ಹಲಬರ್ಗಾದಲ್ಲಿ 4 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಮಾದರಿ ಶಾಲಾ ಕಟ್ಟಡ

ಭಾಲ್ಕಿ:ಮಾ.16: ತಾಲೂಕಿನ ಹಲಬರ್ಗಾ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಪರ ಕಾಮಗಾರಿಗಳಿಗೆ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು. 2.60 ಕೋಟಿ ರೂ ವೆಚ್ಚದ ಜಲ ಜೀವನ ಮಿಷನ್(ಜೆಜೆಎಂ) ಮತ್ತು 5 ಕೋಟಿ ರೂ ವೆಚ್ಚದಲ್ಲಿ ಹಲಬರ್ಗಾ-ಭಾಲ್ಕಿ ರಸ್ತೆ ಸುಧಾರಣೆ ಕಾಮಗಾರಿಗೆ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ನಂತರ ಗ್ರಾಮಸ್ಥರು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಸಚಿವರು, ಇಲ್ಲಿಯ ಹೋಬಳಿ ಜನರ ಪ್ರೀತಿ ವಿಶ್ವಾಸ ಎಂದಿಗೂ ಮರೆಯುವುದಿಲ್ಲ. ನಮ್ಮ ತಂದೆ, ಅಣ್ಣ ಸೇರಿ ನನ್ನನ್ನು ಸದಾ ಬೆಂಬಲ ನೀಡುತ್ತ ಬಂದಿದ್ದಾರೆ.
ತಮ್ಮೆಲ್ಲರ ಆಶೀರ್ವಾದದಿಂದ ಸತತ ನಾಲ್ಕು ಬಾರಿ ಶಾಸಕನಾಗಿ, ಎರಡು ಅವಧಿಗೆ ಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಜನರ ಸೇವೆ ಎಷ್ಟೇ ಮಾಡಿದರೂ ಕಡಿಮೆ ಅನಿಸುತ್ತದೆ. ಹೀಗಾಗಿ ಹಲಬರ್ಗಾ ಗ್ರಾಮದ ಅಭಿವೃದ್ಧಿಗಾಗಿ ಸುಮಾರು 23 ಕೋಟಿ ರೂ ಅನುದಾನ ನೀಡಿದ್ದೇನೆ. ಶಾಲಾ ಕೋಣೆ, ಕುಡಿಯುವ ನೀರು, ಸಮುದಾಯ ಭವನ, ಕಲ್ಯಾಣ ಮಂಟಪ, ಬಸ್ ಶೆಲ್ಟರ್, ರಸ್ತೆ ಅಭಿವೃದ್ಧಿ ಮುಂತಾದ ಅಭಿವೃದ್ಧಿ ಕೆಲಸಗಳಿಗೆ ಭರಪೂರ ಅನುದಾನ ನೀಡಿದ್ದೇನೆ ಎಂದರು.
ಜತೆಗೆ ಮುಂಬರುವ ದಿನಗಳಲ್ಲಿ ಇಲ್ಲಿಯ ಹೋಬಳಿ ಬಡ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು, ಅಗತ್ಯ ಸೌಲಭ್ಯ ಕಲ್ಪಿಸಲು ಕೆಕೆಆರ್‍ಡಿ ಯೋಜನೆಯಡಿ 4 ಕೋಟಿ ರೂ ಅನುದಾನದಲ್ಲಿ ಸುಸಜ್ಜಿತವಾಗಿ ಸರಕಾರಿ ಮಾದರಿ ಶಾಲಾ ಕಟ್ಟಡ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಜೆಜೆಎಂ ಕಾಮಗಾರಿಗೆ 2.60 ಕೋಟಿ ರೂ ಮತ್ತು ಹಲಬರ್ಗಾ-ಭಾಲ್ಕಿ ರಸ್ತೆ ಸುಧಾರಣೆಗೆ 5 ಕೋಟಿ ರೂ ಅನುದಾನ ನೀಡಲಾಗಿದೆ. ಕಾಲಮಿತಿಯೊಳಗೆ ಈ ಎಲ್ಲ ಕಾಮಗಾರಿಗಳು ಗುಣಮಟ್ಟದಲ್ಲಿ ಅಭಿವೃದ್ಧಿ ಕಾಣಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಸಾನ್ನಿಧ್ಯ ವಹಿಸಿದ ರಾಚೋಟೇಶ್ವರ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರು ಮಾತನಾಡಿ, ತಾಲೂಕು ಸೇರಿ ಜಿಲ್ಲೆಯ ಅಭಿವೃದ್ಧಿಗೆ ಸಚಿವ ಈಶ್ವರ ಖಂಡ್ರೆ ಅವರು ಅವಿರತವಾಗಿ ದುಡಿಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮೀನಿಬಾಯಿ ಠಾಕೂರ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಮಡಿವಾಳಪ್ಪ ಮಂಗಲಗಿ, ಅಶೋಕರಾವ ಸೋನಜಿ, ಶಿವರಾಜ ಹಾಸನಕರ್, ರಮೇಶ ಪ್ರಭಾ, ಬಸವರಾಜ ಸ್ವಾಮಿ, ಪ್ರಕಾಶ ಪ್ರಭಾ, ವೀರಶೆಟ್ಟಿ ಪಾಟೀಲ್, ಕಾಶಪ್ಪ ಮೂಲಗೆ, ಗುತ್ತಿಗೆದಾರ ರಾಜಕುಮಾರ ಬಿರಾದಾರ ಸೇರಿದಂತೆ ಹಲವರು ಇದ್ದರು. ಧನರಾಜ ಮಾಲಿಪಾಟೀಲ್ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು.