’ಹರ್‌ಘರ್ ನಳ್ ಯೋಜನೆಗೆ ಪ್ರಧಾನಿ ಚಾಲನೆ


ನವದೆಹಲಿ, ನ.೨೨- ಉತ್ತರಪ್ರದೇಶದ ವಿಂದ್ಯಾ ವಲಯದ ಸೋನಭದ್ರ ಮತ್ತು ಮಿರ್ಜಾಪುರ್ ಜಿಲ್ಲೆಯ ೪೧ ಲಕ್ಷ ಹಳ್ಳಿಗರ ಪ್ರತಿ ಮನೆಗೂ ಕೊಳವೆ ಮೂಲಕ ನೀರು ಸೌಲಭ್ಯ ಕಲ್ಪಿಸುವ “ಹರ್ ಘರ್ ನಳ್ ಯೋಜನೆ”ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ.
ಸರಿಸುಮಾರು ೫,೫೫೫.೩೮ ಕೋಟಿ ರೂಪಾಯಿ ಮೊತ್ತದ ಯೋಜನೆ ೨ ಜಿಲ್ಲೆಗಳಿಗೆ ಮಾತ್ರ ಅನ್ವಯವಾಗಲಿದೆ.
ಸೋನಾ ಭದ್ರ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಾಲ್ಗೊಂಡಿದ್ದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರತಿ ಮನೆಗೆ ಮೂಲಕ ನೀರು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು.
ಸೋನಭದ್ರ ಮತ್ತು ಮಿರ್ಜಾಪುರ್ ಜಿಲ್ಲೆಗಳ ೨೯೯೫ ಹಳ್ಳಿಗಳಿಗೆ ಕುಡಿಯುವ ನೀರು ಸೌಲಭ್ಯ ಕಲ್ಪಿಸಲು ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್, ಸ್ವಾತಂತ್ರ್ಯ ಬಂದು ಇಲ್ಲಿಯತನಕ ಕೇವಲ ೩೯೮ ಹಳ್ಳಿಗಳಿಗೆ ಮಾತ್ರ ಕೊಳವೆ ಮೂಲಕ ನೀರು ಸೌಲಭ್ಯ ಕಲ್ಪಿಸಲಾಗಿತ್ತು ಜಲ ಜೀವನ ಮಿಷನ್ ಯೋಜನೆಯಡಿ ಹರ್ ಘರ್ ನಳ್ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು ಎರಡು ಜಿಲ್ಲೆಗಳಲ್ಲಿ ೨೯೯೫ ಹಳ್ಳಿಗಳಿಗೆ ಈ ಸೌಲಭ್ಯ ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಿರ್ಜಾಪುರ ಜಿಲ್ಲೆಯ ೨೧ ಲಕ್ಷದ ೮೭ ಸಾವಿರದ ೯೮೦ ಕುಟುಂಬಗಳಿಗೆ ಹಾಗೂ ಸೋನಭದ್ರ ಜಿಲ್ಲೆಯಲ್ಲಿ ೧೯ ಲಕ್ಷದ ೫೩ ಸಾವಿರದ ೪೫೮ ಕುಟುಂಬಗಳಿಗೆ ಅನುಕೂಲವಾಗಲಿದ್ದು ಎಲ್ಲರಿಗೂ ಶುದ್ಧ ಕುಡಿಯುವ ನೀರು ಕಲ್ಪಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿ ಮನೆಗೆ ಕೊಳವೆ ಮೂಲಕ ನೀರು ಕಲ್ಪಿಸುವ ಯೋಜನೆಗೆ ಸೋನಾ ಭದ್ರ ಜಿಲ್ಲೆಯಲ್ಲಿ ೩೨೧೩.೧೮ ಕೋಟಿ, ಮಿರ್ಜಾಫುರ್ ಜಿಲ್ಲೆಯಲ್ಲಿ ೨೩೪೩.೨೦ ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಜಲ ಶಕ್ತಿ ಸಚಿವಾಲಯ ೪೧,೪೧,೪೩೮ ಕುಟುಂಬಗಳಿಗೆ ಈ ಎರಡು ಜಿಲ್ಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಮುಂದಾಗಿದೆ ಮುಂದಿನ ಎರಡು ವರ್ಷಗಳಲ್ಲಿ ಪ್ರತಿ ಮನೆಗೆ ನೀರು ಪೂರೈಕೆಯಾಗಲಿದೆ