
ವಾಡಿ:ಏ.7: ರಂಜಾನ್ ತಿಂಗಳು ಪ್ರತಿಯೊಬ್ಬ ಮುಸ್ಲಿಂರಿಗೆ ಅತ್ಯಂತ ಪವಿತ್ರ ಮಾಸವಾಗಿದ್ದು, ದಿನವೀಡಿ ಆಹಾರ-ನೀರು ಸೇವನೆ ಮಾಡದೇ ಉಪವಾಸ ಮಾಡುವ ಜನರಿಗಾಗಿ ಹಲಕಟ್ಟಾ ದರ್ಗಾದಲ್ಲಿ ನೂರಾರು ಮುಸ್ಲಿಂ ಬಾಂಧವರಿಗೆ ಇಪ್ತಿಯಾರ್ ಕೂಟ ಏರ್ಪಡಿಸಲಾಗಿತ್ತು. ಆಸ್ತಾನ್-ಇ-ಖದೀರಿ ದರ್ಗಾದ ಶರೀಫ್ ಖ್ವಾಜಾ ಸೈಯ್ಯದ್ ಅಬುತುರಾಬ್ ಶಹಾ ಖಾದ್ರಿ ಸಾಮೂಹಿಕ ಇಪ್ತಿಯಾರ್ ಕೂಟದಲ್ಲಿ ಜನರ ನಡುವೆ ಕುಳಿತುಕೊಂಡು ಸರಳತೆಯನ್ನು ಮರೆದರು.
ದರ್ಗಾದ ಶರೀಫ್ ಖ್ವಾಜಾ ಸೈಯ್ಯದ್ ಅಬುತುರಾಬ್ ಶಹಾ ಖಾದ್ರಿ ಮಾತನಾಡಿ, ದೇಶದ ಜನರು ಶಾಂತಿ ಸಹಬಾಳ್ವೆಯಿಂದ ಬಾಳಲಿ ಎನ್ನುವ ಆಶಾಭಾವನೆಯನ್ನು ಪ್ರಾರ್ಥನೆಯಲ್ಲಿ ಬೇಡಿಕೊಳ್ಳಲಾಗುತ್ತದೆ. ಇಸ್ಲಾಂ ಧರ್ಮವು ಸರ್ವ ಜಾತಿ- ಸಮುದಾಯಗಳನ್ನು ಪ್ರೀತಿ ಗೌರವದಿಂದ ಕಾಣುವ ಧರ್ಮವಾಗಿದೆ. ರಂಜಾನ್ ಮಾಸದಲ್ಲಿ ಸಾಮೂಹಿಕ ನಮಾಜ್, ಪ್ರಾರ್ಥನೆ ಮನುಕುಲಕ್ಕೆ ಒಳಿತು ಬಯುಸುವ ದಿನವಾಗಿರುತ್ತದೆ. ಮುಸ್ಲಿಂ ಬಾಂಧವರು ಒಂದು ತಿಂಗಳ ಕಾಲ ಕಠಿಣ ಉಪವಾಸದ ನಂತರ ತರಾಹ್ವೀ ನಮಾಜ್‍ನಲ್ಲಿ ಇಡೀ ಖುರಾನ ಭೋದನೆ ಮಾಡಲಾಗುತ್ತದೆ. ಅಲ್ಲಾಹನ ಅರ್ಕಾನಗಳಾದ ಕಲೀಮಾ, ನಮಾಜ, ರೋಜಾ, ಜಕಾತ, ಹಜ್ಜ ಮತ್ತು ಪ್ರವಾದಿ ಮಹಮ್ಮದರ ಜೀವನ ಶೈಲಿಯಲ್ಲಿ ಜೀವನ ಸಾಗಿಸಲಿ ಎಂದು ಹಾರೈಸಿದರು. ನೂರಾರು ಜನರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ದರ್ಗಾದಲ್ಲಿ ಕವಾಲಿ ಗಾಯನ ಹಾಗೂ ಮುಸ್ಲಿಂ ಧರ್ಮದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.