ಹರಿಹರ ಕ್ಷೇತ್ರದಲ್ಲಿ ಪ್ರಭಾ ಮಲ್ಲಿಕಾರ್ಜುನ್  ಪ್ರಚಾರ

 ಸಂಜೆವಾಣಿ ವಾರ್ತೆ

ಹರಿಹರ.ಏ.೧೪: ಹರಿಹರ ತಾಲ್ಲೂಕಿನ ಕೊಂಡಜ್ಜಿ ಸೇರಿದಂತೆ ಪಾರಂಪರಿಕ ಕ್ಷೇತ್ರಗಳನ್ನು ಸಮರ್ಪಕವಾಗಿ ಅಭಿವೃದ್ಧಿ ಮಾಡಿ ಇಡೀ ವಿಶ್ವವೇ ಹರಿಹರ ಕ್ಷೇತ್ರದತ್ತ ಮುಖಮಾಡುವಂತೆ ಮಾಡಲಾಗುವುದು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ತಿಳಿಸಿದರು.ಶನಿವಾರದಂದು ಹರಿಹರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದಿಂದ ಪ್ರಚಾರ ಕಾರ್ಯ ಆರಂಭಿಸಿದ ಪ್ರಭಾ ಮಲ್ಲಿಕಾರ್ಜುನ್ ಅವರು ಕೊಂಡಜ್ಜಿ, ಬುಳ್ಳಾಪುರ, ಕೆಂಚನಹಳ್ಳಿ, ಹೊಟ್ಟಿಗೇನಹಳ್ಳಿ, ಕುರುಬರಹಳ್ಳಿ, ಕರಲಹಳ್ಳಿ, ಸಾರಥಿ, ದಿಟೂರ್, ಗಂಗನರಸಿ, ಹನಗವಾಡಿ, ನಾಗೇನಹಳ್ಳಿ, ಹಲಸಬಾಳು, ರಾಜನಹಳ್ಳಿ, ಬಿಳಸನೂರು, ನಂದಿಗಾವಿ,ಧೂಳೆಹೊಳೆ, ಎಳೆಹೊಳೆ, ಮಳಲಹಳ್ಳಿ ಗ್ರಾಮಗಳಲ್ಲಿ ಪ್ರಚಾರ ನಡೆಸಿ ಮತದಾರರನ್ನುದ್ದೇಶಿಸಿ ಮಾತನಾಡಿದರು.ಹರಿಹರ ತಾಲ್ಲೂಕಿನಲ್ಲಿ ಕೊಂಡಜ್ಜಿ ಕೆರೆ ಸೇರಿದಂತೆ ಕೊಂಡಜ್ಜಿಯನ್ನು ಪ್ರವಾಸಿ ತಾಣವನ್ನಾಗಿಸಲಾಗುವುದು. ಹನಗವಾಡಿ ಕೈಗಾರಿಕೆ ಪ್ರದೇಶ ಮತ್ತು ಸಾರಥಿ-ಕುರುಬರಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ಬೆಳಗಾವಿ ಮತ್ತು ಕೊಯಂಬತ್ತೂರು ಕೈಗಾರಿಕೆ ಪ್ರದೇಶದಂತೆ ಅಭಿವೃದ್ಧಿ ಪಡಿಸಲಾಗುವುದು ಎಂದರು.ಇನ್ನು ನೆನೆಗುದಿಗೆ ಬಿದ್ದಿರುವ ಕೊನೆಭಾಗಕ್ಕೆ ನೀರು ತಲುಪಿಸುವ ಹಾಗೂ ರಸಗೊಬ್ಬರ ಕಾರ್ಖಾನೆಯನ್ನು ಮತ್ತು ಎಥೆನಾಲ್ ಉತ್ಪಾದನಾ ಘಟಕವನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು.ಈ ಮೂಲಕ ಹರಿಹರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ರಾಮಪ್ಪ,  ವಾಗೀಶ್‌ಸ್ವಾಮಿ, ಎಂ.ಎನ್ ನಾಗೇಂದ್ರಪ್ಪ, ನಗರಸಭೆ ಮಾಜಿ ಅಧ್ಯಕ್ಷ ರೇವಣಸಿದ್ದಪ್ಪ, ಹರಿಹರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಲ್ ಬಿ ಹನುಮಂತಪ್ಪ, ಮಲೆಬೆನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹಬೀದ್ ಅಲೀ, ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷರಾದ ಕುಮಾರ್, ಸಿ.ಎನ್.ಹುಲಿಗೇಶ್, ನಿಖಿಲ್ ಕೊಂಡಜ್ಜಿ ಇತರರಿದ್ದರು.