ಹರ್ ಘರ್ ತಿರಂಗಾ ಅಭಿಯಾನ:ಭಾಗವಹಿಸಲು ಕರೆ

ವಿಜಯಪುರ, ಜು. ೧೮: ದೇಶದಾದ್ಯಂತ ಸ್ವಾತಂತ್ರ್ಯದ ೭೫ರ ಸಂಭ್ರಮದ ಪ್ರಯುಕ್ತ ಕೇಂದ್ರ ಸರ್ಕಾರವು ಹರ್ ಘರ್ ತಿರಂಗಾ ಎಂಬ ಘೋಷ ವಾಕ್ಯದೊಂದಿಗೆ ಆಗಸ್ಟ್ ೧೧ರಿಂದ ೧೭ರವರೆಗೆ ದೇಶದ ಪ್ರತಿ ಮನೆ ಮನೆಯಲ್ಲೂ ರಾಷ್ಟ್ರಧ್ವಜವನ್ನು ಹಾರಿಸಿ ದೇಶಭಕ್ತಿಯನ್ನು ಅಭಿವ್ಯಕ್ತಗೊಳಿಸಲು ಹರ್ ಘರ್ ತಿರಂಗಾ ಅಭಿಯಾನವನ್ನು ಆಯೋಜಿಸಿದ್ದು, ಜಿಲ್ಲೆಯ ಎಲ್ಲಾ ನಾಗರಿಕರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.
ಹರ್ ಫರ್ ತಿರಂಗಾ ಅಭಿಯಾನದಲ್ಲಿ ರಾಜ್ಯ ಸರ್ಕಾರದ ಸರ್ಕಾರಿ, ಅರೆ ಸರಕಾರಿ, ನಿಗಮ, ಮಂಡಳಿ, ಸಾರ್ವಜನಿಕ ಉದ್ಯಮಗಳು, ಸ್ವಸಹಾಯ ಗುಂಪುಗಳು, ನಾಗರಿಕ ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಇತರೆ ಎಲ್ಲಾ ಸಿಬ್ಬಂದಿ ಮತ್ತು ಸಾರ್ವಜನಿಕರು ಅವರ ಕುಟುಂಬ ವರ್ಗದವರು ಸೇರಿದಂತೆ ಎಲ್ಲರೂ ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕು. ಆ ಮೂಲಕ ತಮ್ಮ ರಾಷ್ಟ್ರ ಪ್ರೇಮವನ್ನು ಮೆರೆಯಬೇಕು.
ಗೃಹ ವ್ಯವಹಾರಗಳ ಮಂತ್ರಾಲಯವು ಧ್ವಜ ಸಂಹಿತೆ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಕೈಯಲ್ಲಿ ತಯಾರಿಸಿದ ರಾಷ್ಟ್ರೀಯ ಧ್ವಜ ಅಥವಾ ಯಂತ್ರದಿಂದ ತಯಾರಿಸಿದ ಪಾಲಿಸ್ಟರ್, ಹತ್ತಿ, ಉಣ್ಣೆ ರೇಷ್ಮೆ, ಖಾದಿ ಬಟ್ಟೆಯಿಂದ ತಯಾರಿಸುವ ರಾಷ್ಟ್ರೀಯ ಧ್ವಜವನ್ನು ಹಾರಿಸಬಹುದಾಗಿದೆ.
ರಾಷ್ಟ್ರೀಯ ಧ್ವಜದ ಅಳತೆಯು ೨೦/೩೦ ಅಥವಾ ಈ ಅಳತೆಯ ಅರ್ಧದಷ್ಟು ಸಹ ಆಗಿರಬಹುದೆಂದು ಕೇಂದ್ರ ಸರಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ರಾಷ್ಟ್ರಧ್ವಜಗಳ ಹಂಚಿಕೆ ಮತ್ತು ಮಾರಾಟ ಮಾಡುವ ಸ್ಥಳಗಳನ್ನು ಗ್ರಾಮಮಟ್ಟದಲ್ಲಿ ಗ್ರಾಮ ಪಂಚಾಯಿತಿ ಮತ್ತು ನಗರ ಪ್ರದೇಶಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಗುರುತಿಸಬೇಕು. ನ್ಯಾಯಬೆಲೆ ಅಂಗಡಿಗಳನ್ನು ಸಹ ಧ್ವಜಗಳ ವಿತರಣೆ, ಮಾರಾಟದ ಕೇಂದ್ರವಾಗಿ ಉಪಯೋಗಿಸಿಕೊಳ್ಳಬಹುದು.
ಎಲ್ಲ ಸರಕಾರಿ ಕಚೇರಿ ಹಾಗೂ ಶಾಲಾ-ಕಾಲೇಜುಗಳು ಹರ್ ಘರ್ ತಿರಂಗಾ ಅಭಿಯಾನ ಕುರಿತು ಕೈಗೊಂಡ ಕ್ರಮದ ಬಗ್ಗೆ ಛಾಯಾಚಿತ್ರ ಸಹಿತ ಅನುಪಾಲನಾ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.