಯಾದರು.
ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಏಕೈಕ ನಾಮಪತ್ರ ಸಲ್ಲಿಕೆಯಾಗಿತ್ತು. ಹೀಗಾಗಿ ಪದ್ಮಿನಿಬಾಯಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರಗಳು ಸಲ್ಲಿಕೆಯಾಗಿದ್ದವು. 15 ಸದಸ್ಯರ ಪೈಕಿ 8 ಸದಸ್ಯರ ಬೆಂಬಲದೊಂದಿಗೆ ಸುವರ್ಣಾ ಸಂತೋಷ ಆಯ್ಕೆಗೊಂಡರು.
ಪದ್ಮಿನಿಬಾಯಿ ಎರಡನೇ ಬಾರಿಗೆ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಅ’ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಚುನಾವಣಾಧಿಕಾರಿ ಫಲಿತಾಂಶ ಪ್ರಕಟಿಸುತ್ತಿದ್ದಂತೆಯೇ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಬೆಂಬಲಿಗರು ಪಂಚಾಯಿತಿ ಹೊರಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸದಸ್ಯರು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಹೂಮಾಲೆ ಹಾಕಿ, ಸತ್ಕರಿಸಿದರು.
ಪಿಕೆಪಿಎಸ್ ಅಧ್ಯಕ್ಷ ಹಣಮಂತರಾವ್ ಶ್ರೀಮಾಳೆ, ಉಪಾಧ್ಯಕ್ಷ ಗೋವಿಂದ ಸಿಂಗ್ ಠಾಕೂರ್, ರಮೇಶ ಪ್ರಭಾ, ಧನರಾಜ ಪಾಟೀಲ, ಕಾಶೆಪ್ಪ ಮೂಲಗೆ, ದತ್ತು ಪಾಟೀಲ, ರಾಮಸಿಂಗ್, ಬ್ರಿಜ್‍ಪಾಲ್‍ಸಿಂಗ್, ಗೋರಕ ಶ್ರೀಮಾಳೆ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮದ ಪ್ರಮುಖರು ಇದ್ದರು.