ಹರಿಹರದಲ್ಲಿ ರೂ.60 ಲಕ್ಷ ವೆಚ್ಚದ ಆಕ್ಸಿಜನ್ ಪ್ಲಾಂಟ್ ನಿರ್ಮಾಣ

ದಾವಣಗೆರೆ,ಜೂ.1; ಹರಿಹರ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯವಿರುವ ಆಮ್ಲಜನಕ ಉತ್ಪಾದನೆ ಘಟಕ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜ ಅವರ ನೇತೃತ್ವದಲ್ಲಿ ಸಂಸದರಾದ ಡಾ.ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಬಿಪಿ ಹರೀಶ್, ಶಾಸಕ ಎಸ್ ರಾಮಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಅವರು ಆಸ್ಪತ್ರೆ ಆವರಣದಲ್ಲಿ ಇಂದು ಗುದ್ದಲಿ ಪೂಜೆ ನೆರವೇರಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ಹರಿಹರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ 60 ಲಕ್ಷ ರೂ ವೆಚ್ಚದ ಆಮ್ಲಜನಕ ಉತ್ಪಾದನಾ ಘಟಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದ್ದು, ಇನ್ನೂ 15 ದಿನದೊಳಗಾಗಿ ಕಾಮಗಾರಿ ಪೂರ್ಣಗೊಳುತ್ತದೆ ಎಂದು ತಿಳಿಸಿದರು.
ಲೋಕಸಭಾ ಸದಸ್ಯರ ಪುತ್ರ ಜಿ.ಎಸ್.ಅನಿತ್ ಅವರು 60 ಲಕ್ಷ ರೂ. ವೆಚ್ಚದ ಆಮ್ಲಜನಕ ಉತ್ಪಾದನೆ ಘಟಕವನ್ನು ಹರಿಹರಕ್ಕೆ ಕೊಡುಗೆ ನೀಡಿದಲ್ಲದೆ, ಇದುವರೆಗೂ 3 ವಿಧಾನಸಭೆಗಳಾದ ಹರಿಹರ, ಹರಪನಹಳ್ಳಿ, ಚಿತ್ರದುರ್ಗ ಕ್ಷೇತ್ರಗಳಲ್ಲಿ ಮೂರು ಆಮ್ಲಜನಕ ಉತ್ಪಾದನಾ ಘಟಕಕ್ಕೆ ಒಟ್ಟು 1.80 ಲಕ್ಷ ರೂ ವೆಚ್ಚ ಭರಿಸಿರುವುದು ಶ್ಲಾಘನೀಯ. ಅಲ್ಲದೇ ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ್ ಅವರು ತಮ್ಮ ಹುಟ್ಟು ಹಬ್ಬದ ದಿನದಂದೆ ಉಚಿತವಾಗಿ ಆಂಬ್ಯುಲೆನ್ಸ್ ನೀಡಿ ಮಾನವೀಯತೆ ಮೆರೆದಿದ್ದಾರೆ ಎಂದು ಅವರನ್ನು ಅಭಿನಂದಿಸಿದರು.
ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಮಾತನಾಡಿ,  ಪ್ರತಿನಿತ್ಯ ಆಸ್ಪತ್ರೆಯಲ್ಲಿರುವ ಸುಮಾರು 60-70 ಕೋವಿಡ್ ರೋಗಿಗಳಿಗೆ ಆಮ್ಲಜನಕ ಪೂರೈಕೆಯಾಗುತ್ತದೆ.ಮೊದಲು ಜಗಳೂರು ತಾಲ್ಲೂಕಿನಲ್ಲಿ ಆಮ್ಲಜನಕ ಉತ್ಪಾದನೆ ಘಟಕ ಪ್ರಾರಂಭಿಸಬೇಕೆಂದಿದ್ದು, ಅಲ್ಲಿ ವಿಂಡ್ ಮಿಲರ್ ಸ್ಥಾಪನೆ ಆದ ಕಾರಣ ಆಕ್ಸಿಜನ್ ಘಟಕವನ್ನು ಹರಿಹರದಲ್ಲಿ ಸ್ಥಾಪಿಸಲಾಯಿತು. ಇಲ್ಲಿ ಆಕ್ಸಿಜನ್ ಘಟಕ ತೆರೆಯಬೇಕು ಎಂಬ ಉದ್ದೇಶದಿಂದ ನನ್ನ ಮಗ ಅನಿತ್ ವೆಸ್ಟ್ ಬೆಂಗಾಲ್ ದೇಶದಿಂದ ತರಿಸಿದ್ದಾನೆ. ಇದರೊಂದಿಗೆ ಹರಪನಹಳ್ಳಿ, ಚಿತ್ರದುರ್ಗ ದಲ್ಲಿಯೂ ಆಕ್ಸಿಜನ್ ಘಟಕ ತೆರೆಯಲಾಗಿದೆ. ಇದರ ಉಪಯುಕ್ತತೆಯನ್ನು ಸಾವರ್ಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ,  ಮಾಜಿ ಶಾಸಕ ಬಿ.ಪಿ.ಹರೀಶ್  ಹಾಜರಿದ್ದರು.