ಹರಿಹರ; ವಿವಿಧೆಡೆ ಆಟೋ ನಿಲ್ದಾಣ ನಿರ್ಮಾಣ

ಹರಿಹರ.ಜ.೧೦; ನಗರದ ವಿವಿಧೆಡೆ ಆಟೋ ನಿಲ್ದಾಣ ನಿರ್ಮಾಣದ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತ ಉದಯಕುಮಾರ್  ಪರಿಶೀಲನೆ ನಡೆಸಿದರು.ಗಾಂಧಿ ವೃತ್ತ ಹಾಗೂ ಬಸ್ ನಿಲ್ದಾಣ ರಸ್ತೆಯ ನಿಲ್ದಾಣಗಳಿಗೆ ಭೇಟಿ ನೀಡಿದ ಪೌರಾಯುಕ್ತರು ಆಟೋ ನಿಲ್ದಾಣದ ನಿರ್ಮಾಣ ಕಾರ್ಯದ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು.
ಆಟೋ ಚಾಲಕರ ಹಾಗೂ ಮಾಲಿಕರ ಸಂಘದ ಗೌರವಾಧ್ಯಕ್ಷ ಸಿದ್ಧಲಿಂಗಸ್ವಾಮಿ ಮಾತನಾಡಿ, ಸತತವಾಗಿ ಒಂದು ದಶಕದಿಂದ ಸಂಘದಿಂದ ಆಟೋ ನಿಲ್ದಾಣ ನಿರ್ಮಾಣಕ್ಕೆ ನಗರಸಭೆ, ಶಾಸಕರಿಗೆ ಮನವಿ ನೀಡುತ್ತಾ ಬಂದಿದ್ದೇವೆ. ಆದರೆ ನಮ್ಮ ಅಳಲನ್ನು ಯಾರೂ ಕೇಳುತ್ತಿಲ್ಲ.ಬಡವರಾದರೂ ಸ್ವಂತ ದುಡಿಮೆಯಿಂದ ಜೀವನ ನಡೆಸುವ ಚಾಲಕರಿಗೆ ಸುಸಜ್ಜಿತ ನಿಲ್ದಾಣ ನಿರ್ಮಿಸಿಕೊಡುವುದು ಸ್ಥಳೀಯ ಆಡಳಿತದ ಕರ್ತವ್ಯವಾಗಿದೆ. ಈವರೆಗಿನ ಯಾವ ಅಧಿಕಾರಿಯೂ ಈ ಕುರಿತು ಗಮನ ಹರಿಸಿಲ್ಲ. ನಿಮ್ಮ ಅವಧಿಯಲ್ಲಿ ಈ ಬೇಡಿಕೆ ಈಡೇರಿಸಿ ಎಂದು ಆಗ್ರಹಿಸಿದರು.ಪ್ರತಿಕ್ರಿಯಿಸಿದ ಪೌರಾಯುಕ್ತರು, ಆಟೋ ನಿಲುಗಡೆಯಲ್ಲಿ ಒಂದು ಶಿಸ್ತು ಮೂಡಿಸುವುದು ನಗರ ಸೌಂದರ್ಯ ದೃಷ್ಟಿಯಿಂದಲೂ ಅಗತ್ಯವಾಗಿದೆ. ಅನುದಾನದ ಕೊರತೆ ಇದೆ. ಆದರೂ ಕೂಡ ಎಷ್ಟು ಸಾಧ್ಯವೋ ಅಷ್ಟು ನಿಲ್ದಾಣಗಳನ್ನು ನಿರ್ಮಿಸುತ್ತೇವೆ. ಹಂತ, ಹಂತವಾಗಿ ಎಲ್ಲಾ ಅಧಿಕೃತ ನಿಲ್ದಾಣಗಳಲ್ಲೂ ಚಾವಣಿ, ಇತರೆ ಸೌಕರ್ಯಗಳನ್ನು ರೂಪಿಸಲಾಗುವುದೆಂದರು.ನಗರ ಠಾಣೆ ಪಿಎಸ್‌ಐ ಬಸವರಾಜ್ ತೇಲಿ, ಸಂಘದ ಅಧ್ಯಕ್ಷ ಮೋಹನ್ ಗೌಡಗೇರಿ, ಉಪಾಧ್ಯಕ್ಷ ನಾಗರಾಜ್ ಬೆಂಕಿ, ಕಾರ್ಯದರ್ಶಿ ತಿಪ್ಪೇಶ್, ಮನು, ಕುಮಾರ್, ನಗರಸಭೆ ಎಇ ಅಬ್ದುಲ್ ಹಮೀದ್ ಇತರರಿದ್ದರು.