ಹಲಬರ್ಗಾದಲ್ಲಿ ಸಿದ್ಧರಾಮೇಶ್ವರ ಜಾತ್ರೆ ನಾಳೆಯಿಂದ

ಬೀದರ್: ಡಿ.31:ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಜ. 1 ರಿಂದ 11 ರ ವರೆಗೆ ಸಿದ್ಧರಾಮೇಶ್ವರ ನಮ್ಮೂರ 11ನೇ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಜಾತ್ರೆ ನಿಮಿತ್ತ ಪ್ರತಿ ದಿನ ಬೆಳಿಗ್ಗೆ ರಾಚೋಟೇಶ್ವರ ಕರ್ತು ಗದ್ದುಗೆಗೆ ರುದ್ರಾಭಿಷೇಕ ಪೂಜೆ, ಸಂಜೆ ಸುಮಂಗಲೆಯರಿಂದ ಗಂಗಾ ಪೂಜೆ, ರಾತ್ರಿ ಧರ್ಮಸಭೆ ಹಾಗೂ ಭಕ್ತರಿಂದ ಹಾವಗಿಲಿಂಗೇಶ್ವರ ಶಿವಾಚಾರ್ಯರ ತುಲಾಭಾರ ಜರುಗಲಿದೆ.
ಸೋಮವಾರ(ಜ.1) ಬೆಳಿಗ್ಗೆ 11ಕ್ಕೆ ಮಠದ ಆವರಣದಲ್ಲಿ ನಿರ್ಮಿಸಿದ ನೂತನ ಶ್ರೀ ಕರಿಬಸವೇಶ್ವರ ಉದ್ಯಾನ ಉದ್ಘಾಟನೆ ಹಾಗೂ ಮಹಾದೇವ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಸಂಜೆ 7.30ಕ್ಕೆ ನಡೆಯುವ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿಬಾಯಿ ಶಿವಪಾಲಸಿಂಗ್ ಠಾಕೂರ್ ಜಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಮಠದ ಪೀಠಾಧಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯ ತಿಳಿಸಿದ್ದಾರೆ.
ಹುಬ್ಬಳ್ಳಿಯ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಹುಲಸೂರಿನ ಶಿವಾನಂದ ಸ್ವಾಮೀಜಿ, ಹಣೆಗಾಂವನ ಶಂಕರಲಿಂಗ ಶಿವಾಚಾರ್ಯ, ಕೌಳಾಸದ ಬಸವಲಿಂಗ ಶಿವಾಚಾರ್ಯ ಸಮ್ಮುಖ ವಹಿಸುವರು ಎಂದು ಹೇಳಿದ್ದಾರೆ.
ಜ.9 ರಂದು ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗತ್ಪಾದರ ಭವ್ಯ ಮೆರವಣಿಗೆ ಜರುಗಲಿದೆ. ಅಂದು ರಾತ್ರಿ ನಡೆಯುವ ಧರ್ಮಸಭೆಯನ್ನು ಅರಣ್ಯ, ಪರಿಸರ, ಜೈವಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಜಾತ್ರಾ ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದ್ದಾರೆ.