ಹರಿಯಾಣ ಹಿಂಸಾಚಾರ ೬ ಮಂದಿ ಸಾವು:ಕಟ್ಟರ್

ಚಂಡೀಘಡ,ಆ.೨:ಹರಿಯಾಣದಲ್ಲಿ ಸಂಭವಿಸಿದ ಕೋಮು ಹಿಂಸಾಚಾರದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು ೬ ಮಂದಿ ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಮನೋಹರ್‌ಲಾಲ್ ಕಟ್ಟರ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ೧೧೬ ಮಂದಿಯನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನುಹ್‌ನಲ್ಲಿ ಸಂಭವಿಸಿದ ಘರ್ಷಣೆ ಇತರ ಪ್ರದೇಶಗಳಿಗೆ ವ್ಯಾಪಿಸದಂತೆ ನಿಯಂತ್ರಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಗುರುಗ್ರಾಮದ ವಿವಿಧ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಇತರ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿದ್ದು, ಘಟನೆಯಲ್ಲಿ ನಾಲ್ವರು ನಾಗರಿಕರು ಸಾವನ್ನಪ್ಪಿದ್ದಾರೆ. ಹಿಂಸಾಚಾರದಲ್ಲಿ ತೊಡಗಿದ್ದ ಆರೋಪಿಗಳನ್ನು ಪತ್ತೆ ಹಚ್ಚಲಾಗಿದ್ದು, ಅವರ ವಿರುದ್ಧ ಕಠಿಣ ಕ್ರಮಕೈಗೊಂಡು ಸಾಮಾನ್ಯ ಜನತೆಗೆ ಭದ್ರತೆ ಒದಗಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಅವರು ಭರವಸೆ ನೀಡಿದ್ದಾರೆ.ಗಲಭೆ ಫೀಡಿತ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿ ಸೇರಿದಂತೆ ೨೦ ಕಂಪನಿಗಳ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಅವರು ಮನವಿ ಮಾಡಿದ್ದಾರೆ.ನುಹ್‌ನಲ್ಲಿ ವಿಹೆಚ್ ಮೆರವಣಿಗೆಯಲ್ಲಿ ನಡೆದ ಹಿಂಸಾಚಾರ ಅತ್ಯಂತ ದುರದೃಷ್ಟಕರ ಘಟನೆ ಎಂದು ಕಟ್ಟರ್ ವಿಷಾಧ ವ್ಯಕ್ತಪಡಿಸಿದ್ದರು.
ಈ ಮಧ್ಯೆ ಮಣಿಪುರ ಹಿಂಸಾಚಾರ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿರುವ ಇಂಡಿಯಾ ಒಕ್ಕೂಟ ಇದೀಗ ಗುರುಗ್ರಾಮದಲ್ಲಿ ನಡೆದ ಹಿಂಸಾಚಾರ ಪ್ರಕರಣವನ್ನು ಮುಂದಿಟ್ಟುಕೊಂಡು ಇಂಡಿಯಾ ಮೈತ್ರಿಕೂಟ ಹೋರಾಟ ಆರಂಭಿಸಿದೆ.