ಹರ್ಡೇಕರ ಮಂಜಪ್ಪನವರ ಕೊಡುಗೆ ಅವಿಸ್ಮರಣೀಯ

ಕಲಬುರಗಿ:ಜ.2: ಹರ್ಡೇಕರ ಮಂಜಪ್ಪನವರು ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ ಅನುಯಾಯಿಯಾಗಿ, ಕರ್ನಾಟಕದಲ್ಲಿ ಅವುಗಳನ್ನು ಜಾರಿಗೊಳಿಸುವ ಮೂಲಕ ‘ಕರ್ನಾಟಕದ ಗಾಂಧಿ’ಯಾಗಿದ್ದಾರೆ. ಶರಣ ಜೀವಿ, ಸಮಾಜ ಸುಧಾರಕ, ಸ್ವಾತಂತ್ರ ಹೋರಾಟಗಾರ, ಲೇಖಕರಾಗಿ ಅವರು ನೀಡಿದ ಬಹುಮುಖ ಕೊಡುಗೆ ತುಂಬಾ ಅವಿಸ್ಮರಣೀಯವಾಗಿದೆಯೆಂದು ಉಪನ್ಯಾಸಕ, ಶರಣ ಚಿಂತಕ ಎಚ್.ಬಿ.ಪಾಟೀಲ ಹೇಳಿದರು.

ಅವರು ನಗರದ ಜಗತ್ ಬಡಾವಣೆಯಲ್ಲಿರುವ ಶ್ರೀ ಮೈಲಾರಲಿಂಗೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಹಮ್ಮಿಕೊಂಡ ಹರ್ಡೇಕರ ಮಂಜಪ್ಪನವರ ಸ್ಮರಣೋತ್ಸವ’ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಮಾತನಾಡುತ್ತಿದ್ದರು.

ಮಂಜಪ್ಪನವರು ಶರಣ ತತ್ವಗಳನ್ನು ಅನುಷ್ಠಾನಗೊಳಿಸುವಲ್ಲಿ ಸಾಕಷ್ಟು ಶ್ರಮಿಸಿದರು. ಜಾತಿ ಪದ್ಧತಿಯ ನಾಶ, ಮೂಢನಂಬಿಕೆ, ಅಂಧಶೃದ್ಧೆಯ ನಿರ್ಮೂಲನೆಯಂತಹ ಅನೇಕ ಸಾಮಾಜಿಕ ಸುಧಾರಣೆಗಳನ್ನು ತರಲು ಪ್ರಯತ್ನಿಸಿದರು. ಪ್ರಥಮ ಬಾರಿಗೆ ಬಸವ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸಲು ಆರಂಭಿಸಿದರೆಂದು ಅವರ ಜೀವನ, ಕೊಡುಗೆಯನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಸುನೀಲಕುಮಾರ ವಂಟಿ, ನರಸಪ್ಪ ಬಿರಾದಾರ ದೇಗಾಂವ, ಬಸವರಾಜ ಎಸ್.ಪುರಾಣೆ, ದೇವೇಂದ್ರಪ್ಪ ಗಣಮುಖಿ, ವೀರಭದ್ರಪ್ಪ ಪಸಾರ್, ವಿಜಯಕುಮಾರ ಪೋಮಾಜಿ, ಎಸ್.ಎಸ್.ಹೂಗಾರ ಸೇರಿದಂತೆ ಮತ್ತಿತರರಿದ್ದರು.