ಹರ್ ಘರ್ ತಿರಂಗಾ ಅಭಿಯಾನ ಯಶಸ್ವಿಗೊಳಿಸಿ :ಮರತೂರಕರ್

ಕಮಲಾಪೂರ: ಅ.5: ಆಗಸ್ಟ್ 13 ರಿಂದ 15 ರವರೆಗೆ ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ಹರ್ ಘರ್ ತಿರಂಗಾ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಅವರು ಕರೆ ನೀಡಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸಿ ಇಡೀ ದೇಶಕ್ಕೆ ಮಾದರಿಯಾಗಲು ದೇಶದ ಜನತೆಗೆ ಇದೊಂದು ಸದಾವಕಾಶ ಎಂದು ಅವರು ಬಣ್ಣಿಸಿದ್ದಾರೆ.ರಾಷ್ಟ್ರದೆಲ್ಲೆಡೆಯಂತೆ, ರಾಜ್ಯದಲ್ಲಿಯೂ ಆಗಸ್ಟ್ 13 ರಿಂದ 15 ರವರೆಗೆ ಹರ್ ಘರ್ ತಿರಂಗಾ ಅಂದರೆ ಮನೆ ಮನೆಯ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಅಭಿಯಾನವನ್ನು ಆಯೋಜಿಸಲಾಗಿದೆ. ಭಾರತ ಸ್ವಾತ್ರಂತ್ಯ ಅಮೃತ ಮಹೋತ್ಸವದ ಸಂಸ್ಮರಣೆಯಲ್ಲಿ ಈ ಅವಧಿಯಲ್ಲಿ ಹಗಲು ರಾತ್ರಿ ಎನ್ನದೆ ಮೂರು ದಿನಗಳ ಕಾಲ ಇಡೀ ರಾಷ್ಟ್ರದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಲು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ಅದರಂತೆ ಈ ಅಭಿಯಾನಕ್ಕೆ ಕರ್ನಾಟದಲ್ಲೂ ಪೂರ್ಣ ಪ್ರಮಾಣದ ಸ್ಪಂದನೆ ದೊರೆಯಬೇಕೆಂಬುದು ರಾಜ್ಯ ಸರ್ಕಾರದ ಸದಾಶಯವಾಗಿದೆ.ಭಾರತದ ಎಲ್ಲಾ ಪ್ರಜೆಗಳಲ್ಲೂ ರಾಷ್ಟ್ರ ಪ್ರೇಮ ಮತ್ತು ರಾಷ್ಟ್ರಭಕ್ತಿಯನ್ನು ಇಮ್ಮಡಿಗೊಳಿಸುವ ಈ ಅಭಿಯಾನದಲ್ಲಿ ಸಾರ್ವಜನಿಕರೂ ಕೂಡಾ ಕೈಮಗ್ಗ ಅಥವಾ ವಿದ್ಯುತ್ ಮಗ್ಗದಿಂದ ಹತ್ತಿ, ಪಾಲಿಯೆಸ್ಟರ್, ಉಣ್ಣೆ ರೇಷ್ಮೆ, ಅಥವಾ ಖಾದಿಯಲ್ಲಿ ತಯಾರಿಸಿರುವ ರಾಷ್ಟ್ರ ಧ್ವಜವನ್ನು ಆಗಸ್ಟ್ 13ರಿಂದ 15 ರವರೆಗೆ ಮೂರು ದಿನಗಳ ಅವಧಿಯಲ್ಲಿ ರಾಜ್ಯಾದ್ಯಂತ ಇರುವ ಕೋಟಿಗೂ ಹೆಚ್ಚು ಮನೆಗಳ ಮೇಲೆ ಹಾರಿಸಿ ದೇಶ ಪ್ರೇಮ ಮೆರೆಯಬೇಕೆಂಬುದು ರಾಜ್ಯ ಸರ್ಕಾರದ ಇಚ್ಛೆಯಾಗಿದೆ. ಆದಕಾರಣ, ತಮ್ಮ ಮನೆಗಳ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸುವಂತೆ ಮರತೂರಕರ್ ಸಾರ್ವಜನಿಕರಲ್ಲಿ ವಿಶೇಷ ಮನವಿ ಮಾಡಿದ್ದಾರೆ.